A high-level meeting was held in Krishna today to curb the menace of micro-finance

ಬೆಂಗಳೂರು, ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ನಿವಾರಣೆ ಹಾಗೂ ಮೈಕ್ರೋ ಫೈನಾನ್ಸ್‌ಗಳ ಹಾವಳಿಗೆ ಕಡಿವಾಣ ಹಾಕುವ ಸಂಬಂಧ ಇಂದು ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಮುಖ್ಯಾಂಶಗಳು:
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ತಪ್ಪಿಸುವ ಉದ್ದೇಶದಿಂದ ರಚಿಸಲಾಗಿರುವ ಸುಗ್ರೀವಾಜ್ಞೆಯಲ್ಲಿನ ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಬಲಿಷ್ಠ ಕಾಯ್ದೆಯನ್ನು ಆದಷ್ಟು ಬೇಗನೆ ಜಾರಿ ಮಾಡಲಾಗುವುದು. ಈ ಕುರಿತು ಕಾನೂನು ಇಲಾಖೆ, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ.
ಕಾಯ್ದೆ ಸಂಪೂರ್ಣ ಸಂವಿಧಾನ ಬದ್ಧವಾಗಿದ್ದು, ಯಾವುದೇ ಲೋಪದೋಷಗಳನ್ನು ಹೊಂದಿರಬಾರದು.
ಸಾಲಗಾರರು ಎದುರಿಸುತ್ತಿರುವ ಕಿರುಕುಳವನ್ನು ತಪ್ಪಿಸಲು ಹಾಗೂ ಸಾಲ ನೀಡಿದವರು ಬಲವಂತದ ವಸೂಲಿ ಮಾಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಬಲಿಷ್ಠ ಕಾಯ್ದೆ ರಚಿಸಲಾಗುವುದು.
ಕಾಯ್ದೆಯಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ದೊರೆಯಲಿದೆ. ಒಂಬುಡ್ಸ್‌ಮೆನ್ ಗಳ ನೇಮಕ ಮಾಡಲಾಗುವುದು. ಅಮಾನವೀಯವಾಗಿ ಬಲವಂತದ ಸಾಲ ವಸೂಲಾತಿ ಮಾಡುವವರಿಗೆ ಜಾಮೀನುರಹಿತ ಪ್ರಕರಣ ದಾಖಲು ಸೇರಿದಂತೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶ ಸಿಗುವಂತೆ ಕಾನೂನು ರೂಪಿಸಲಾಗುವುದು.
ನೋಂದಣಿಯಾಗದ ಲೇವಾದೇವಿಗಾರರ ಕಿರುಕುಳವನ್ನು ತಪ್ಪಿಸಲು ಕಠಿಣ ಕಾನೂನು ಜಾರಿ ಮಾಡಲಾಗುವುದು.
ಪ್ರಸ್ತುತವಿರುವ ಕಾನೂನಿನಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ನಿಯಂತ್ರಿಸಲು ಹಲವು ಅವಕಾಶಗಳಿದ್ದು, ತಾತ್ಕಾಲಿಕವಾಗಿ ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದು, ಸಂತ್ರಸ್ತರು ದೂರು ದಾಖಲು ಮಾಡುವ ತನಕ ಕಾಯದೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು.