Child protection operation in Devadurga taluk: Rescue of 22 more children, case filed against farm owner

ರಾಯಚೂರ ಜನವರಿ 13 (ಕ.ವಾ.): ಶಾಲೆ ಬಿಡಿಸಿ ಹೊಲಕ್ಕೆ ಕರೆದೊಯ್ಯುವ ಮಕ್ಕಳನ್ನು ರಕ್ಷಿಸುವ ಕಾರ್ಯಾಚರಣೆಯು ದೇವದುರ್ಗ ತಾಲೂಕಿನಲ್ಲಿ ಬಿರುಸುಗೊಂಡಿದ್ದು, ಜನವರಿ 13ರಂದು ಮತ್ತೆ 22 ಮಕ್ಕಳನ್ನು ರಕ್ಷಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ಮಂಜುನಾಥ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ದೇವದುರ್ಗ ತಾಲೂಕಿನ ಕಾರ್ಮಿಕ ನಿರೀಕ್ಷಕರಾದ ಮಲ್ಲಪ್ಪ, ಟ್ರಾಫಿಕ್ ಪಿ.ಎಸ್.ಐ ನಾರಾಯಣ, ಶಿಕ್ಷಣ ಇಲಾಖೆಯ ಇ.ಸಿ.ಓ ರಾಜನಗೌಡ, ಬಿ.ಆರ್.ಪಿ ಸುರೇಶ, ಸಿ.ಆರ್.ಪಿ ಗಳಾದ ದಾಕ್ಷಾಯಿಣಿ, ವೀರಭದ್ರಯ್ಯ, ವೆಂಕಟಾಂಜನೇಯ್ಯ, ಅಂಬಣ್ಣ ಮದಾಳೆ, ಮಹಾದೇವ, ರಘು ಎನ್. ದೇವದುರ್ಗ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ವಸಂತಕುಮಾರ್, ಮೋಹನ್, ಸಂಗಪ್ಪ ಬಿ., ಡಾನ್ ಬಾಸ್ಕೋ ಸಮಾಜ ಸೇವಾ ಸಂಸ್ಥೆಯ ನಾಗರಾಜ, ಬಸವರಾಜ ಮೇತ್ರಿ ಹಾಗೂ ಹುಸೇನ್ ನಾಯ್ಕ ಅಕೌಂಟೆಂಟ್ ಅವರ ತಂಡವು ಜನವರಿ 13ರಂದು ಸಹ ಮಕ್ಕಳ ರಕ್ಷಣಾ ಕಾರ್ಯಾಚರಣೆಗಿಳಿಯಿತು.
ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಚಟುವಟಿಕೆಗಳಿಗಾಗಿ ಸರಕು ಸಾಗಣೆ ವಾಹನಗಳಲ್ಲಿ ಕರೆದುಕೊಂಡು ಹೋಗಿ ಬಾಲಕಾರ್ಮಿಕತೆಯಲ್ಲಿ ತೊಡಗಿಸುತ್ತಿದ್ದ ವಾಹನಗಳ ಮೇಲೆ ಜನವರಿ 13ರಂದು ಹಠಾತ್ ದಾಳಿ ಮಾಡಿದ ಅಧಿಕಾರಿಗಳು ಮತ್ತು ಸಿಬ್ಬಂದಿಯು 07 ಸರಕು ಸಾಗಣೆ ವಾಹನಗಳನ್ನು ಜಪ್ತಿ ಮಾಡಿ ಮಕ್ಕಳನ್ನು ರಕ್ಷಿಸಿದರು.
ವಾಹನ ಮಾಲೀಕರು ಮತ್ತು ಚಾಲಕರ ವಿರುದ್ಧ ಪೋಲಿಸ್ ಇಲಾಖೆಯ ಅಧಿಕಾರಿಗಳು ಕ್ರಮವಹಿಸಿದರು.
ಪ್ರಕರಣ ದಾಖಲು: ಜನವರಿ 10 ರಂದು ನಡೆದ ಕಾರ್ಯಾಚರಣೆಯಲ್ಲಿ ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿ ವ್ಯಾಪ್ತಿಯಲ್ಲಿ ಹತ್ತಿ, ಮೆಣಸಿನ ಕಾಯಿ ಹಾಗೂ ಇನ್ನೀತರೆ ಹೊಲಗಳಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ತಪಾಸಣೆ ನಡೆಸಿದಾಗ ಹತ್ತಿ ಹೊಲದಲ್ಲಿ ಐವರು ಬಾಲಕಾರ್ಮಿಕರು ಕೆಲಸ ಮಾಡುತ್ತಿರುವುದು ಕಂಡು ಬಂದಿದ್ದು, ಈ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಶಾಲೆಗೆ ಹೋಗುವಂತೆ ಮನವೊಲಿಸಿ ಮಕ್ಕಳನ್ನು ಪಾಲಕರ ವಶಕ್ಕೆ ಒಪ್ಪಿಸಲಾಗಿದೆ.
ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಹೊಲದ ಮಾಲೀಕರ ವಿರುದ್ಧ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಗಬ್ಬೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಚಟುವಟಿಕೆಗಳಿಗಾಗಿ ಸರಕು ಸಾಗಣೆ ವಾಹನಗಳಲ್ಲಿ ಕರೆದುಕೊಂಡು ಹೋಗಿ ಬಾಲಕಾರ್ಮಿಕತೆಯಲ್ಲಿ ತೊಡಗಿಸುತ್ತಿದ್ದ 03 ವಾಹನಗಳನ್ನು ಜಪ್ತಿ ಮಾಡಿ ವಾಹನ ಮಾಲೀಕರ, ಚಾಲಕರ ವಿರುದ್ಧ ಪೋಲಿಸ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಕ್ರಮವಹಿಸಿದ್ದಾರೆ.