ಬಸವಣ್ಣನವರ ಅವಹೇಳನ ಪ್ರಕರಣ: ಎಫ್‌ಐಆರ್ ರದ್ದು ಕೋರಿ ರವಿ ಹಂಜ್ ಹೈಕೋರ್ಟ್‌ಗೆ ಅರ್ಜಿ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
ಜಾಹೀರಾತು


Case involving the denigration of Basavanna: Ravi Hanj files petition in High Court seeking quashing of FIR

ಬಸವಣ್ಣನವರ ಅವಹೇಳನ ಪ್ರಕರಣ: ಎಫ್‌ಐಆರ್ ರದ್ದು ಕೋರಿ ರವಿ ಹಂಜ್ ಹೈಕೋರ್ಟ್‌ಗೆ ಅರ್ಜಿ

ಜಾಹೀರಾತು


ಲಿಂಗಾಯತ ಪದ ತಿರುಚಿದ ಆರೋಪ – ಪೊಲೀಸ್ ಕ್ರಮ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಕೆ


ಕಲ್ಯಾಣ ಸಿರಿ-

ಬೆಂಗಳೂರು: ಬಸವಣ್ಣನವರನ್ನು ವಚನವೊಂದನ್ನು ಉಲ್ಲೇಖಿಸಿ ಅವಹೇಳನ ಮಾಡಿರುವುದು ಹಾಗೂ ಲಿಂಗಾಯತ ಪದವನ್ನು ‘ಲಿಂಗಾಹತ’ ಎಂದು ತಿರುಚಿ ಸಮಾಜದ ಶಾಂತಿ ಕದಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಲೇಖಕ ರವಿ ಹಂಜ್ ಅಲಿಯಾಸ್ ರವಿ ಹಂಜಗಿಮಠ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಸಂಬಂಧ ಸೋಮವಾರ ರಿಟ್ ಅರ್ಜಿ ಸಲ್ಲಿಸಿದ್ದು, ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಪೊಲೀಸರು ಹಾಗೂ ದೂರುದಾರ ಅರವಿಂದ ಜತ್ತಿ ಅವರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಿದ್ದಾರೆ. ಅರ್ಜಿ ಇನ್ನಷ್ಟೇ ಹೈಕೋರ್ಟ್ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.
‘ಬಸವ ಮಂಟಪ’ ಎಂಬ ಕನ್ನಡ ಪುಸ್ತಕದ ಲೇಖಕನಾಗಿರುವ ತಾನು ಅನಿವಾಸಿ ಭಾರತೀಯನಾಗಿದ್ದು, ಅಮೆರಿಕದ ಶಿಕಾಗೊ ಮೆಟ್ರೊಪಾಲಿಟನ್ ಪ್ರದೇಶದ ಡ್ಯುಪೇಜ್ ಕೌಂಟಿಯ ಲಾಯಿಲ್ ಬಡಾವಣೆಯಲ್ಲಿ ವಾಸಿಸುತ್ತಿರುವುದಾಗಿ ರವಿ ಹಂಜ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ತಮ್ಮ ವಿರುದ್ಧ ದಾಖಲಿಸಿರುವ ದೂರು ಸುಳ್ಳು, ದುರುದ್ದೇಶಪೂರಿತ ಹಾಗೂ ಕ್ಷುಲ್ಲಕ ಸ್ವರೂಪದ್ದಾಗಿದೆ ಎಂದು ಆರೋಪಿಸಿರುವ ಅವರು, ಎಫ್‌ಐಆರ್ ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ವಾದಿಸಿದ್ದಾರೆ. ಅಲ್ಲದೆ, ಸಂವಿಧಾನದ 19(1)(ಎ) ವಿಧಿಯಡಿ ಖಾತರಿಪಡಿಸಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಶೈಕ್ಷಣಿಕ, ಐತಿಹಾಸಿಕ ವಿಮರ್ಶೆಯ ಹಕ್ಕಿಗೆ ಧಕ್ಕೆ ಉಂಟುಮಾಡಲಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
ಇನ್ನು, 2026ರ ನವೆಂಬರ್ 21ರಂದು ಬೆಳಗ್ಗೆ 7.30ಕ್ಕೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲುಕ್‌ಔಟ್ ಸರ್ಕ್ಯುಲರ್ ಆಧಾರದ ಮೇಲೆ ವಲಸೆ ಅಧಿಕಾರಿಗಳು ತಮ್ಮನ್ನು ತಡೆಹಿಡಿದಿದ್ದರು. ಬಳಿಕ ಬೆಳಗ್ಗೆ 9.30ಕ್ಕೆ ವಿಮಾನ ನಿಲ್ದಾಣದ ಪೊಲೀಸರು ವಶಕ್ಕೆ ಪಡೆದಿದ್ದರು ಎಂದು ತಿಳಿಸಿದ್ದಾರೆ.
ಅದೇ ದಿನ ಸಂಜೆ ಸುಮಾರು 5 ಗಂಟೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 35(3)ರ ಅಡಿಯಲ್ಲಿ ನೋಟಿಸ್ ಜಾರಿಗೊಳಿಸಲಾಗಿತ್ತು. ನವೆಂಬರ್ 22ರ ಬೆಳಗಿನ ಜಾವ 2.30ರವರೆಗೆ ಪೊಲೀಸ್ ವಶದಲ್ಲಿದ್ದುದಾಗಿ ಅರ್ಜಿಯಲ್ಲಿ ವಿವರಿಸಿದ್ದಾರೆ.
ಒಟ್ಟಾರೆ, ಬಸವಣ್ಣನವರ ಕುರಿತ ಹೇಳಿಕೆ, ಲಿಂಗಾಯತ ಪದದ ಬಳಕೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಹಿನ್ನೆಲೆಯಲ್ಲಿ ದಾಖಲಾಗಿರುವ ಪ್ರಕರಣ ಇದೀಗ ನ್ಯಾಯಾಂಗದ ಪರಿಶೀಲನೆಗೆ ಒಳಪಡುವ ಹಂತಕ್ಕೆ ಬಂದಿದೆ. ಹೈಕೋರ್ಟ್ ವಿಚಾರಣೆ ನಿಗದಿಪಡಿಸಿದ ಬಳಿಕ ಅರ್ಜಿಯ ಮುಂದಿನ ಬೆಳವಣಿಗೆ ತಿಳಿಯಲಿದೆ.

Total Views: 0
Share This Article
Leave a Comment