
The Savalagi Government Hospital is a hotbed of disarray!

ಸಾವಳಗಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಕೂಪ!
ಶಿಥಿಲಗೊಂಡ ಸಿಬ್ಬಂದಿ ವಸತಿಗೃಹ, ಪಾಳುಬಿದ್ದ ಶೌಚಾಲಯ – ಕುಡಿಯುವ ನೀರಿಗೂ ಪರದಾಟ!
ರೋಗಿಗಳ ಮೂಲಭೂತ ಸೌಲಭ್ಯಗಳಿಗೇ ಕುತ್ತು; ಆರೋಗ್ಯ ಇಲಾಖೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳುವರೇ?
ಸಾವಳಗಿ: ಗ್ರಾಮೀಣ ಭಾಗದ ಬಡ ಜನರಿಗೆ ಆರೋಗ್ಯ ಸೇವೆ ಒದಗಿಸಬೇಕಾದ ಸಾವಳಗಿ ಸರ್ಕಾರಿ ಆಸ್ಪತ್ರೆಯೇ ಇದೀಗ ಮೂಲಭೂತ ಸೌಲಭ್ಯಗಳ ಕೊರತೆಯಿಂದ ನರಳುತ್ತಿದೆ. ಸಿಬ್ಬಂದಿ ವಾಸಿಸುವ ವಸತಿಗೃಹಗಳು ಶಿಥಿಲಾವಸ್ಥೆಗೆ ತಲುಪಿದ್ದರೆ, ಆಸ್ಪತ್ರೆ ಆವರಣದಲ್ಲಿರುವ ಶೌಚಾಲಯಗಳು ನಿರ್ವಹಣೆಯಿಲ್ಲದೆ ಪಾಳು ಬಿದ್ದಿವೆ. ಕುಡಿಯುವ ನೀರಿನ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿಯೇ ಇಂತಹ ದುಸ್ಥಿತಿ ನಿರ್ಮಾಣವಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಸರ್ಕಾರಿ ಆಸ್ಪತ್ರೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಪ್ರಮುಖ ಆರೋಗ್ಯ ಕೇಂದ್ರವಾಗಿದೆ. ಪ್ರತಿನಿತ್ಯ ನೂರಾರು ಜನರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಾರೆ. ಆದರೆ ರೋಗಿಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನೇ ಕಲ್ಪಿಸದಿರುವುದು ಆರೋಗ್ಯ ಇಲಾಖೆಯ ಕಾರ್ಯವೈಖರಿಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಶಿಥಿಲಗೊಂಡ ವಸತಿಗೃಹಗಳು; ಸಿಬ್ಬಂದಿಗೆ ಆತಂಕ!
ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ಶುಶ್ರೂಷಕರು ಹಾಗೂ ಇತರೆ ಸಿಬ್ಬಂದಿಗಾಗಿ ನಿರ್ಮಿಸಿರುವ ವಸತಿಗೃಹಗಳು ವರ್ಷಗಳಿಂದ ನಿರ್ವಹಣೆ ಮತ್ತು ದುರಸ್ತಿ ಕಾಣದೆ ಜೀರ್ಣಾವಸ್ಥೆಗೆ ತಲುಪಿವೆ. ಕಟ್ಟಡಗಳ ಗೋಡೆ, ಮೇಲ್ಛಾವಣಿ, ಬಾಗಿಲು, ಕಿಟಕಿಗಳು ಸೇರಿದಂತೆ ವಿವಿಧ ಭಾಗಗಳು ಹಾಳಾಗಿವೆ. ಸಿಬ್ಬಂದಿ ವಾಸಿಸಲು ಸುರಕ್ಷಿತ ವಾತಾವರಣವೇ ಇಲ್ಲದಂತಾಗಿದೆ.
ಗ್ರಾಮೀಣ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ರಾತ್ರಿ ವೇಳೆಯಲ್ಲಿಯೂ ಲಭ್ಯವಿರುವುದು ಅತ್ಯಂತ ಅಗತ್ಯ. ತುರ್ತು ಸಂದರ್ಭದಲ್ಲಿ ತಕ್ಷಣ ಚಿಕಿತ್ಸೆ ದೊರೆಯಬೇಕಾದರೆ ಸಿಬ್ಬಂದಿಗೆ ಆಸ್ಪತ್ರೆಯ ಸಮೀಪದಲ್ಲೇ ಸುರಕ್ಷಿತ ವಸತಿ ವ್ಯವಸ್ಥೆ ಇರಬೇಕು. ಆದರೆ ಇಲ್ಲಿ ವಾಸಿಸಲು ಯೋಗ್ಯವಾದ ವಸತಿಗೃಹಗಳೇ ಇಲ್ಲದಿರುವುದರಿಂದ ಕೆಲವರು ಹೊರಗಡೆ ಬಾಡಿಗೆ ಮನೆ ಮಾಡಿಕೊಂಡು ವಾಸಿಸುವ ಅನಿವಾರ್ಯತೆ ಎದುರಾಗಿದೆ.
ಶೌಚಾಲಯವಿದೆ; ಬಳಕೆಗೆ ಮಾತ್ರ ಇಲ್ಲ!
ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಿರುವ ಶೌಚಾಲಯಗಳು ನಿರ್ವಹಣೆಯಿಲ್ಲದೆ ಸಂಪೂರ್ಣವಾಗಿ ಪಾಳು ಬಿದ್ದಿವೆ. ನೀರಿನ ವ್ಯವಸ್ಥೆ ಇಲ್ಲದಿರುವುದು ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆಯಿಂದ ಅವು ಬಳಕೆಗೆ ಬಾರದಂತಾಗಿವೆ. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗೆ ಮಾತ್ರ ಶೌಚಾಲಯದ ವ್ಯವಸ್ಥೆಯಿದ್ದು, ಚಿಕಿತ್ಸೆಗಾಗಿ ಬರುವ ಸಾರ್ವಜನಿಕರು ಮತ್ತು ರೋಗಿಗಳು ಶೌಚಕ್ಕೆ ಹೋಗಬೇಕಾದರೆ ಎಲ್ಲಿಗೆ ಹೋಗಬೇಕು ಎಂಬ ಗಂಭೀರ ಪ್ರಶ್ನೆ ಎದುರಾಗಿದೆ.

ವಿಶೇಷವಾಗಿ ಮಹಿಳೆಯರು, ವೃದ್ಧರು, ಮಕ್ಕಳು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳು ಶೌಚಾಲಯದ ಸೌಲಭ್ಯವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕನಿಷ್ಠ ಶೌಚಾಲಯದ ವ್ಯವಸ್ಥೆಯನ್ನೂ ಕಲ್ಪಿಸಲಾಗದಿದ್ದರೆ ಆರೋಗ್ಯ ಇಲಾಖೆಯ ಜವಾಬ್ದಾರಿ ಏನು ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಕುಡಿಯುವ ನೀರಿಗೂ ಸಮರ್ಪಕ ವ್ಯವಸ್ಥೆಯಿಲ್ಲ!
ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಆಡಳಿತದ ಮೂಲಭೂತ ಕರ್ತವ್ಯ. ಆದರೆ ಸಾವಳಗಿ ಆಸ್ಪತ್ರೆಯಲ್ಲಿ ಈ ವ್ಯವಸ್ಥೆಯೂ ಸಮರ್ಪಕವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಸ್ವಚ್ಛತೆ, ಕುಡಿಯುವ ನೀರು ಮತ್ತು ಶೌಚಾಲಯದಂತಹ ಕನಿಷ್ಠ ಸೌಲಭ್ಯಗಳೇ ಇಲ್ಲದಿರುವುದು ಆಸ್ಪತ್ರೆಯ ನಿರ್ವಹಣೆಯ ದುಸ್ಥಿತಿಗೆ ಸಾಕ್ಷಿಯಾಗಿದೆ.
ಅಧಿಕಾರಿಗಳೇ, ಇನ್ನೆಷ್ಟು ದಿನ ಈ ನಿರ್ಲಕ್ಷ್ಯ?
ಆಸ್ಪತ್ರೆಯ ಶಿಥಿಲಗೊಂಡ ವಸತಿಗೃಹಗಳ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಬೇಕು. ದುರಸ್ತಿ ಸಾಧ್ಯವಿರುವ ಕಟ್ಟಡಗಳನ್ನು ತಕ್ಷಣ ದುರಸ್ತಿಗೊಳಿಸಬೇಕು. ಸಾಧ್ಯವಾಗದಿದ್ದಲ್ಲಿ ಹೊಸ ವಸತಿಗೃಹ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಸಾರ್ವಜನಿಕರಿಗೆ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛ ಪರಿಸರ ಕಲ್ಪಿಸಬೇಕು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತ ಇನ್ನಾದರೂ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು. ಕಡತಗಳಲ್ಲಿ ಪತ್ರ ವ್ಯವಹಾರ ನಡೆಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ; ಸ್ಥಳದಲ್ಲಿಯೇ ಕಾಮಗಾರಿ ಕೈಗೊಂಡು ಜನರಿಗೆ ಸೌಲಭ್ಯ ಒದಗಿಸಿದಾಗ ಮಾತ್ರ ಆಡಳಿತದ ಜವಾಬ್ದಾರಿ ನಿಭಾಯಿಸಿದಂತಾಗುತ್ತದೆ.
ಗ್ರಾಮೀಣ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡದೆ, ಸಾವಳಗಿ ಸರ್ಕಾರಿ ಆಸ್ಪತ್ರೆಯ ಮೂಲಸೌಕರ್ಯ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ವರದಿ: ಸಚೀನ ಆರ್. ಜಾಧವ್, ಸಾವಳಗಿ
ಪತ್ರಕರ್ತರ ಪ್ರಶ್ನೆಗೆ ಡಿಎಚ್ಒ ಹಾರಿಕೆಯ ಉತ್ತರ!
ಸಾವಳಗಿ ಸರ್ಕಾರಿ ಆಸ್ಪತ್ರೆಯಲ್ಲಿನ ಶಿಥಿಲಗೊಂಡ ಸಿಬ್ಬಂದಿ ವಸತಿಗೃಹಗಳು, ಪಾಳುಬಿದ್ದ ಶೌಚಾಲಯ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲು ಪತ್ರಕರ್ತರು ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಸುವರ್ಣ ಕುಲಕರ್ಣಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಸಮರ್ಪಕ ಮಾಹಿತಿ ನೀಡದೆ ಹಾರಿಕೆಯ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಜವಾಬ್ದಾರಿಯುತ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಬೇಕಾದದ್ದು ಕರ್ತವ್ಯ. ಪ್ರಶ್ನೆಗಳಿಗೆ ಉತ್ತರಿಸುವುದನ್ನು ತಪ್ಪಿಸಿಕೊಳ್ಳುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ.
ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ; ಸ್ಥಳ ಪರಿಶೀಲನೆ ನಡೆಸುತ್ತೇನೆ
“ಈ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೂ ಪತ್ರ ಸಲ್ಲಿಸಲಾಗಿದ್ದು, ಅವರು ರಾಜ್ಯಮಟ್ಟಕ್ಕೂ ಪತ್ರ ರವಾನಿಸಿದ್ದಾರೆ. ಕೆಎಚ್ಸಿಆರ್ಪಿ ಅವರಿಗೂ ಪತ್ರ ಬರೆಯಲಾಗಿದೆ. ಆಸ್ಪತ್ರೆಯ ಶೌಚಾಲಯ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ.”
ಜಿ.ಎಸ್. ಗಲಗಲಿ ತಾಲೂಕು ಆರೋಗ್ಯಾಧಿಕಾರಿಗಳು, ಜಮಖಂಡಿ.
ರೋಗಿಗಳಿಗೆ ಶೌಚಾಲಯವಿಲ್ಲ; ಮಹಿಳೆಯರು, ವೃದ್ಧರ ಪರದಾಟ!
“ಸಾವಳಗಿ ಸರ್ಕಾರಿ ಆಸ್ಪತ್ರೆಯಲ್ಲಿರುವ ಹಳೆಯ ಶೌಚಾಲಯಗಳು ನಿರ್ವಹಣೆಯಿಲ್ಲದೆ ಸಂಪೂರ್ಣವಾಗಿ ಪಾಳು ಬಿದ್ದಿವೆ. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗೆ ಮಾತ್ರ ಶೌಚಾಲಯದ ವ್ಯವಸ್ಥೆಯಿದ್ದು, ಚಿಕಿತ್ಸೆಗಾಗಿ ಬರುವ ಸಾರ್ವಜನಿಕರು ಮತ್ತು ರೋಗಿಗಳು ಶೌಚಕ್ಕೆ ಹೋಗಲು ಪರದಾಡುವಂತಾಗಿದೆ. ವಿಶೇಷವಾಗಿ ಮಹಿಳೆಯರು, ವೃದ್ಧರು ಹಾಗೂ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ. ಸಿಬ್ಬಂದಿ ವಸತಿಗೃಹಗಳೂ ಶಿಥಿಲಾವಸ್ಥೆಯಲ್ಲಿವೆ. ಕುಡಿಯುವ ನೀರು, ಶೌಚಾಲಯ ಹಾಗೂ ಸ್ವಚ್ಛತೆಯಂತಹ ಮೂಲಭೂತ ಸೌಲಭ್ಯಗಳ ಕೊರತೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು.”
ಉಮೇಶ್ ಆರ್. ಜಾಧವ್ ಗ್ರಾಮಸ್ಥರು, ಸಾವಳಗಿ.


