ಗಂಗಾವತಿಯಲ್ಲಿ ಕಥಾ ಕಮ್ಮಟ: ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸಲು ಮಹತ್ವದ ಹೆಜ್ಜೆ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು

Storytelling Workshop in Gangavathi: A Significant Step Toward Cultivating a Taste for Literature Among Students





ಗಂಗಾವತಿಯಲ್ಲಿ ಕಥಾ ಕಮ್ಮಟ: ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸಲು ಮಹತ್ವದ ಹೆಜ್ಜೆ

ಜಾಹೀರಾತು


ಕಥೆಗಳ ಮೂಲಕ ಬದುಕಿನ ಮೌಲ್ಯ, ಭಾವನೆಗಳ ಅನಾವರಣ – ಹೊಸ ತಲೆಮಾರಿಗೆ ಕಥಾ ಸಾಹಿತ್ಯದ ಪರಿಚಯ


ಗಂಗಾವತಿ: ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿ ಮತ್ತು ಅಭಿರುಚಿ ಬೆಳೆಸುವುದರ ಜೊತೆಗೆ ಕನ್ನಡ ನಾಡಿನ ಕಥಾ ಪ್ರಪಂಚವನ್ನು ಪರಿಚಯಿಸಿ, ಹೊಸ ತಲೆಮಾರಿನ ವಿದ್ಯಾರ್ಥಿ ಹಾಗೂ ಯುವಜನರನ್ನು ಸಾಹಿತ್ಯ ಕ್ಷೇತ್ರದಲ್ಲಿ ಪ್ರೋತ್ಸಾಹಿಸಿ ಬೆಳೆಸುವ ಉದ್ದೇಶದಿಂದ ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಹಾಗೂ ಗಂಗಾವತಿಯ ಜ್ಞಾನಸಿರಿ ಮಹಿಳಾ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಕಥಾ ಕಮ್ಮಟವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಜಿಲ್ಲಾ ಸಂಚಾಲಕ ರಮೇಶ ಗಬ್ಬೂರ್, ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಅಧ್ಯಯನಕ್ಕೆ ಮಾತ್ರ ಸೀಮಿತವಾಗದೆ, ನಾಡಿನ ಸಾಹಿತ್ಯ ಪರಂಪರೆ, ಕಥೆ, ಕಾದಂಬರಿ ಸೇರಿದಂತೆ ಸೃಜನಶೀಲ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕಥಾ ಕಮ್ಮಟದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿರುವ ಸೃಜನಶೀಲ ಪ್ರತಿಭೆಯನ್ನು ಗುರುತಿಸಿ, ಹೊಸ ಬರಹಗಾರರನ್ನು ರೂಪಿಸಲು ಸಹಕಾರಿಯಾಗುತ್ತವೆ. ಹೊಸ ತಲೆಮಾರಿನ ಯುವಜನರನ್ನು ಸಾಹಿತ್ಯ ಲೋಕದತ್ತ ಆಕರ್ಷಿಸುವುದು ಈ ಕಮ್ಮಟದ ಪ್ರಮುಖ ಆಶಯವಾಗಿದೆ ಎಂದು ತಿಳಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಕಥಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕ ಏಕೀಕರಣ ಚಳವಳಿ, ಗೋಕಾಕ್ ವರದಿ ಹೋರಾಟ ಹಾಗೂ ನಾಡು-ನುಡಿ, ನೆಲ-ಜಲ ಮತ್ತು ಸಂಸ್ಕೃತಿಯ ಉಳಿವಿಗಾಗಿ ಕರ್ನಾಟಕ ವಿದ್ಯಾವರ್ಧಕ ಸಂಘ ಸಲ್ಲಿಸಿರುವ ಕೊಡುಗೆಯನ್ನು ಸ್ಮರಿಸಿದರು. ರಾ.ಹ. ದೇಶಪಾಂಡೆ ಅವರು ಸ್ಥಾಪಿಸಿದ ಈ ಸಂಘವು ಕನ್ನಡ ನಾಡಿನ ಅಸ್ಮಿತೆ ಹಾಗೂ ಭಾಷಾ ಸಂಸ್ಕೃತಿಯ ರಕ್ಷಣೆಗಾಗಿ ದಶಕಗಳಿಂದ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ. ಇಂತಹ ಸಂಘಟನೆಯ ಆಶಯದಂತೆ ಯುವಜನರಲ್ಲಿ ಕನ್ನಡ ಸಾಹಿತ್ಯದ ಅಭಿರುಚಿ ಬೆಳೆಸುವ ಕಥಾ ಕಮ್ಮಟಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಮಾರ್ಮಿಕವಾಗಿ ನುಡಿದರು.
ಸಿಂಧನೂರಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕಿ ದಿವ್ಯ ನುಗಡೋಣಿ ಅವರು ಕಮ್ಮಟದ ಮುನ್ನುಡಿ ಮಾತುಗಳನ್ನಾಡಿ, ಕಥೆಗಳು ಕೇವಲ ಕಾಲ್ಪನಿಕ ಘಟನೆಗಳ ನಿರೂಪಣೆಯಲ್ಲ. ಅವು ಮನುಷ್ಯನ ಬದುಕು, ಸಂಬಂಧಗಳು, ಭಾವನೆಗಳು ಹಾಗೂ ಸಾಮಾಜಿಕ ವಾಸ್ತವಗಳೊಂದಿಗೆ ಆಳವಾಗಿ ಬೆಸೆದುಕೊಂಡಿರುತ್ತವೆ. ಕಥೆಗಳು ಮನುಷ್ಯನ ಅನುಭವಗಳನ್ನು ಮತ್ತೊಬ್ಬರ ಬದುಕಿನೊಂದಿಗೆ ಬೆಸೆಯುವ ಶಕ್ತಿಯನ್ನು ಹೊಂದಿವೆ. ಓದುಗರಲ್ಲಿ ಸಂವೇದನೆ, ಮಾನವೀಯತೆ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ಕಥಾ ಸಾಹಿತ್ಯದ ಪಾತ್ರ ಮಹತ್ವದ್ದಾಗಿದೆ ಎಂದು ವಿವರಿಸಿದರು.
ಅತಿಥಿಯಾಗಿ ಭಾಗವಹಿಸಿದ್ದ ಶೈಲಜಾ ಹಿರೇಮಠ ಮಾತನಾಡಿ, ಮಹಿಳೆಯರ ಬದುಕು, ಅನುಭವ, ಸಂಕಟ, ಸಂಘರ್ಷ ಮತ್ತು ಸಾಮಾಜಿಕ ಸ್ಥಿತಿಗತಿಗಳು ಅನೇಕ ಕಥೆಗಳ ಪ್ರಮುಖ ವಸ್ತುಗಳಾಗಿವೆ. ಮಹಿಳಾ ಕಥೆಗಾರ್ತಿಯರು ತಮ್ಮ ಬರಹಗಳ ಮೂಲಕ ಸಮಾಜದ ವಾಸ್ತವಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುತ್ತಿದ್ದಾರೆ. ಕನ್ನಡದ ಪ್ರಸಿದ್ಧ ಕಥೆಗಾರ್ತಿ ಬಾನು ಮುಷ್ತಾಕ್ ಅವರಿಗೆ ಅಂತರರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ದೊರೆತಿರುವುದು ಕನ್ನಡ ಸಾಹಿತ್ಯದ ಹೆಮ್ಮೆಯ ಸಂಗತಿಯಾಗಿದೆ ಎಂದು ಸ್ಮರಿಸಿದರು. ಇದೇ ಸಂದರ್ಭದಲ್ಲಿ ‘ಬಿಲಾಂಗಿಂಗ್ ಜರ್ನಿ ಆಫ್ ಲವ್’ ಕೃತಿಯ ಬಗ್ಗೆಯೂ ಪ್ರಸ್ತಾಪಿಸಿ, ಸಮಕಾಲೀನ ಕಥಾ ಸಾಹಿತ್ಯದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನಸಿರಿ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಬಸವರಾಜ ಬಿ. ಡಂಕನಕಲ್ ಮಾತನಾಡಿ, ವಿದ್ಯಾರ್ಥಿ ಯುವಜನರನ್ನು ಹೊಸ ಸಾಹಿತ್ಯ ಲೋಕಕ್ಕೆ ಪರಿಚಯಿಸುವುದಷ್ಟೇ ಅಲ್ಲದೆ, ಅವರನ್ನು ಸಾಹಿತ್ಯದ ಓದು ಮತ್ತು ಬರವಣಿಗೆಯ ಪಯಣದಲ್ಲಿ ಜೊತೆಯಾಗಿ ಕರೆದುಕೊಂಡು ಹೋಗುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳು ಹಾಗೂ ಸಾಹಿತ್ಯ ಸಂಘಟನೆಗಳ ಮೇಲಿದೆ. ಸಾಹಿತ್ಯವು ಬದುಕಿನ ಅನುಭವಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಮಾಸ್ತಿಯವರ ‘ಮುಸುರಿನ ಮಂಗಮ್ಮ’ ಕಥೆಯನ್ನು ಉದಾಹರಿಸಿ, ಸಾಮಾನ್ಯ ಜನರ ಬದುಕಿನ ಘಟನೆಗಳೂ ಅತ್ಯುತ್ತಮ ಸಾಹಿತ್ಯ ಕೃತಿಗಳಾಗಿ ರೂಪುಗೊಳ್ಳಬಲ್ಲವು. ಕಥೆಗಳು ನಮ್ಮ ನಿತ್ಯಜೀವನಕ್ಕೆ ಎಷ್ಟು ಹತ್ತಿರವಾಗಿವೆ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಹೇಳಿದರು.
ನಂತರ ಕಥಾ ಕಮ್ಮಟದ ನಿರ್ದೇಶಕ ಡಾ. ಜಾಜಿ ದೇವೇಂದ್ರಪ್ಪ ಅವರು ನಾಲ್ವರು ಕಥೆಗಾರರಾದ ಡಾ. ನಾಗರಾಜ ಕೋರಿ, ಡಾ. ಹನುಮಂತ ಹೇರೂರು, ರಂಗಸ್ವಾಮಿ ಮಾರ್ಲಬಂಡಿ ಹಾಗೂ ಶರಣಬಸವ ಕೆ. ಗುಡದಿನ್ನಿ ಅವರೊಂದಿಗೆ ಸಂವಾದಾತ್ಮಕವಾಗಿ ಕಥಾ ಕಮ್ಮಟವನ್ನು ನಡೆಸಿಕೊಟ್ಟರು. ಕಥೆಯ ವಸ್ತು ಆಯ್ಕೆ, ಕಥಾ ನಿರೂಪಣೆ, ಪಾತ್ರಗಳ ಸೃಷ್ಟಿ, ಭಾಷಾ ಬಳಕೆ, ಕಥೆಯ ಶೈಲಿ ಹಾಗೂ ಸಮಕಾಲೀನ ಬದುಕಿನ ಅನುಭವಗಳನ್ನು ಸಾಹಿತ್ಯವಾಗಿ ಕಟ್ಟಿಕೊಡುವ ವಿಧಾನಗಳ ಕುರಿತು ಚರ್ಚಿಸಲಾಯಿತು. ವಿದ್ಯಾರ್ಥಿಗಳಿಗೆ ಕಥಾ ಸಾಹಿತ್ಯದ ಒಳನೋಟಗಳನ್ನು ತಿಳಿಸಿಕೊಡುವ ಮೂಲಕ ಬರವಣಿಗೆಯ ಆಸಕ್ತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನಿರ್ದೇಶಕ ಎಂ. ಕೃಷ್ಣಯ್ಯ, ಟ್ರಸ್ಟ್ ಉಪಾಧ್ಯಕ್ಷ ಶರಣಪ್ಪ ಎಲ್. ಕೆಸರಹಟ್ಟಿ, ಕಮ್ಮಟದ ನಿರ್ದೇಶಕ ಡಾ. ಜಾಜಿ ದೇವೇಂದ್ರಪ್ಪ, ಸುಪ್ರಿಯಾ ಜಾಜಿ ಸೇರಿದಂತೆ ಸಾಹಿತ್ಯಾಸಕ್ತರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಒಟ್ಟಿನಲ್ಲಿ, ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಓದು, ಬರವಣಿಗೆ ಮತ್ತು ಸೃಜನಶೀಲ ಚಿಂತನೆಗೆ ಪ್ರೇರಣೆ ನೀಡಿದ ಈ ಕಥಾ ಕಮ್ಮಟವು ಹೊಸ ತಲೆಮಾರಿನ ಯುವ ಬರಹಗಾರರನ್ನು ರೂಪಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಪ್ರಯತ್ನವಾಗಿ ಮೂಡಿಬಂತು.

Total Views: 1
Share This Article
Leave a Comment