ಹಂಪಿ ಕನ್ನಡ ವಿವಿಯಿಂದ ಶರಣರ ಚರಿತ್ರೆಗೆ ಅಪಚಾರ!

H.Mallikarjun
H.Mallikarjun - Kalyanasiri
2 Min Read
ಜಾಹೀರಾತು


Hampi Kannada University does a disservice to the history of the Sharanas!




ಹಂಪಿ ಕನ್ನಡ ವಿವಿಯಿಂದ ಶರಣರ ಚರಿತ್ರೆಗೆ ಅಪಚಾರ!

ಜಾಹೀರಾತು


ವಿವಾದಾತ್ಮಕ ಕೃತಿ ಪ್ರಕಟಣೆ ವಿರುದ್ಧ ಬಸವಪರ ಸಂಘಟನೆಗಳ ಆಕ್ರೋಶ – ತನಿಖೆ ನಡೆಸಿ ಕೃತಿ ಹಿಂಪಡೆಯಲು ಆಗ್ರಹ


ಪುಣೆ:ಬಸವಣ್ಣನವರು ಸೇರಿದಂತೆ ವಚನ ಚಳವಳಿಯ ಶರಣರ ಚರಿತ್ರೆಯ ಕುರಿತು ಗೊಂದಲ ಸೃಷ್ಟಿಸುವ ಹಾಗೂ ಬಸವಭಕ್ತರ ಭಾವನೆಗಳಿಗೆ ಧಕ್ಕೆ ತರುವಂತಹ ವಿವಾದಾತ್ಮಕ ಕೃತಿಯನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಈ ಕೂಡಲೇ ಕೃತಿಯ ಕುರಿತು ತಜ್ಞರ ಸಮಿತಿ ರಚಿಸಿ ಸತ್ಯಾಸತ್ಯತೆ ಪರಿಶೀಲಿಸಬೇಕು ಹಾಗೂ ವಿವಾದಾತ್ಮಕ ಅಂಶಗಳಿರುವ ಕೃತಿಯನ್ನು ಹಿಂಪಡೆಯಬೇಕು ಎಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಶಶಿಕಾಂತ ರುದ್ರಪ್ಪ ಪಟ್ಟಣ ಆಗ್ರಹಿಸಿದ್ದಾರೆ.
‘ದೇವರ ದಾಸಿಮಯ್ಯ ಮರುಚಿಂತನೆ’ ಎಂಬ ಪ್ರೊ. ವಾಸುದೇವ ಬಡಿಗೇರ ಅವರ ಕೃತಿಯಲ್ಲಿ ಬಸವಣ್ಣನವರನ್ನು ವಿಶ್ವಕರ್ಮ ಎಂದು ಬಿಂಬಿಸಿರುವುದು, ಬಸವಣ್ಣನವರ ಸಮಕಾಲೀನ ಅನೇಕ ಶರಣರನ್ನು ಬಸವಪೂರ್ವ ಯುಗದವರೆಂದು ಉಲ್ಲೇಖಿಸಿರುವುದು ಸೇರಿದಂತೆ ಹಲವು ಅಂಶಗಳು ಗಂಭೀರ ಚರ್ಚೆಗೆ ಗ್ರಾಸವಾಗಿವೆ. ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಎಂಬ ಐತಿಹಾಸಿಕ ಸಂಗತಿಯನ್ನು ತಿರುಚಿ ಗೊಂದಲಕಾರಿ ವಿಚಾರಗಳನ್ನು ಮಂಡಿಸಲಾಗಿದೆ ಎಂಬುದು ಬಸವಪರ ಸಂಘಟನೆಗಳ ಪ್ರಮುಖ ಆಕ್ಷೇಪವಾಗಿದೆ.
ಒಟ್ಟು 238 ಪುಟಗಳ ಈ ಕೃತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿದ್ದು, ಪ್ರಸಾರಾಂಗದ ನಿರ್ದೇಶಕ ಡಾ. ಎಚ್.ಡಿ. ಪ್ರಶಾಂತ ಅವರ ನೇತೃತ್ವದಲ್ಲಿ ಪ್ರಕಟಣೆಯಾಗಿದೆ. ಕೃತಿಯಲ್ಲಿನ ಸಂಶೋಧನಾ ಅಂಶಗಳು ವೈಜ್ಞಾನಿಕ ಹಾಗೂ ಐತಿಹಾಸಿಕ ಆಧಾರಗಳನ್ನು ಹೊಂದಿವೆಯೇ ಎಂಬುದನ್ನು ಪರಿಶೀಲಿಸಬೇಕೆಂದು ಸಂಘಟನೆಗಳು ಒತ್ತಾಯಿಸಿವೆ.
ಈ ಕೃತಿಯ ಕುರಿತು ಈಗಾಗಲೇ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಸೇರಿದಂತೆ ಹಲವು ಬಸವಪರ ಸಂಘಟನೆಗಳು ಹಾಗೂ ನೂರಕ್ಕೂ ಅಧಿಕ ಜನರು ರಾಜ್ಯಪಾಲರು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಕುಲಸಚಿವರಿಗೆ ಆಕ್ಷೇಪಣಾ ಪತ್ರ ಸಲ್ಲಿಸಿದ್ದಾರೆ. ರಾಜ್ಯಪಾಲರೂ ಕೃತಿಯ ಕುರಿತು ಮಾಹಿತಿ ಪಡೆದು, ಪ್ರಮಾದಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಶ್ವವಿದ್ಯಾಲಯಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಈವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಡಾ. ಪಟ್ಟಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂರು ಪ್ರಮುಖ ಬೇಡಿಕೆಗಳು:
ಪ್ರೊ. ವಾಸುದೇವ ಬಡಿಗೇರ ಅವರು ತಮ್ಮ ಕೃತಿಯಲ್ಲಿನ ಆಕ್ಷೇಪಾರ್ಹ ಸಂಶೋಧನಾ ಅಂಶಗಳ ಕುರಿತು ಸ್ಪಷ್ಟನೆ ನೀಡಿ, ಬಸವಭಕ್ತರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು.
ಹಂಪಿ ಕನ್ನಡ ವಿಶ್ವವಿದ್ಯಾಲಯವು ನಿಷ್ಪಕ್ಷಪಾತ ತಜ್ಞರ ಸತ್ಯಶೋಧನಾ ಸಮಿತಿಯನ್ನು ರಚಿಸಿ, ಒಂದು ತಿಂಗಳೊಳಗೆ ವರದಿ ಪಡೆಯಬೇಕು. ವರದಿಯನ್ನು ರಾಜ್ಯಪಾಲರು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಶ್ವವಿದ್ಯಾಲಯದ ಪ್ರಸಾರಾಂಗಕ್ಕೆ ಸಲ್ಲಿಸಿ, ವಿವಾದಾತ್ಮಕ ಕೃತಿಯನ್ನು ಹಿಂಪಡೆಯಬೇಕು.
ಪ್ರಸಾರಾಂಗವು ಮುಂದಿನ ದಿನಗಳಲ್ಲಿ ಇಂತಹ ವಿವಾದಾತ್ಮಕ ಕೃತಿಗಳನ್ನು ಪ್ರಕಟಿಸುವ ಮೊದಲು ಐತಿಹಾಸಿಕ ಆಧಾರ, ಸಂಶೋಧನಾ ಮೌಲ್ಯ ಹಾಗೂ ಪ್ರಕಟಣಾ ಜವಾಬ್ದಾರಿಯನ್ನು ಸಮರ್ಪಕವಾಗಿ ಪರಿಶೀಲಿಸಬೇಕು.
ಚರ್ಚೆಗೆ ಸಿದ್ಧ, ಹೋರಾಟಕ್ಕೂ ಹಿಂದೇಟಿಲ್ಲ!
ಬಸವಪರ ಸಂಘಟನೆಗಳ ಈ ನ್ಯಾಯಯುತ ಬೇಡಿಕೆಗಳನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಕುಲಸಚಿವರು ಶೀಘ್ರವಾಗಿ ಇತ್ಯರ್ಥಪಡಿಸದಿದ್ದರೆ, ವಿವಿಧ ಬಸವಪರ ಸಂಘಟನೆಗಳ ಕಾರ್ಯಕರ್ತರು ತಜ್ಞರೊಂದಿಗೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ಅಗತ್ಯ ಬಿದ್ದರೆ ಪ್ರತಿಭಟನೆಯ ಹೋರಾಟವನ್ನೂ ಹಮ್ಮಿಕೊಳ್ಳಲಾಗುವುದು ಎಂದು ಡಾ. ಶಶಿಕಾಂತ ರುದ್ರಪ್ಪ ಪಟ್ಟಣ ಎಚ್ಚರಿಕೆ ನೀಡಿದ್ದಾರೆ.


— ಡಾ. ಶಶಿಕಾಂತ ರುದ್ರಪ್ಪ ಪಟ್ಟಣ ಅಧ್ಯಕ್ಷರು, ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ. ಮೊ: 9552002338

Total Views: 0
Share This Article
Leave a Comment