ಬಸ್ ಪ್ರಯಾಣ ದರ ಏರಿಕೆ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ: ಕರವೇ ಎಚ್ಚರಿಕೆ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
ಜಾಹೀರಾತು


ಬಸ್ ಪ್ರಯಾಣ ದರ ಏರಿಕೆ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ: ಕರವೇ ಎಚ್ಚರಿಕೆ

ಜಾಹೀರಾತು


Statewide protest if bus fare hike is not withdrawn: KaRaVe warns


ಜನಸಾಮಾನ್ಯರು, ವಿದ್ಯಾರ್ಥಿಗಳು, ಕಾರ್ಮಿಕರಿಗೆ ದರ ಏರಿಕೆ ಭಾರ; ಮುಖ್ಯಮಂತ್ರಿ ಮಧ್ಯಪ್ರವೇಶಕ್ಕೆ ಆಗ್ರಹ


ಗಂಗಾವತಿ, ನ.5: ಯಾವುದೇ ಮುನ್ಸೂಚನೆ ನೀಡದೆ ರಾಜ್ಯ ಸರ್ಕಾರ ಏಕಾಏಕಿ ಬಸ್ ಪ್ರಯಾಣ ದರವನ್ನು ಹೆಚ್ಚಿಸಿರುವುದನ್ನು ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ, ಕೂಡಲೇ ದರ ಏರಿಕೆ ನಿರ್ಧಾರವನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.
ಈ ಸಂಬಂಧ ಕರವೇ ಕೊಪ್ಪಳ ಜಿಲ್ಲಾ ಅಧ್ಯಕ್ಷ ಪಂಪಣ್ಣ ನಾಯಕ ಅವರ ನೇತೃತ್ವದಲ್ಲಿ ಗಂಗಾವತಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಂಪಣ್ಣ ನಾಯಕ, ರಾಜ್ಯ ಸರ್ಕಾರದ ಬಸ್ ಪ್ರಯಾಣ ದರ ಹೆಚ್ಚಳದಿಂದ ಬಡವರು, ಮಧ್ಯಮ ವರ್ಗದ ಜನರು, ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ನಿತ್ಯ ಪ್ರಯಾಣಿಸುವ ಸಾರ್ವಜನಿಕರಿಗೆ ತೀವ್ರ ಆರ್ಥಿಕ ಹೊರೆ ಉಂಟಾಗಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದು, ಸಾರಿಗೆ ದರ ಹೆಚ್ಚಳ ಅವರ ಬದುಕನ್ನು ಮತ್ತಷ್ಟು ದುಸ್ತರಗೊಳಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಜನರ ಹಿತ ಕಾಪಾಡಬೇಕಾದ ಸರ್ಕಾರವೇ ಜನಸಾಮಾನ್ಯರ ಮೇಲೆ ಒಂದರ ಮೇಲೊಂದು ಆರ್ಥಿಕ ಹೊರೆ ಹೇರುವುದು ಸರಿಯಾದ ಆಡಳಿತ ನೀತಿಯಲ್ಲ. ಚುನಾವಣಾ ಸಂದರ್ಭದಲ್ಲಿ ಜನರಿಗೆ ನೂರಾರು ಭರವಸೆಗಳನ್ನು ನೀಡುವ ಸರ್ಕಾರ, ಅಧಿಕಾರಕ್ಕೆ ಬಂದ ನಂತರ ಬೆಲೆ ಏರಿಕೆ ಹಾಗೂ ಪ್ರಯಾಣ ದರ ಹೆಚ್ಚಳದ ಮೂಲಕ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಡವರು ಹಾಗೂ ಸಾಮಾನ್ಯ ಜನರ ದಿನನಿತ್ಯದ ಬದುಕಿಗೆ ಅನುಕೂಲವಾಗಬೇಕಾದ ಸಾರಿಗೆ ವ್ಯವಸ್ಥೆಯ ಪ್ರಯಾಣ ದರವನ್ನೇ ಹೆಚ್ಚಿಸಿರುವುದು ಜನವಿರೋಧಿ ನಿರ್ಧಾರವಾಗಿದೆ. ಮುಖ್ಯಮಂತ್ರಿ ಅವರು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಹೆಚ್ಚಿಸಿರುವ ಬಸ್ ಪ್ರಯಾಣ ದರವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ: ಸರ್ಕಾರ ಕೂಡಲೇ ದರ ಏರಿಕೆ ನಿರ್ಧಾರವನ್ನು ಹಿಂಪಡೆಯದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಸಾರ್ವಜನಿಕರ ಸಹಕಾರದೊಂದಿಗೆ ರಾಜ್ಯಾದ್ಯಂತ ಪ್ರಜಾಪ್ರಭುತ್ವ ಮತ್ತು ಕಾನೂನುಬದ್ಧ ರೀತಿಯಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಪಂಪಣ್ಣ ನಾಯಕ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಶಂಕರ, ಹುಸೇನ್ ಬಾಸ, ಪುಂಡಲಿ, ಶರಣು ನಾಯಕ, ಭರಮಪ್ಪ, ಬಸವರಾಜ, ಉಮೇಶ ಬಂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article
Leave a Comment