

The importance of Kannada in the fields of education and employment must be recognized: Raiga Thomas

ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿ ಕನ್ನಡದ ಮಹತ್ವ ಅರಿಯಬೇಕು: ರೈಗಾ ಥಾಮಸ್
ಜಾಗತಿಕ ಭಾಷೆಗಳ ಕಲಿಕೆಯೊಂದಿಗೆ ಮಾತೃಭಾಷೆ ಮತ್ತು ಸಂಸ್ಕೃತಿಗೂ ಗೌರವ ನೀಡಲಿ
ಬೆಂಗಳೂರು: “ಹೆಸರಾಯಿತು ಕರ್ನಾಟಕ, ಆದರೆ ಉಸಿರಾಯಿತೆ ಕನ್ನಡ” ಎಂಬ ಪ್ರಶ್ನೆ ಕನ್ನಡಿಗರಲ್ಲಿ ನಿರಾಸೆ ಮೂಡಿಸುವಂತಿದೆ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ನಮ್ಮ ಉಸಿರಾಗಬೇಕಾದರೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಕನ್ನಡದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ರಂಗಭೂಮಿ ಕಲಾವಿದೆ ಹಾಗೂ ನಿರ್ದೇಶಕಿ ರೈಗಾ ಥಾಮಸ್ ಅಭಿಪ್ರಾಯಪಟ್ಟರು.
ನಗರದ ಹಲಸೂರಿನ ಸೇಂಟ್ ಆನ್ಸ್ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡಬೇಕು. ಆದರೆ, ಕನ್ನಡ ಭಾಷೆಯ ವಿಚಾರದಲ್ಲಿ ಸರ್ಕಾರಗಳು ತೋರುತ್ತಿರುವ ತಾತ್ಸಾರ ಧೋರಣೆ ವಿಷಾದನೀಯ. ಇಂತಹ ನಿರ್ಲಕ್ಷ್ಯದಿಂದ ಕನ್ನಡದ ಬೆಳವಣಿಗೆಗೆ ಹಿನ್ನಡೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದಿನ ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ಹೊಸ ತಲೆಮಾರಿನವರು ಇಂಗ್ಲಿಷ್ ಸೇರಿದಂತೆ ವಿವಿಧ ಜಾಗತಿಕ ಭಾಷೆಗಳನ್ನು ಕಲಿಯುವುದು ಅಗತ್ಯ. ಆದರೆ, ಇತರ ಭಾಷೆಗಳನ್ನು ಕಲಿಯುವ ಭರದಲ್ಲಿ ನಮ್ಮ ಮಾತೃಭಾಷೆ ಕನ್ನಡ ಹಾಗೂ ನಾಡಿನ ಸಂಸ್ಕೃತಿಯನ್ನು ಮರೆಯಬಾರದು. ಮಾತೃಭಾಷೆಯ ಬಗ್ಗೆ ಅಭಿಮಾನ ಮತ್ತು ಗೌರವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಕನ್ನಡ ಭಾಷೆಯ ಉಳಿವು ಮತ್ತು ಅಭಿವೃದ್ಧಿಗೆ ಡಿಜಿಟಲ್ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳು ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸುವ ಮೂಲಕ ಭಾಷೆಯನ್ನು ಮುಂದಿನ ಪೀಳಿಗೆಗೆ ಸಮರ್ಥವಾಗಿ ತಲುಪಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಆಕರ್ಷಕ ನೃತ್ಯ ಕಾರ್ಯಕ್ರಮಗಳು ಜರುಗಿದವು.
ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾ ಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕಿ ಡಾ. ಮಾರ್ಗರೆಟ್ ಫಾತಿಮಾ ಮೇರಿ, ಕಾರ್ಯದರ್ಶಿ ಮೇರಿ ವಿಜಯಾ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಲಭೀಮ ಸೇರಿದಂತೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



