

Demand for amendment to Protection Act following murder and assault of lawyers
ವಕೀಲರ ಹತ್ಯೆ, ಹಲ್ಲೆ ಖಂಡಿಸಿ ರಕ್ಷಣಾ ಕಾಯ್ದೆ ತಿದ್ದುಪಡಿಗೆ ಆಗ್ರಹ

ವಕೀಲರ ಮೇಲಿನ ದಾಳಿಗಳನ್ನು ಜಾಮೀನು ರಹಿತ ಅಪರಾಧವನ್ನಾಗಿ ಪರಿಗಣಿಸಬೇಕು: ಮಲ್ಲಿಕಾರ್ಜುನ ಮುಸಾಲಿ
ಗಂಗಾವತಿ, ನ.3: ರಾಜ್ಯದಲ್ಲಿ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹತ್ಯೆ, ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣಗಳನ್ನು ಖಂಡಿಸಿರುವ ಗಂಗಾವತಿ ತಾಲ್ಲೂಕು ವಕೀಲರ ಸಂಘ, ವಕೀಲರ ರಕ್ಷಣೆಗಾಗಿ ಜಾರಿಯಲ್ಲಿರುವ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ-2023ಕ್ಕೆ ಸೂಕ್ತ ತಿದ್ದುಪಡಿ ತಂದು ಮತ್ತಷ್ಟು ಬಲಪಡಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಬೆಂಗಳೂರು ವೈಟ್ಫೀಲ್ಡ್ನ ವಕೀಲ ಮಂಜುನಾಥ್ ಅವರ ಹತ್ಯೆ, ವಕೀಲ ಶ್ರೀರಾಮ್ ಅವರ ಹತ್ಯೆ ಹಾಗೂ ವೆಂಕಟರಮಣ ಸನ್ನಕ್ಕಿ ಅವರ ಮೇಲಿನ ಹತ್ಯೆಯತ್ನದಂತಹ ಘಟನೆಗಳು ವಕೀಲ ಸಮುದಾಯದಲ್ಲಿ ಆತಂಕ ಮೂಡಿಸಿವೆ. ಕ್ಷುಲ್ಲಕ ಕಾರಣಗಳಿಗೂ ವಕೀಲರ ಮೇಲೆ ಹಲ್ಲೆ, ಹತ್ಯೆ ಹಾಗೂ ಜೀವ ಬೆದರಿಕೆಯಂತಹ ಕೃತ್ಯಗಳು ನಡೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಘಟನೆಗಳನ್ನು ಗಂಗಾವತಿ ತಾಲ್ಲೂಕು ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘದ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಹೇಳಿದರು.
ವಕೀಲರು ನ್ಯಾಯಾಂಗ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು, ಸಮಾಜದಲ್ಲಿ ನ್ಯಾಯ ದೊರಕಿಸಿಕೊಡುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಆದರೆ ವಕೀಲರೇ ಭಯ ಹಾಗೂ ಅಭದ್ರತೆಯ ವಾತಾವರಣದಲ್ಲಿ ವೃತ್ತಿ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ವಕೀಲರ ಮೇಲಿನ ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣಗಳನ್ನು ಜಾಮೀನು ರಹಿತ ಅಪರಾಧವನ್ನಾಗಿ ಪರಿಗಣಿಸಬೇಕು. ಅಲ್ಲದೆ, ಪ್ರಸ್ತುತ ಇರುವ ಶಿಕ್ಷೆಯ ಪ್ರಮಾಣವನ್ನು ಕನಿಷ್ಠ 5ರಿಂದ 7 ವರ್ಷಗಳವರೆಗೆ ಹೆಚ್ಚಿಸುವ ಮೂಲಕ ಕಾಯ್ದೆಯನ್ನು ಮತ್ತಷ್ಟು ಕಠಿಣಗೊಳಿಸಬೇಕು ಎಂದು ಮಲ್ಲಿಕಾರ್ಜುನ ಮುಸಾಲಿ ಆಗ್ರಹಿಸಿದರು.
ವಕೀಲರಿಗೆ ಸೂಕ್ತ ಭದ್ರತೆ ಒದಗಿಸಲು ಒತ್ತಾಯ
ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಂ. ಮಂಜುನಾಥ ಮಾತನಾಡಿ, ವಕೀಲರ ರಕ್ಷಣೆ ಕಾಯ್ದೆ ಜಾರಿಯಲ್ಲಿದ್ದರೂ ವಕೀಲರ ಮೇಲಿನ ದಾಳಿ ಪ್ರಕರಣಗಳು ಮುಂದುವರಿಯುತ್ತಿರುವುದು ಆತಂಕದ ಸಂಗತಿಯಾಗಿದೆ. ವಕೀಲರು ನಿರ್ಭೀತಿಯಿಂದ ವೃತ್ತಿ ನಿರ್ವಹಿಸಲು ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು. ಕಾಯ್ದೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಅಗತ್ಯ ತಿದ್ದುಪಡಿಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ವಕೀಲರ ಮೇಲೆ ಹಲ್ಲೆ ನಡೆಸುವವರು ಹಾಗೂ ಜೀವ ಬೆದರಿಕೆ ಹಾಕುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ತಹಶೀಲ್ದಾರರಿಗೆ ಮನವಿ ಸಲ್ಲಿಕೆ
ವಕೀಲರ ರಕ್ಷಣೆ ಕಾಯ್ದೆಗೆ ತಿದ್ದುಪಡಿ ತಂದು ಮತ್ತಷ್ಟು ಬಲಪಡಿಸುವಂತೆ ಒತ್ತಾಯಿಸಿ ಗಂಗಾವತಿ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ವಕೀಲರು ಗಂಗಾವತಿ ತಹಶೀಲ್ದಾರರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ರವಾನಿಸಿ, ರಾಜ್ಯದಲ್ಲಿ ವಕೀಲರ ಮೇಲಿನ ಹಲ್ಲೆ, ಹತ್ಯೆ ಹಾಗೂ ಜೀವ ಬೆದರಿಕೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ವಕೀಲರ ರಕ್ಷಣೆಗೆ ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ವಕೀಲರ ಸಂಘ ಹಮ್ಮಿಕೊಂಡಿರುವ ಪ್ರತಿಭಟನೆಗೆ ಗಂಗಾವತಿ ತಾಲ್ಲೂಕು ವಕೀಲರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪ್ರಕಾಶ ರುಸುಬಿ, ಪದಾಧಿಕಾರಿಗಳಾದ ಸೋಮನಾಥ ಪಟ್ಟಣಶೆಟ್ಟಿ, ಶರತ್ ದಂಡಿನ್, ಕೆ. ಕೃಷ್ಣಪ್ಪ, ಸುಭಾಷ್ ಚಂದ್ರ, ಹುಸೇನಪ್ಪ ಹಂಚಿನಾಳ, ಶಿವಪ್ಪ ಯಲಬುರ್ಗಿ, ಅಕ್ಕಮಹಾದೇವಿ, ಮಲ್ಲಮ್ಮ, ವಿಷ್ಣುವರ್ಧನ್ ರೆಡ್ಡಿ, ಎ.ಜೆ. ರಂಗನಾಥ, ಚಂದಾಹುಸೇನ ಬಸಾಪಟ್ಟಣ, ವೀರೇಶ ಕಮಲಾಪುರ, ಪ್ರಕಾಶ, ಅರುಕುಮಾರ ಅರಳಿ, ಪರಶುರಾಮ, ಶೇಷಗಿರಿ, ತಿಮ್ಮಣ್ಣ, ವೆಂಕಟೇಶ ಸಾಗರ್, ರಜಾಕ್, ಯಮನೂರಪ್ಪ ನಾಯಕ, ಜಾವೇದ್, ಸೌಭಾಗ್ಯ ಸೇರಿದಂತೆ ಹಲವು ವಕೀಲರು ಉಪಸ್ಥಿತರಿದ್ದರು.



