ವಿಶ್ವಾಸಘಾತಕರು ಮತ್ತು ನಮ್ಮ ತಿಳಿವಳಿಕೆ

H.Mallikarjun
H.Mallikarjun - Kalyanasiri
4 Min Read
ಜಾಹೀರಾತು
ಜಾಹೀರಾತು
Traitors and Our Understanding

ವಿಶ್ವಾಸಘಾತಕರು ಮತ್ತು ನಮ್ಮ ತಿಳಿವಳಿಕೆ

ದೇವರ ಮೇಲೆ ವಿಶ್ವಾಸವಿತ್ತು
ಆದರೆ ಆತ ಏನೂ ಮಾಡಲಿಲ್ಲ. ಪಕ್ಷಪಾತ ಮಾಡಿದ, ದುಷ್ಟರ ಪರವಾಗಿ, ಮುಖವಾಡದವರ ಸಲುವಾಗಿ ನಿಂತ. ಮುಗ್ಧರನ್ನು ಮಾತ್ರ ಬಹಳ ಗೋಳಾಡಿಸಿದ

ಜಾಹೀರಾತು

ಕಾನೂನಿನ ಮೇಲೆ ಭರವಸೆ ಇತ್ತು.

ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ, ಅಮಾಯಕರಿಗೆ ರಕ್ಷಣೆ ದೊರೆಯುತ್ತದೆ. ಹೇಗೋ ನೆಮ್ಮದಿಯಿಂದ ಬದುಕಬಹುದು ಎಂಬ ನಂಬಿಕೆ ಇತ್ತು. ಅದೂ ಕೈಗೂಡಲಿಲ್ಲ. ಕಾನೂನು ಬಲಿಷ್ಠರ ಪಾಲಾಯಿತು. ಅಲ್ಲೂ ನಿರಾಸೆಯಾಯಿತು.

ದೇವರು, ಕಾನೂನು ಎರಡೂ ವಿಫಲವಾದರೂ, ಮನುಷ್ಯನ ನೈತಿಕತೆ ಮತ್ತು ನಾಗರಿಕ ಪ್ರಜ್ಞೆಯಾದರೂ ಒಳ್ಳೆಯದು-ಕೆಟ್ಟದ್ದನ್ನು ಗುರುತಿಸಿ ನಮಗೆ ನ್ಯಾಯ ನೀಡುತ್ತದೆ ಎಂಬ ನಂಬಿಕೆ ಇತ್ತು.

ನಮ್ಮ ನಡುವೆ ಶಿಕ್ಷಕರು, ವೈದ್ಯರು, ನ್ಯಾಯಾಧೀಶರು, ವಿಜ್ಞಾನಿಗಳು, ತಂತ್ರಜ್ಞರು, ಸ್ವಾಮಿಗಳು, ಸಮಾಜ ಸೇವಕರು, ಪೊಲೀಸರು, ರಾಜಕಾರಣಿಗಳು ಇದ್ದಾರೆ. ಅವರಾದರೂ ನಮ್ಮ ನಡುವಿನ ಕ್ರೂರಿಗಳು ಮತ್ತು ಕರುಣಾಮಯಿಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ ಅದಕ್ಕೆ ತಕ್ಕಂತೆ ವರ್ತಿಸುತ್ತಾರೆ ಎಂಬ ವಿಶ್ವಾಸವಿತ್ತು.

ಕೊನೆಗೆ ಅವರೂ ಕೈಬಿಟ್ಟರು.

ನನ್ನ ಬಂಧು, ನನ್ನ ಜಾತಿಯವ, ನನ್ನ ಸ್ನೇಹಿತ, ನನ್ನ ಭಾಷೆಯವ, ನನ್ನ ಶಿಷ್ಯ, ನನ್ನ ಗುರು, ನನ್ನ ಸಂಘದವ, ನನ್ನ ಊರಿನವ, ನನ್ನ ಗ್ರಾಹಕ—ಇವರೆಲ್ಲರ ಪರವಾಗಿ ನ್ಯಾಯದ ತಕ್ಕಡಿಯನ್ನು ತಮ್ಮ ಸ್ವಾರ್ಥಕ್ಕೆ ತಕ್ಕಂತೆ ಬಗ್ಗಿಸಿಕೊಂಡ ಸಮಾಜ ನಮ್ಮದು.

ಮನಸ್ಸುಗಳೇ ಭ್ರಷ್ಟಗೊಂಡಿರುವಾಗ ನಾವು ನಂಬುವುದಾದರೂ ಯಾರನ್ನು?

ಒಳ್ಳೆಯವರನ್ನೂ ಕೆಟ್ಟವರನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು, ತಮ್ಮ ಅನುಕೂಲಕ್ಕೆ ತಕ್ಕಂತೆ ಅಳತೆ ಮಾಡಿದರೆ ವ್ಯವಸ್ಥೆಯ ಮೇಲೆ ನಂಬಿಕೆ ಬರುವುದಾದರೂ ಹೇಗೆ?

ಆತ್ಮವಂಚನೆಯ ಏಳು ಸುತ್ತಿನ ಕೋಟೆಯೊಳಗೆ ಸಿಲುಕಿರುವ ಮಕ್ಕಳು ಮತ್ತು ಯುವಕರನ್ನು ಕಾಪಾಡುವುದು ಹೇಗೆ?

ಅವನೊಬ್ಬ ದೊಡ್ಡ ಸಾಹಿತಿ. ಅಕ್ಷರದಲ್ಲಿಯೇ ಆದರ್ಶಗಳನ್ನು ಹೇಳುತ್ತಾನೆ. ಆದರೆ ಮಾಡುವ ಕೆಲಸಗಳು ಅದಕ್ಕೆ ವಿರುದ್ಧವಾಗಿರುತ್ತವೆ.

ಅವನೊಬ್ಬ ರಾಜಕಾರಣಿ. ಮಾತಿನಲ್ಲೇ ಅರಮನೆ ಕಟ್ಟುತ್ತಾನೆ. ವಾಸ್ತವದಲ್ಲಿ ಬಾಯಿ ಬಿಟ್ಟರೆ ಬಣ್ಣ ಬಯಲಾಗುತ್ತದೆ.

ಅವನೊಬ್ಬ ಧರ್ಮಾಧಿಕಾರಿ. ನ್ಯಾಯ-ನೀತಿಯ ಬಗ್ಗೆ ಪುಂಖಾನುಪುಂಖವಾಗಿ ಬೋಧಿಸುತ್ತಾನೆ. ಆದರೆ ನಿಜ ಬದುಕಿನಲ್ಲಿ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾನೆ.

ಪ್ರೀತಿಯನ್ನೇ ಗುರುತಿಸಲಾಗದ, ದ್ವೇಷವನ್ನೇ ಒಪ್ಪಿಕೊಳ್ಳುವ ಹಂತಕ್ಕೆ ನಮ್ಮ ಅಕ್ಷರಸ್ಥ ಬುದ್ಧಿವಂತರು ತಲುಪಿದ್ದಾರೆ.

ಹೀಗೆ ಸಾಗುತ್ತಲೇ ಇದೆ ಬದುಕು.

ಮಾತು, ಅಕ್ಷರ, ಜ್ಞಾನ, ಪ್ರೀತಿ, ವಿಶ್ವಾಸ, ಕರುಣೆ ಮತ್ತು ಮಾನವೀಯತೆ ನಮ್ಮ ವ್ಯಕ್ತಿತ್ವದ ಭಾಗವಾಗುವವರೆಗೂ ಭಾರತೀಯ ಸಮಾಜ ಪ್ರತಿದಿನ ಅಪಾಯದ ಅಂಚಿಗೆ ಸರಿಯುತ್ತಿರುತ್ತದೆ.

ನನ್ನಂತಹವರ ಬರಹಕ್ಕೆ ವಿಷಯವಾಗುತ್ತಲೇ ಇರುತ್ತದೆ—ಮುಖವಾಡಗಳು ಕಳಚುವವರೆಗೂ.

ಜ್ಞಾನ ಎಂದರೇನು?

ಆದ್ದರಿಂದ ನಾವೆಲ್ಲರೂ ಎಚ್ಚೆತ್ತುಕೊಂಡು ಜ್ಞಾನಕ್ಕೆ ಮಹತ್ವ ನೀಡಬೇಕಿದೆ.

ಹಾಗಾದರೆ ಜ್ಞಾನ ಎಂದರೇನು?

ಜ್ಞಾನವನ್ನು ಗುರುತಿಸುವುದು ಹೇಗೆ?

ಜ್ಞಾನದ ಬೆಳವಣಿಗೆ ಹೇಗೆ?

ಜ್ಞಾನದ ವ್ಯಾಪ್ತಿ ಏನು?

ಜ್ಞಾನದ ಮಿತಿ ಏನು?

ಜ್ಞಾನದ ಉಪಯೋಗ ಏನು?

ಪ್ರತಿನಿತ್ಯ ನಾವು ಜ್ಞಾನದ ಬಗ್ಗೆ ಒಂದಲ್ಲ ಒಂದು ಸಂದರ್ಭದಲ್ಲಿ ಪ್ರಸ್ತಾಪಿಸುತ್ತಲೇ ಇರುತ್ತೇವೆ. ಅದರ ಬಗ್ಗೆ ಸ್ವಲ್ಪ ಅರ್ಥಮಾಡಿಕೊಂಡರೆ ಉತ್ತಮ ಎಂಬ ಹಿನ್ನೆಲೆಯಲ್ಲಿ ಈ ಚಿಂತನೆ.

ಜ್ಞಾನ ಎಂಬ ಪದದ ಅರ್ಥ ಬಹಳ ವಿಶಾಲ. ಆದರೆ ದಿನನಿತ್ಯದ ಬದುಕಿನ ಸರಳ ಅರ್ಥದಲ್ಲಿ ಅದನ್ನು ಹೀಗೆ ಗ್ರಹಿಸಬಹುದು.

ಜ್ಞಾನದ ಪ್ರಮುಖ ಅಡಿಪಾಯಗಳು

  • ಅಧ್ಯಯನ
  • ಚಿಂತನೆ
  • ಅನುಭವ

ಇದರೊಂದಿಗೆ ಓದು, ಪ್ರವಾಸ, ಗ್ರಹಿಕೆ, ಮಿದುಳಿನ ಸಾಮರ್ಥ್ಯ, ವಾಸಿಸುವ ಪರಿಸರ, ಅನುವಂಶೀಯ ಗುಣಗಳು ಸೇರಿದಂತೆ ಹಲವು ಅಂಶಗಳು ಜ್ಞಾನದ ಬೆಳವಣಿಗೆಯಲ್ಲಿ ಪಾತ್ರವಹಿಸುತ್ತವೆ.

ಜ್ಞಾನ ಎಂಬುದು 360 ಡಿಗ್ರಿ ದೃಷ್ಟಿಕೋನದ ಸಂಪೂರ್ಣ ವೃತ್ತ. ಅದರಿಂದ ಹೊರತಾದ ಯಾವ ವಿಷಯವೂ ಇಲ್ಲ. ಆದರೆ ಅದರ ಸಂಪೂರ್ಣ ನೋಟ ಮನುಷ್ಯನಿಗೆ ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ನಿಲುಕಿದಷ್ಟನ್ನು ಮಾತ್ರ ನೋಡಲು ಸಾಧ್ಯ.

ನಿಜವಾದ ವ್ಯತ್ಯಾಸ ಇರುವುದು ಇಲ್ಲಿಯೇ.

ನೀವು ಯಾವುದೋ ಒಂದು ವಿಷಯದ ಬಗ್ಗೆ ಹೊಂದಿರುವ ಸಂಪೂರ್ಣ ತಿಳಿವಳಿಕೆ ಅಥವಾ ಮಾಹಿತಿ ಮಾತ್ರ ಜ್ಞಾನವಲ್ಲ.

ಕೇವಲ ಅಧ್ಯಯನ, ಕೇವಲ ಚಿಂತನೆ, ಕೇವಲ ಅನುಭವ—ಇವುಗಳಲ್ಲಿ ಯಾವುದೊಂದರಿಂದಲೂ ಪೂರ್ಣ ಜ್ಞಾನ ದೊರೆಯುವುದಿಲ್ಲ. ಅಧ್ಯಯನ ಮತ್ತು ಚಿಂತನೆ, ಅಧ್ಯಯನ ಮತ್ತು ಅನುಭವ, ಚಿಂತನೆ ಮತ್ತು ಅನುಭವ—ಇವುಗಳ ಸಮನ್ವಯದ ಜೊತೆಗೆ ಗ್ರಹಿಕೆಯ ಸಾಮರ್ಥ್ಯವೂ ಮುಖ್ಯವಾಗುತ್ತದೆ.

ಎಷ್ಟೋ ಬಾರಿ ಕೇವಲ ಅಧ್ಯಯನ, ಕೇವಲ ಚಿಂತನೆ ಅಥವಾ ಕೇವಲ ಅನುಭವವೇ ನಮಗೆ ಭಾರವಾಗಿ, ನಮ್ಮ ದಿಕ್ಕನ್ನೇ ತಪ್ಪಿಸಬಹುದು.

ಖುರಾನ್, ಬೈಬಲ್, ಭಗವದ್ಗೀತೆ, ವೇದ-ಉಪನಿಷತ್ತುಗಳು ಅಥವಾ ವಿವಿಧ ರಾಜಕೀಯ-ಸಾಮಾಜಿಕ ಸಿದ್ಧಾಂತಗಳ ಆಳವಾದ ಅಧ್ಯಯನವು ಕೆಲವೊಮ್ಮೆ ವ್ಯಕ್ತಿಯ ಸ್ವತಂತ್ರ ಚಿಂತನೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಯಾವುದೇ ವಿಚಾರಧಾರೆಯನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸದೆ ಅಕ್ಷರಶಃ ಅಳವಡಿಸಿಕೊಂಡಾಗ, ‘ನಾವೇ ಶ್ರೇಷ್ಠ, ನಮ್ಮದೇ ಶ್ರೇಷ್ಠ’ ಎಂಬ ಮನೋಭಾವ ಬೆಳೆಯುವ ಅಪಾಯವಿದೆ.

ಆದ್ದರಿಂದ ಓದು, ಅಧ್ಯಯನ, ಚಿಂತನೆ, ಅನುಭವ ಮತ್ತು ಗ್ರಹಿಕೆ—ಇವುಗಳ ಸಮನ್ವಯವೇ ಜ್ಞಾನವನ್ನು ಅರ್ಥಪೂರ್ಣಗೊಳಿಸುತ್ತದೆ.

ಮನುಷ್ಯ ಸೃಷ್ಟಿಯ ಸಹಜತೆಯಿಂದ ದೂರವಾಗಿ ತನ್ನ ಮೇಲೆ ಧರ್ಮ, ದೇವರು ಮತ್ತು ವಿವಿಧ ಸಿದ್ಧಾಂತಗಳ ಒತ್ತಡವನ್ನು ಹೇರಿಕೊಂಡಾಗ ಅದರ ಪರಿಣಾಮವಾಗಿ ಸಮಷ್ಟಿ ಪ್ರಜ್ಞೆಯ ಕೊರತೆ ಉಂಟಾಗಬಹುದು.

ಇದನ್ನು ಅರ್ಥಮಾಡಿಕೊಂಡು ಬದುಕಿನಲ್ಲಿ ಅಳವಡಿಸಿಕೊಂಡರೆ, ಬದುಕು, ಸಮಾಜ ಮತ್ತು ದೇಶ ಹೆಚ್ಚು ನೆಮ್ಮದಿಯಿಂದ ಸಾಗಲು ಸಾಧ್ಯ.

ಪ್ರಬುದ್ಧ ಮನಸ್ಸು – ಪ್ರಬುದ್ಧ ಸಮಾಜ

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ.

– ವಿವೇಕಾನಂದ ಎಚ್.ಕೆ.

Total Views: 0
ಜಾಹೀರಾತು
Share This Article
Leave a Comment