
The epic Ramayana is a collection of verses that emerged from the tender heart of the great sage Valmiki: Prof. Kariguli
“ವಾಲ್ಮೀಕಿ ಮಹರ್ಷಿಯವರ ಮಧುರ ಹೃದಯದಿಂದ ವ್ಯಕ್ತವಾದ ಶ್ಲೋಕಗುಚ್ಚವೇ ಮಹಾಕಾವ್ಯ ರಾಮಾಯಣ: ಪ್ರೊ. ಕರಿಗೂಳಿ

ಶ್ರೀರಾಮನಗರ: ವಾಲ್ಮೀಕಿ ಮಹರ್ಷಿಯವರ ಮಧುರ ಹೃದಯದಿಂದ ವ್ಯಕ್ತವಾದ ಶ್ಲೋಕಗುಚ್ಚವೇ ಮಹಾಕಾವ್ಯ ರಾಮಾಯಣ. ರಾಮಾಯಣವು ಜಗತ್ತಿನಾದ್ಯಂತ ಪ್ರಭಾವ ಬೀರಿದ ಮಹಾನ್ ಕಾವ್ಯವಾಗಿದ್ದು, ಅದರಲ್ಲಿ ಅಡಕವಾಗಿರುವ ಜೀವನ ಮೌಲ್ಯಗಳು ಇಂದಿನ ಸಮಾಜಕ್ಕೂ ಅತ್ಯಂತ ಅಗತ್ಯವಾಗಿವೆ ಎಂದು ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕರಿಗೂಳಿ ಹೇಳಿದರು.
ಗಂಗಾವತಿ ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರಾಂಶುಪಾಲರು, ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ಆಡಳಿತ ಸಿಬ್ಬಂದಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಡಾ. ವಿರೂಪಾಕ್ಷ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಹರ್ಷಿ ವಾಲ್ಮೀಕಿ ದೇಶ ಕಂಡ ಶ್ರೇಷ್ಠ ಕವಿಯಷ್ಟೇ ಅಲ್ಲದೆ, ಮಹಾನ್ ಚಿಂತಕರಾಗಿದ್ದರು. ವಾಲ್ಮೀಕಿ ಅವರು ಮೂಲತಃ ದರೋಡೆಕೋರರಾಗಿದ್ದರು ಎಂಬ ವಾದಕ್ಕೆ ಯಾವುದೇ ಆಧಾರವಿಲ್ಲ. ಜಗತ್ತಿಗೆ ಮಹಾನ್ ಕಾವ್ಯವಾದ ರಾಮಾಯಣವನ್ನು ನೀಡಿದ ಆದಿಕವಿಯಾಗಿ ಅವರನ್ನು ಸ್ಮರಿಸಬೇಕು ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕ ಶಂಕರಪ್ಪ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ತಮ್ಮ ಅಗಾಧ ಜ್ಞಾನವನ್ನು ರಾಮಾಯಣದ ಮೂಲಕ ಭಾರತೀಯ ಸಮಾಜಕ್ಕೆ ನೀಡಿದ್ದಾರೆ. ಉತ್ತಮ ರಾಜನ ಗುಣಗಳು, ಸತಿಪತಿಗಳ ಸಂಬಂಧ, ಸಹೋದರರ ಪ್ರೀತಿ-ವಿಶ್ವಾಸ ಸೇರಿದಂತೆ ಜೀವನದ ಹಲವು ಶ್ರೇಷ್ಠ ಮೌಲ್ಯಗಳನ್ನು ರಾಮಾಯಣ ಒಳಗೊಂಡಿದೆ. ವಿದ್ಯಾರ್ಥಿಗಳು ಅಕ್ಷರಜ್ಞಾನದ ಮಹತ್ವವನ್ನು ಅರಿತುಕೊಂಡು, ತಮ್ಮ ಜೀವನವನ್ನು ಉನ್ನತ ಹಾಗೂ ಸನ್ಮಾರ್ಗದಲ್ಲಿ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ವೀರೇಶ್ ಮಾತನಾಡಿ, ರಾಮಾಯಣ ಮಹಾಕಾವ್ಯವು ಸಮಾಜದ ಮೌಲ್ಯಗಳಿಗೆ ಹಿಡಿದ ಕನ್ನಡಿಯಾಗಿದೆ.
ಇಂತಹ ಶ್ರೇಷ್ಠ ಕಾವ್ಯವನ್ನು ರಚಿಸಿದ ಮುನಿಯೋಗಿ ಮಹರ್ಷಿ ವಾಲ್ಮೀಕಿ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಕರಿಗೂಳಿ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯವು ಪ್ರಪಂಚದಾದ್ಯಂತ ತನ್ನದೇ ಆದ ಪ್ರಭಾವ ಬೀರಿದ್ದು, ವಿಶ್ವಕ್ಕೆ ಅನೇಕ ಶ್ರೇಷ್ಠ ಮೌಲ್ಯಗಳನ್ನು ಪರಿಚಯಿಸಿದೆ.
ರಾಮಾಯಣದ ವಿವಿಧ ಪಾತ್ರಗಳು ಹಾಗೂ ಅದರಲ್ಲಿರುವ ಜೀವನ ಮೌಲ್ಯಗಳು ಇಂದಿಗೂ ಜನರಿಗೆ ಮಾರ್ಗದರ್ಶನ ನೀಡುತ್ತಿವೆ. ಇಂತಹ ಮಹಾನ್ ಕಾವ್ಯವನ್ನು ನೀಡಿದ ವಾಲ್ಮೀಕಿ ಮಹರ್ಷಿಯವರನ್ನು ಮಧುರ ಗಾನಕೋಗಿಲೆಯಂತೆ ಸ್ಮರಿಸಬಹುದು ಎಂದರು. ನಾಡಿನ ಎಲ್ಲಾ ಮಹನೀಯರು ಇಡೀ ದೇಶ ಮತ್ತು ಸಮಾಜಕ್ಕೆ ಸೇರಿದವರು. ಅವರನ್ನು ಯಾವುದೇ ಒಂದು ಜಾತಿ ಅಥವಾ ವರ್ಗಕ್ಕೆ ಸೀಮಿತಗೊಳಿಸಬಾರದು.
ಮಹನೀಯರು ನೀಡಿರುವ ಕೊಡುಗೆಗಳು ಮತ್ತು ಅವರು ಸಾರಿದ ಮೌಲ್ಯಗಳು ಎಲ್ಲರಿಗೂ ಸೇರಿವೆ. ರಾಮಾಯಣದಂತಹ ಮಹಾನ್ ಕಾವ್ಯಗಳಲ್ಲಿರುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂದೇಶವು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ರವಿಕುಮಾರ, ಉಪನ್ಯಾಸಕರಾದ ಡಾ. ದೇವರಾಜ, ಕನಕಪ್ಪ, ಆಡಳಿತ ಸಿಬ್ಬಂದಿಯವರಾದ ಜಬೀನಾ ಬೇಗಂ, ವಿನಾಯಕ, ಸಹಾಯಕ ಸಿಬ್ಬಂದಿಯಾದ ಚಿನ್ನವರಪ್ರಸಾದ್, ಶಾಂತಿ, ಶರಣಬಸವ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.”



