ಸಿದ್ದನಕೊಳ್ಳ ಮಠಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲು ಆಗ್ರಹ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

  • ಸಿದ್ದನಕೊಳ್ಳ ಮಠಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲು ಆಗ್ರಹ ದಾಸೋಹ, ಧಾರ್ಮಿಕ ಸೇವೆ ಹಾಗೂ ಕಲಾ ಪೋಷಣೆಯಲ್ಲಿ ನಿರಂತರ ಕೊಡುಗೆ
  • ಬಾಗಲಕೋಟೆ: ಜಿಲ್ಲೆಯ ಇಲಕಲ್ಲ ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಸಿದ್ದನಕೊಳ್ಳದ ಕಲಾಪೋಷಕರ ಮತ್ತು ನಿರಂತರ ದಾಸೋಹ ಮಠಕ್ಕೆ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಸಾರ್ವಜನಿಕರು ಹಾಗೂ ಭಕ್ತಾದಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
    ಸಿದ್ದನಕೊಳ್ಳವು ಪ್ರಾಚೀನ ಕಾಲದಿಂದಲೂ ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯನ್ನು ಹೊಂದಿದ್ದು, ರಾಷ್ಟ್ರಕೂಟರು ಮತ್ತು ಚಾಲುಕ್ಯರ ಕಾಲದ ಪರಂಪರೆಯೊಂದಿಗೆ ಗುರುತಿಸಿಕೊಂಡಿದೆ. ಅನೇಕ ಸಿದ್ಧಪುರುಷರು ಹಾಗೂ ಮಹಾತ್ಮರು ಇಲ್ಲಿ ತಪಸ್ಸು ಮಾಡಿರುವ ಪವಿತ್ರ ಕ್ಷೇತ್ರವಾಗಿ ಇದು ಭಕ್ತರ ನಂಬಿಕೆಗೆ ಪಾತ್ರವಾಗಿದೆ. ಪಟ್ಟದಕಲ್ಲು ಮತ್ತು ಐಹೊಳೆಯಂತಹ ಐತಿಹಾಸಿಕ ತಾಣಗಳ ಸಮೀಪದಲ್ಲಿರುವ ಸಿದ್ದನಕೊಳ್ಳವು ಸಿದ್ದಪ್ಪಜ್ಜರು ನೆಲೆಸಿದ ಪುಣ್ಯಕ್ಷೇತ್ರವೆಂಬ ಪ್ರಸಿದ್ಧಿಯನ್ನೂ ಹೊಂದಿದೆ.
    ಶ್ರೀಮಠವು ದಶಕಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದೆ. ಪ್ರತಿವರ್ಷ ಜನವರಿ 14ರಿಂದ ಮೂರು ದಿನಗಳ ಕಾಲ ನಡೆಯುವ ಜಾತ್ರಾಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಸಾಧಕರನ್ನು ಗುರುತಿಸಿ ‘ಶ್ರೀಸಿದ್ದಶ್ರೀ ಪ್ರಶಸ್ತಿ’ ನೀಡಿ ಗೌರವಿಸುವುದು, ಪ್ರತಿಭಾನ್ವಿತರಿಗೆ ವೇದಿಕೆ ಕಲ್ಪಿಸುವುದು, ಚಲನಚಿತ್ರೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಠವು ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಬೆಳೆಸಿಕೊಂಡಿದೆ.
    ಪ್ರಸ್ತುತ ಮಠದ ಧರ್ಮಾಧಿಕಾರಿಗಳಾದ ಡಾ. ಶಿವಕುಮಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ಶ್ರೀಮಠದ ಸೇವಾ ಕಾರ್ಯಗಳು ಮುಂದುವರಿದಿವೆ. ಮಠಕ್ಕೆ ಆಗಮಿಸುವ ಭಕ್ತರು, ದೀನದಲಿತರು ಹಾಗೂ ಪ್ರವಾಸಿಗರಿಗೆ ಯಾವುದೇ ಭೇದಭಾವವಿಲ್ಲದೆ ನಿರಂತರ ಅನ್ನದಾಸೋಹ ಮತ್ತು ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ. ಬಸವಣ್ಣನವರ ‘ಕಾಯಕವೇ ಕೈಲಾಸ’ ಹಾಗೂ ದಾಸೋಹ ತತ್ವಗಳನ್ನು ಇಲ್ಲಿ ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂಬುದು ಭಕ್ತರ ಅಭಿಪ್ರಾಯವಾಗಿದೆ.
    ‘ಕಲಾಪೋಷಕರ ಮಠ’ ಎಂಬ ಅನ್ವರ್ಥನಾಮ ಪಡೆದಿರುವ ಸಿದ್ದನಕೊಳ್ಳ ಮಠವು ಉತ್ತರ ಕರ್ನಾಟಕದ ಜಾನಪದ ಕಲೆಗಳಾದ ದೊಡ್ಡಾಟ, ಬಯಲಾಟ, ನಾಟಕ, ಪ್ರವಚನ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಕಲಾವಿದರನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದಿದೆ. ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಮೂಲಕ ಕಲೆ ಮತ್ತು ಸಂಸ್ಕೃತಿಯ ಉಳಿವಿಗೆ ಮಠ ತನ್ನದೇ ಆದ ಕೊಡುಗೆ ನೀಡಿದೆ.
    ಮಠದ ಆವರಣದಲ್ಲಿ ಚಾಲುಕ್ಯರ ಕಾಲಕ್ಕೆ ಸೇರಿದ ಅಪರೂಪದ ಕುಳಿತ ಭಂಗಿಯ ಲಜ್ಜಾಗೌರಿ ದೇವಿಯ ವಿಗ್ರಹ ಹಾಗೂ ಪುರಾತನ ಸಿದ್ದೇಶ್ವರ ದೇವಾಲಯವೂ ಇದೆ. ಈ ಕ್ಷೇತ್ರವು ಧಾರ್ಮಿಕ ಹಾಗೂ ಐತಿಹಾಸಿಕ ಪ್ರವಾಸೋದ್ಯಮದ ದೃಷ್ಟಿಯಿಂದಲೂ ಮಹತ್ವ ಹೊಂದಿದೆ.
    ದಾಸೋಹ, ಧಾರ್ಮಿಕ ಸೇವೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಕಲಾ ಪೋಷಣೆಯ ಮೂಲಕ ಸಿದ್ದನಕೊಳ್ಳ ಮಠವು ಹಲವು ವರ್ಷಗಳಿಂದ ಸಲ್ಲಿಸುತ್ತಿರುವ ಸೇವೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸುವ ಅಗತ್ಯವಿದೆ. ಮಠದ ಸೇವಾ ಸಾಧನೆಗಳನ್ನು ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಸಿದ್ದನಕೊಳ್ಳ ಮಠವನ್ನು ಆಯ್ಕೆ ಮಾಡಬೇಕು ಎಂಬುದು ಸಿದ್ದನಕೊಳ್ಳ, ಬೆನಕವಾರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಮತ್ತು ಸಾರ್ವಜನಿಕರ ಒಕ್ಕೊರಲಿನ ಆಗ್ರಹವಾಗಿದೆ.
    – ಡಾ. ಪ್ರಭು ಗಂಜಿಹಾಳ
Total Views: 0
ಜಾಹೀರಾತು
Share This Article
Leave a Comment