
Navaratri celebrations at Chandramma's doll house in Moodalapalya.
ಮೂಡಲಪಾಳ್ಯದಲ್ಲಿ ಚಂದ್ರಮ್ಮ ಅವರ ಗೊಂಬೆ ಮನೆಯಲ್ಲಿ ನವರಾತ್ರಿ ಸಂಭ್ರಮ
ಎರಡು ಮಹಡಿಗಳಲ್ಲಿ ಸಾವಿರಕ್ಕೂ ಅಧಿಕ ಗೊಂಬೆಗಳ ಪ್ರದರ್ಶನ; ಗೊಂಬೆ ಪ್ರಿಯರ ಗಮನ ಸೆಳೆಯುತ್ತಿರುವ ಅಪರೂಪದ ಸಂಭ್ರಮ
ಕಲ್ಯಾಣಸಿರಿ ವೆಬ್ ನಿವ್ಸ್:
ಬೆಂಗಳೂರು, ಅ.14: ವಿಜಯನಗರದ ಮೂಡಲಪಾಳ್ಯದಲ್ಲಿ ‘ಗೊಂಬೆ ಮನೆ ಚಂದ್ರಮ್ಮ’ ಎಂದೇ ಖ್ಯಾತರಾಗಿರುವ ಚಂದ್ರಮ್ಮ ಅವರ ನಿವಾಸದಲ್ಲಿ ಒಂಬತ್ತು ದಿನಗಳ ಕಾಲ ನವರಾತ್ರಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.
ಚಂದ್ರಮ್ಮ ಅವರ ನಿವಾಸದ ಎರಡು ಮಹಡಿಗಳಲ್ಲಿ ಸಾವಿರಕ್ಕೂ ಅಧಿಕ ಗೊಂಬೆಗಳನ್ನು ಶಾಶ್ವತವಾಗಿ ಪ್ರದರ್ಶನಕ್ಕೆ ಇಡಲಾಗಿದೆ. ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ ಗೊಂಬೆ ಪ್ರದರ್ಶನವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸುವ ಮೂಲಕ ಸಾಂಪ್ರದಾಯಿಕ ಗೊಂಬೆ ಹಬ್ಬದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಅವರು ಮಾಡುತ್ತಿದ್ದಾರೆ.
ಬಟ್ಟೆ, ಹತ್ತಿ, ಕಂಬಿ, ಫೈಬರ್, ಮಣ್ಣು ಸೇರಿದಂತೆ ವಿವಿಧ ರೀತಿಯ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಚಂದ್ರಮ್ಮ ಅವರು ಸ್ವತಃ ಗೊಂಬೆಗಳನ್ನು ತಯಾರಿಸುತ್ತಿದ್ದಾರೆ. ವಿಭಿನ್ನ ವಿನ್ಯಾಸ, ಆಕರ್ಷಕ ಕಲಾಕೃತಿ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಒಳಗೊಂಡಿರುವ ಈ ಗೊಂಬೆಗಳು ವೀಕ್ಷಕರ ಗಮನ ಸೆಳೆಯುತ್ತಿವೆ.
ನವರಾತ್ರಿ ಅಂಗವಾಗಿ ನಡೆಯುತ್ತಿರುವ ಗೊಂಬೆ ಪ್ರದರ್ಶನವನ್ನು ವೀಕ್ಷಿಸಲು ಪ್ರತಿದಿನ ಸಾವಿರಾರು ಗೊಂಬೆ ಪ್ರಿಯರು ತಂಡೋಪತಂಡವಾಗಿ ಆಗಮಿಸುತ್ತಿದ್ದು, ವಿವಿಧ ಬಗೆಯ ಗೊಂಬೆಗಳನ್ನು ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲ ವಯೋಮಾನದವರಿಗೂ ಈ ಗೊಂಬೆ ಮನೆ ವಿಶೇಷ ಆಕರ್ಷಣೆಯಾಗಿದೆ.
ಬುಧವಾರ ಸಿರಿ ಬೆಳಕು ಸಂಸ್ಥೆಯ ಪ್ರೇಮ ಶಾಂತವೀರಯ್ಯ, ವಿಜಯನಗರದ ಲಲಿತ ಸಹಸ್ರನಾಮ ತಂಡ ಸೇರಿದಂತೆ ಹಲವು ಗಣ್ಯರು ಹಾಗೂ ಗೊಂಬೆ ಪ್ರಿಯರು ಚಂದ್ರಮ್ಮ ಅವರ ಗೊಂಬೆ ಮನೆಗೆ ಭೇಟಿ ನೀಡಿ ಗೊಂಬೆಗಳ ಪ್ರದರ್ಶನವನ್ನು ವೀಕ್ಷಿಸಿದರು.
ನವರಾತ್ರಿ ಸಂದರ್ಭದಲ್ಲಿ ನಡೆಯುತ್ತಿರುವ ಈ ವಿಶಿಷ್ಟ ಗೊಂಬೆ ಪ್ರದರ್ಶನವು ನಮ್ಮ ನಾಡಿನ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಪ್ರಯತ್ನವಾಗಿದೆ.




