ಕಲಬುರಗಿಯಲ್ಲಿ ಸಿದ್ದರಾಮಯ್ಯ ಪ್ರತಿಮೆ ತೆರವಿಗೆ ಕುರುಬ ಸಮಾಜದ ತೀವ್ರ ಖಂಡನೆ

H.Mallikarjun
H.Mallikarjun - Kalyanasiri
3 Min Read

ಕಲಬುರಗಿಯಲ್ಲಿ ಸಿದ್ದರಾಮಯ್ಯ ಪ್ರತಿಮೆ ತೆರವಿಗೆ ಕುರುಬ ಸಮಾಜದ ತೀವ್ರ ಖಂಡನೆ

ಜಾಹೀರಾತು
Kuruba community strongly condemns removal of Siddaramaiah's statue in Kalaburagi.


“ಸಿದ್ದರಾಮಯ್ಯ ಅವರಂಥ ನಾಯಕ ಹಿಂದೆ ಹುಟ್ಟಿಲ್ಲ, ಮುಂದೆಯೂ ಹುಟ್ಟುವುದಿಲ್ಲ” — ಆರ್. ಕೊಟ್ರೇಶ್


ಹೊಸಪೇಟೆ: ಕಲಬುರಗಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಜಿಲ್ಲಾ ಕುರುಬರ ಸಂಘದ ವತಿಯಿಂದ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.


ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಆರ್. ಕೊಟ್ರೇಶ್, ಸಿದ್ದರಾಮಯ್ಯ ಅವರು ರಾಜ್ಯ ಕಂಡ ಧೀಮಂತ ನಾಯಕ, ಅಹಿಂದ ವರ್ಗಗಳ ಪರ ಹೋರಾಡಿದ ನಾಯಕ ಹಾಗೂ ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಗೆ ಶ್ರಮಿಸಿದ ನಾಯಕರು. ಅವರಂಥ ನಾಯಕ ಹಿಂದೆ ಹುಟ್ಟಿಲ್ಲ, ಮುಂದೆಯೂ ಹುಟ್ಟುವುದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಜಾರಿಗೆ ತಂದ ಜನಪರ ಯೋಜನೆಗಳು ಎಲ್ಲ ವರ್ಗದ ಜನರನ್ನು ತಲುಪಿವೆ. ಅವರು ಯಾವುದೇ ಒಂದು ಜಾತಿಗೆ ಸೀಮಿತವಾಗದೆ ಎಲ್ಲ ಜಾತಿ, ಜನಾಂಗಗಳ ಏಳಿಗೆಗಾಗಿ ಶ್ರಮಿಸಿದ್ದಾರೆ. ಇಂತಹ ನಾಯಕನ ಅಭಿಮಾನಿಗಳು ಕಲಬುರಗಿಯಲ್ಲಿ ನಿರ್ಮಿಸಿದ್ದ ಪ್ರತಿಮೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ರಾತ್ರೋರಾತ್ರಿ ತೆರವುಗೊಳಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಪ್ರತಿಮೆ ತೆರವು ವಿಚಾರದಲ್ಲಿ ಎಲ್ಲ ಪಕ್ಷಗಳ ಹಾಗೂ ವಿವಿಧ ಸಮಾಜಗಳ ಮುಖಂಡರು ಮರುಸ್ಥಾಪನೆಗೆ ಒತ್ತಾಯಿಸುತ್ತಿದ್ದಾರೆ. ಕುರುಬ ಸಮಾಜವೂ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಮರುಸ್ಥಾಪಿಸಬೇಕು ಎಂದು ಆಗ್ರಹಿಸುತ್ತದೆ. ಈ ವಿಚಾರದಲ್ಲಿ ಸಮಾಜ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಸಿದರು.
ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸದ್ಯ ಪ್ರತಿಭಟನೆಗೆ ಮಿತಿ ಹಾಕಿಕೊಂಡಿದ್ದೇವೆ. ನೀತಿ ಸಂಹಿತೆ ಮುಗಿದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಮೆ ಮರುಸ್ಥಾಪನೆಗೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಆರ್. ಕೊಟ್ರೇಶ್ ಎಚ್ಚರಿಸಿದರು.


ಗ್ಯಾರಂಟಿ ಸಮಿತಿ ಅಧ್ಯಕ್ಷ ಕುರಿ ಶಿವಮೂರ್ತಿ ಮಾತನಾಡಿ, ದೀನದಲಿತರು, ಶೋಷಿತರು ಹಾಗೂ ಅಹಿಂದ ವರ್ಗಗಳ ಆಶಾಕಿರಣವಾಗಿರುವ ಸಿದ್ದರಾಮಯ್ಯ ಅವರು ಕೇವಲ ಕುರುಬ ಸಮಾಜಕ್ಕೆ ಮಾತ್ರವಲ್ಲ, ಎಲ್ಲ ವರ್ಗಗಳ ಜನರಿಗೆ ಜನಪರ ಯೋಜನೆಗಳನ್ನು ನೀಡಿದ್ದಾರೆ. ಪ್ರತಿಮೆ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಅದೇ ಸ್ಥಳದಲ್ಲಿ ಪ್ರತಿಮೆಯನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಬುಡ್ಡಿ ಬಸವರಾಜ ಮಾತನಾಡಿ, ಸಿದ್ದರಾಮಯ್ಯ ಅವರು ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಅಭಿವೃದ್ಧಿಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಅವರ ಪ್ರತಿಮೆ ತೆರವುಗೊಳಿಸಿರುವುದು ಆಶ್ಚರ್ಯ ಮೂಡಿಸಿದೆ. ಪ್ರತಿಮೆ ತೆರವಿಗೆ ಆದೇಶ ನೀಡಿದವರು ಯಾರು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು.
ಪ್ರಧಾನ ಕಾರ್ಯದರ್ಶಿ ಎಚ್. ಮಹೇಶ ಮಾತನಾಡಿ, ರಾಜ್ಯದಲ್ಲಿ 17 ಬಾರಿ ಬಜೆಟ್ ಮಂಡಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ.

ಕಲ್ಯಾಣ ಕರ್ನಾಟಕದ 371ಜೆ ಅನುಷ್ಠಾನಕ್ಕೆ ಅವರು ಶ್ರಮಿಸಿದ್ದಾರೆ. ಇಂತಹ ನಾಯಕನ ಪ್ರತಿಮೆ ತೆರವುಗೊಳಿಸಿರುವುದು ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಮರುಸ್ಥಾಪಿಸುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಮಚಂದ್ರಗೌಡ, ಅಯ್ಯಾಳಿ ಮೂರ್ತಿ, ವೈ. ಎರಿಸ್ವಾಮಿ, ದಲ್ಲಾಲಿ ಕುಬೇರ ಸೇರಿದಂತೆ ಹಲವರು ಮಾತನಾಡಿದರು.


ಇದಕ್ಕೂ ಮೊದಲು ಜಿಲ್ಲಾ ಕುರುಬರ ಸಂಘದ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣ, ಡಾ. ಪುನೀತ್ ರಾಜ್‌ಕುಮಾರ್ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.


ಪ್ರತಿಭಟನೆಯಲ್ಲಿ ಡಿ. ಚೆನ್ನಪ್ಪ, ಬಸವಂತಪ್ಪ ಮೇಟಿ, ಎಲ್.ಎಸ್. ಆನಂದ, ಕೆ. ಬೆಟ್ಟದೇಶಪ್ಪ, ಬಂದಿ ಭರಮಪ್ಪ, ಸಂಕ್ಲಾಪುರ ಗೋಪಿ, ಬಿಸಾಟಿ ತಾಯಪ್ಪ, ಪಲ್ಲೇದ ಸಿದ್ದೇಶ, ಗಂಟೆ ಮಾರುತಿ, ಜೊಂಡಿ ನಿಂಗಪ್ಪ, ಬದ್ತಿನಾಥ, ಪ್ರಶಾಂತ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

Total Views: 0
ಜಾಹೀರಾತು
Share This Article