
ಪೋಷಕರಾಗಲು ಅಡ್ಡದಾರಿ ಬೇಡ, ಕಾನೂನುಬದ್ಧ ದತ್ತು ಸ್ವೀಕಾರವೇ ಪರಿಹಾರ

Do not take shortcuts to become a parent; legal adoption is the solution.
ಕೊಪ್ಪಳದಲ್ಲಿ ‘ರಾಷ್ಟ್ರೀಯ ದತ್ತು ಮಾಸಾಚರಣೆ’ಗೆ ಚಾಲನೆ
ಕೊಪ್ಪಳ, ನ. 09: ತಂದೆ-ತಾಯಿಯ ವಾತ್ಸಲ್ಯದಿಂದ ವಂಚಿತರಾಗಿ ಅನಾಥರಾದ ಹಾಗೂ ಪರಿತ್ಯಕ್ತ ಮಕ್ಕಳಿಗೆ ಹೊಸ ಕುಟುಂಬದ ಮರುಜೀವ ನೀಡುವ ಉದ್ದೇಶದಿಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ನವೆಂಬರ್ ಮಾಸವನ್ನು ‘ರಾಷ್ಟ್ರೀಯ ದತ್ತು ಮಾಸಾಚರಣೆ’ಯನ್ನಾಗಿ ಆಚರಿಸಲಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ “ಪೋಷಕರಾಗಲು ಅಡ್ಡದಾರಿಗಳಿಲ್ಲ, ಕಾನೂನುಬದ್ಧ ದತ್ತು ಸ್ವೀಕಾರ ಒಂದೇ ದಾರಿ” ಎಂಬ ಘೋಷವಾಕ್ಯದಡಿ ಜಿಲ್ಲೆಯಾದ್ಯಂತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಲಾಖೆ ಕಾರ್ಯಕ್ರಮ ರೂಪಿಸಿದೆ.
*ಅರ್ಹತೆ ಮತ್ತು ನಿಬಂಧನೆಗಳು:* ಇಲಾಖೆಯ ನಿಯಮಾವಳಿಗಳ ಪ್ರಕಾರ ಮಕ್ಕಳಿಲ್ಲದ ಹಾಗೂ ಈಗಾಗಲೇ ಮಕ್ಕಳಿರುವ ಆರೋಗ್ಯವಂತ ದಂಪತಿಗಳು ಮಗುವನ್ನು ದತ್ತು ಪಡೆಯಲು ಅರ್ಹರಾಗಿರುತ್ತಾರೆ. ಅವಿವಾಹಿತ, ವಿಚ್ಛೇದಿತ ಅಥವಾ ವಿಧವಾ ಮಹಿಳೆಯರು ಗಂಡು ಅಥವಾ ಹೆಣ್ಣು ಮಗುವನ್ನು ದತ್ತು ಪಡೆಯಬಹುದಾಗಿದ್ದು, ಒಂಟಿ ಪುರುಷರಿಗೆ ಕೇವಲ ಗಂಡು ಮಗುವನ್ನು ಮಾತ್ರ ದತ್ತು ಪಡೆಯಲು ಅವಕಾಶವಿದೆ. ಆದರೆ ಲಿವ್-ಇನ್ ರಿಲೇಷನ್ಶಿಪ್ನಲ್ಲಿರುವ (ಸಹಜೀವನ ನಡೆಸುವ) ವ್ಯಕ್ತಿಗಳು ದತ್ತು ಪಡೆಯಲು ಅರ್ಹರಾಗಿರುವುದಿಲ್ಲ.
ದತ್ತು ಪಡೆಯಲು ಇಚ್ಛಿಸುವ ನಿರೀಕ್ಷಿತ ಪೋಷಕರು ಕೇಂದ್ರ ಸರ್ಕಾರದ ‘ಮಿಷನ್ ವಾತ್ಸಲ್ಯ ಪೋರ್ಟಲ್’ (Mission Vatsalya Portal) ನಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ.
*ಪೋಷಕರ ವಯೋಮಿತಿ ನಿಗದಿ:* ಮಗು ನಿರೀಕ್ಷಿತ ದತ್ತು ಪೋಷಕರು ನೋಂದಣಿ ಮಾಡಿದ ದಿನದಿಂದ ಅನ್ವಯವಾಗುವಂತೆ, ಮಕ್ಕಳ ವಯಸ್ಸಿಗೆ ತಕ್ಕಂತೆ ಪೋಷಕರ ಗರಿಷ್ಠ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದ್ದು, 2 ವರ್ಷದೊಳಗಿನ ಮಕ್ಕಳನ್ನು ದತ್ತು ಪಡೆಯಲು ಆ ದಂಪತಿಗಳ ಒಟ್ಟಾರೆ ಗರಿಷ್ಠ ವಯಸ್ಸು 85 ವರ್ಷ, ಒಬ್ಬರೇ ಪೋಷಕರಿದ್ದಲ್ಲಿ 40 ವರ್ಷ ಆಗಿರಬೇಕು.
ಅದೇ ರೀತಿ 2 ರಿಂದ 4 ವರ್ಷದ ಮಕ್ಕಳನ್ನು ದತ್ತು ಪಡೆಯಲಿಚ್ಛಿಸುವ ದಂಪತಿಗಳ ವಯಸ್ಸು 90 ವರ್ಷ, ಒಬ್ಬರೇ ಪೋಷಕರಿದ್ದಲ್ಲಿ 45 ವರ್ಷ ಇರಬೇಕು.
4 ರಿಂದ 8 ವರ್ಷದ ಮಕ್ಕಳನ್ನು ದತ್ತು ಪಡೆಯುವ ದಂಪತಿಗಳ ವಯಸ್ಸು 100 ವರ್ಷ, ಒಬ್ಬರೇ ಪೋಷಕರಿದ್ದಲ್ಲಿ 50 ವರ್ಷ. 8 ರಿಂದ 18 ವರ್ಷದ ಮಕ್ಕಳನ್ನು ದತ್ತು ಪಡೆಯ ಬಯಸುವ ದಂಪತಿಗಳ ವಯಸ್ಸು 110 ವರ್ಷ, ಒಬ್ಬರೇ ಪೋಷಕರಿದ್ದಲ್ಲಿ 55 ವರ್ಷ ಆಗಿರಬೇಕು.
*ಅಗತ್ಯ ದಾಖಲೆಗಳು:* ಪ್ಯಾನ್ ಕಾರ್ಡ್, ವಯಸ್ಸು, ವಾಸಸ್ಥಳ, ವೈದ್ಯಕೀಯ ತಪಾಸಣೆ, ಆದಾಯ/ವೇತನ ಪ್ರಮಾಣಪತ್ರ (IT Returns), ಪೋಸ್ಟ್ಕಾರ್ಡ್ ಅಳತೆಯ ಭಾವಚಿತ್ರ ಹಾಗೂ ಅನ್ವಯಿಸಿದಲ್ಲಿ ವಿವಾಹ ಅಥವಾ ವಿಚ್ಛೇದನ/ವಿಧವಾ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗುತ್ತದೆ.
*’ಮಮತೆಯ ತೊಟ್ಟಿಲು’ ಸದ್ಬಳಕೆ ಮಾಡಿ:* ಬೇಡವಾದ ನವಜಾತ ಶಿಶುಗಳನ್ನು ಕಸದ ತೊಟ್ಟಿ, ಬೇಲಿ ಅಥವಾ ನಿರ್ಜನ ಪ್ರದೇಶಗಳಲ್ಲಿ ಎಸೆಯುವುದರಿಂದ ಮಕ್ಕಳು ಪ್ರಾಣಿ-ಪಕ್ಷಿಗಳಿಗೆ, ಸೋಂಕುಗಳಿಗೆ ತುತ್ತಾಗಿ ಮೃತಪಡುವ ಅಪಾಯವಿರುತ್ತದೆ. ಇಂತಹ ಮಕ್ಕಳನ್ನು ರಕ್ಷಿಸಿ, ಅವರಿಗೆ ಬದುಕುವ ಹಕ್ಕು ಕಲ್ಪಿಸಲು ಕೊಪ್ಪಳ ಜಿಲ್ಲೆಯ 8 ಪ್ರಮುಖ ಸ್ಥಳಗಳಲ್ಲಿ ‘ಮಮತೆಯ ತೊಟ್ಟಿಲು’ ಅಳವಡಿಸಲಾಗಿದ್ದು, ಕೊಪ್ಪಳದ ಬಾಲಕಿಯರ ಸರ್ಕಾರಿ ಬಾಲಮಂದಿರ (ಹಳೇ ಜಿಲ್ಲಾ ಆಸ್ಪತ್ರೆ ಹಿಂಭಾಗ, ಕೊಪ್ಪಳ), ಬಾಲಕರ ಸರ್ಕಾರಿ ಬಾಲಮಂದಿರ (ಹೊಸಪೇಟೆ ರಸ್ತೆ, ಕೊಪ್ಪಳ), ಅಮೂಲ್ಯ ದತ್ತು ಸ್ವೀಕಾರ ಕೇಂದ್ರ (ಕೆ.ಇ.ಬಿ. ರಸ್ತೆ, ಕೊಪ್ಪಳ). ಸಖಿ ಒನ್ ಸ್ಟಾಪ್ ಸೆಂಟರ್ (ಕೊಪ್ಪಳ) ಹಾಗೂ ಕೊಪ್ಪಳ ಜಿಲ್ಲಾ ಆಸ್ಪತ್ರೆ ಹಾಗೂ ತಾಯಿ-ಮಕ್ಕಳ ಆಸ್ಪತ್ರೆ ಆವರಣ.
ಅದೇ ರೀತಿ ತಾಲ್ಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಆವರಣ, ಜಿಲ್ಲೆಯ ಗಂಗಾವತಿ ನಗರ ಬಸ್ ನಿಲ್ದಾಣ ಮತ್ತು ಕುಷ್ಟಗಿ ತಾಲೂಕು ಆಸ್ಪತ್ರೆಯಲ್ಲಿ ‘ಮಮತೆಯ ತೊಟ್ಟಿಲು’ ಲಭ್ಯವಿದೆ.
*ಕಾನೂನುಬಾಹಿರ ದತ್ತು ಸ್ವೀಕಾರ:* ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಮಕ್ಕಳನ್ನು ಕೊಳ್ಳುವುದು ಅಥವಾ ಮಾರಾಟ ಮಾಡುವುದು ಗಂಭೀರ ಅಪರಾಧವಾಗಿದೆ. ಸೆಕ್ಷನ್ 81ರ ಅಡಿಯಲ್ಲಿ ತಪ್ಪಿತಸ್ಥರಿಗೆ 5 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಹಾಗೂ ರೂ. 1 ಲಕ್ಷ ದಂಡ ವಿಧಿಸಲಾಗುತ್ತದೆ. ಆಸ್ಪತ್ರೆಯ ಸಿಬ್ಬಂದಿ ಮಗು ಮಾರಾಟ ಜಾಲದಲ್ಲಿ ಭಾಗಿಯಾಗಿದ್ದರೆ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಸಹ ಕಾನೂನಿನಲ್ಲಿ ಅವಕಾಶವಿದೆ.
ಈಗಾಗಲೇ ಜಿಲ್ಲೆಯಲ್ಲಿ ಕಾನೂನುಬಾಹಿರವಾಗಿ ಮಕ್ಕಳನ್ನು ಮಾರಾಟ ಮಾಡಿದವರ ವಿರುದ್ಧ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
*ಮಕ್ಕಳ ಅಂಕಿ-ಅಂಶಗಳ ವಿವರ:* ಜಿಲ್ಲೆಯಲ್ಲಿ ದತ್ತು ಪ್ರಕ್ರಿಯೆಗೊಳಪಡಿಸಲು ಸ್ವೀಕರಿಸಿದ ಮಕ್ಕಳ ಅಂಕಿ-ಅಂಶಗಳ ವಿವರ ಇಂತಿದೆ. ಜಿಲ್ಲೆಯಲ್ಲಿ 2015 ರಿಂದ
ಇದುವರೆಗೆ ಪರಿತ್ಯಜಿಸಲ್ಪಟ್ಟ ಶಿಶುಗಳು ಸಂಖ್ಯೆ 27, ಪೋಷಕರೇ ಇಲಾಖೆಗೆ ಒಪ್ಪಿಸಿದ ಮಕ್ಕಳು 30, ಚಿಕಿತ್ಸೆ ಫಲಿಸದೆ ಮೃತಪಟ್ಟ ಶಿಶುಗಳು 10, ಸ್ವದೇಶದಲ್ಲಿ ಕಾನೂನುಬದ್ಧವಾಗಿ ದತ್ತು ಪಡೆದ ಮಕ್ಕಳು 48 ಹಾಗೂ ವಿದೇಶಕ್ಕೆ (ಅಂತಾರಾಷ್ಟ್ರೀಯ ಮಟ್ಟದಲ್ಲಿ) ದತ್ತು ನೀಡಲಾದ ಮಕ್ಕಳು ಸಂಖ್ಯೆ 09 ಆಗಿದೆ.
ಬೇಡವಾದ ಮಕ್ಕಳನ್ನು ಎಲ್ಲಂದಂರಲ್ಲಿ ಬಿಸಾಡದೇ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ಮಕ್ಕಳ ಸಹಾಯವಾಣಿ 1098/112ಕ್ಕೆ ಕರೆಮಾಡಿ ಒಪ್ಪಿಸಿದಲ್ಲಿ ಅಥವಾ ಮಮತೆಯ ತೊಟ್ಟಿಲಿನಲ್ಲಿ ಒಪ್ಪಿಸಿದಲ್ಲಿ ಅಥವಾ ಮಮತೆಯ ತೊಟ್ಟಿಲಿನಲ್ಲಿ ಮಗುವನ್ನು ಹಾಕಿದಲ್ಲಿ ಇಲಾಖೆಯು ಕಾನೂನುಬದ್ಧ ದತ್ತು ನೀಡುವ ಮೂಲಕ ಮತ್ತೊಂದು ಕುಟುಂಬದ ಪ್ರೀತಿ ವಾತ್ಸಲ್ಯ ಒದಗಿಸಿ ಮಗುವಿನ ಉಜ್ವಲ ಭವಿಷ್ಯಕ್ಕೆ ದಾರಿಮಾಡಿಕೊಡುತ್ತದೆ. ಆದ್ದರಿಂದ ನವಜಾತ ಶಿಶುಗಳನ್ನು ಮಮತೆಯ ತೊಟ್ಟಿಲುವಿನಲ್ಲಿ ಹಾಕಿರಿ. ಎಲ್ಲ ಮಕ್ಕಳಿಗೂ ಬದುಕುವ ಹಕ್ಕನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸಿ.
ಜೈವಿಕ ಪೋಷಕರಿಂದ ಶಾಶ್ವತವಾಗಿ ಬೇರ್ಪಟ್ಟ (ಅನಾಥ), ಪರಿತ್ಯಕ್ತ, ಬಿಸಾಡಿದ ಮೃಕಳು ಕಂಡುಬಂದಲ್ಲಿ ತಕ್ಷಣ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ದೂ.ಸಂ 08539-225030 ಅಥವಾ ಮಕ್ಕಳ ಸಹಾಯವಾಣಿ 1098/112ಗೆ ಕರೆಮಾಡಿ ಮಾಹಿತಿ ನೀಡಬೇಕು.
ದತ್ತು ಕುರಿತಾದ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದದ ರಕ್ಷಣಾಧಿಕಾರಿ (ಅಸಾಂಸ್ಥಿಕ) ಅವರ ದೂರವಾಣಿ ಸಂಖ್ಯೆ 9538082333ಗೆ ಕರೆ ಮಾಡಬಹುದು ಎಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



