ಕಿವಿಯ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯ: ಡಾ. ಹರಿಪ್ರಸಾದ್

Public awareness about ear health is essential: Dr. Hariprasad
ನವಜಾತ ಶಿಶುಗಳ ಕಿವಿಗೆ ಕಾದ ಎಣ್ಣೆ, ನೀರು ಅಥವಾ ಬೆಣ್ಣೆ ಹಾಕಬೇಡಿ: ಆಶಾಬೇಗಂ

ಗಂಗಾವತಿ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಗಾವತಿ ಉಪವಿಭಾಗ ಆಸ್ಪತ್ರೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಅಂತರಾಷ್ಟ್ರೀಯ ಶ್ರವಣ ದೋಷ ಸಪ್ತಾಹ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ENT ತಜ್ಞರಾದ ಡಾ. ಹರಿಪ್ರಸಾದ್ ಅವರು ಕಿವಿಯ ಆರೋಗ್ಯ, ಶ್ರವಣ ದೋಷಕ್ಕೆ ಕಾರಣಗಳು ಹಾಗೂ ಕಿವಿಯ ಆರೈಕೆಯ ಕುರಿತು ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡಿದರು. ಕಿವಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದೆ, ಸೂಕ್ತ ಸಮಯದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಆಶಾಬೇಗಂ ಮಾತನಾಡಿ, ನವಜಾತ ಶಿಶುಗಳಿಗೆ ಸ್ನಾನ ಮಾಡಿಸುವ ಮುನ್ನ ಕಿವಿಯಲ್ಲಿ ಕಾದ ಎಣ್ಣೆ ಹಾಕುವ ಪದ್ಧತಿ ಕೆಲವೆಡೆ ಇಂದಿಗೂ ಕಂಡುಬರುತ್ತಿದೆ. ಇಂತಹ ಕ್ರಮಗಳಿಂದ ಮಕ್ಕಳ ಕಿವಿಗೆ ಹಾನಿಯಾಗಿ ಶ್ರವಣ ಶಕ್ತಿ ಶಾಶ್ವತವಾಗಿ ಕುಂಠಿತವಾಗುವ ಸಾಧ್ಯತೆ ಇದೆ. ಆದ್ದರಿಂದ ಮಕ್ಕಳ ಕಿವಿಗೆ ಯಾವುದೇ ರೀತಿಯ ಎಣ್ಣೆ, ಬೆಣ್ಣೆ ಅಥವಾ ನೀರನ್ನು ಹಾಕಬಾರದು ಎಂದು ಎಚ್ಚರಿಕೆ ನೀಡಿದರು.
ಅಲ್ಲದೆ, ಸಾರ್ವಜನಿಕರು ಮೊಬೈಲ್ ಫೋನ್ಗಳನ್ನು ಸರಿಯಾದ ರೀತಿಯಲ್ಲಿ ಮತ್ತು ಮಿತವಾಗಿ ಬಳಸಬೇಕು. ಅತಿಯಾದ ಶಬ್ದ ಹಾಗೂ ತಪ್ಪಾದ ಬಳಕೆಯಿಂದ ಕಿವಿಯ ಆರೋಗ್ಯದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅವರು ತಿಳಿಸಿದರು.
ICTC ಆಪ್ತ ಸಮಾಲೋಚಕರಾದ ಶ್ರೀ ರಾಜೀವ್ ಹಾಗೂ ಶ್ರೀ ಶಿವಾನಂದ ಅವರು ಸಹ ಕಿವಿಯ ಆರೋಗ್ಯದ ಕುರಿತು ಸಾರ್ವಜನಿಕರು ಜಾಗೃತಿ ವಹಿಸಬೇಕು ಹಾಗೂ ಶ್ರವಣ ಸಮಸ್ಯೆಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಕ್ಬರ್, ನರ್ಸಿಂಗ್ ವಿದ್ಯಾರ್ಥಿಗಳು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



