ಕಲ್ಯಾಣಸಿರಿ ವರದಿ ಫಲಶ್ರುತಿ: ಯಲಬುರ್ಗಾ ತೀವ್ರ ಬರಪೀಡಿತ ತಾಲೂಕು ಘೋಷಣೆ
Outcome of Kalyanasiri Report: Yalaburga declared a severely drought-hit taluk.


ಹುಸಿಯಾದ ಬರ ಘೋಷಣೆಯ ಭರವಸೆ ಈಡೇರಿತು; ರೈತರಲ್ಲಿ ಹರ್ಷ — ಶರಣಬಸಪ್ಪ ದಾನಕೈ
ಯಲಬುರ್ಗಾ: ಮಳೆಯ ಕೊರತೆಯಿಂದ ಬೆಳೆಗಳು ಹಾನಿಗೊಳಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಯಲಬುರ್ಗಾ ತಾಲೂಕನ್ನು ತೀವ್ರ ಬರಪೀಡಿತ ತಾಲೂಕು ಎಂದು ಘೋಷಿಸಬೇಕೆಂಬ ರೈತರ ಒತ್ತಾಯಕ್ಕೆ ಇದೀಗ ಸ್ಪಂದನೆ ದೊರೆತಿದೆ.
ರಾಜ್ಯ ಸರ್ಕಾರವು ಯಲಬುರ್ಗಾ ತಾಲೂಕನ್ನು ತೀವ್ರ ಬರಪೀಡಿತ ತಾಲೂಕು ಎಂದು ಅಧಿಕೃತವಾಗಿ ಘೋಷಿಸಿರುವುದಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಬಣ) ಯಲಬುರ್ಗಾ ತಾಲೂಕು ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಬರ ಪರಿಸ್ಥಿತಿ, ಮಳೆಯ ಕೊರತೆ ಹಾಗೂ ರೈತರ ಸಂಕಷ್ಟದ ಕುರಿತು ‘ಕಲ್ಯಾಣಸಿರಿ’ ನಿರಂತರವಾಗಿ ವರದಿ ಮಾಡಿ, ಬರ ಘೋಷಣೆಗೆ ಆಗ್ರಹಿಸುವ ರೈತರ ಧ್ವನಿಯನ್ನು ಆಡಳಿತದ ಗಮನಕ್ಕೆ ತಂದಿತ್ತು. ಇದೀಗ ಸರ್ಕಾರ ಬರಪೀಡಿತ ತಾಲೂಕು ಘೋಷಿಸಿರುವುದು ರೈತರ ಹೋರಾಟ ಹಾಗೂ ಮಾಧ್ಯಮದ ಮೂಲಕ ನಡೆದ ಜನಪರ ಒತ್ತಾಯಕ್ಕೆ ದೊರೆತ ಫಲಶ್ರುತಿ ಎಂದು ಶರಣಬಸಪ್ಪ ದಾನಕೈ ತಿಳಿಸಿದ್ದಾರೆ.
ಯಲಬುರ್ಗಾ ಕ್ಷೇತ್ರದ ಶಾಸಕ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ತಾಲೂಕಿನ ಬರ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತಂದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರೊಂದಿಗೆ ಈ ಕುರಿತು ಪ್ರಸ್ತಾಪಿಸಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಪ್ರಯತ್ನಿಸಿರುವುದಕ್ಕೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
“ತಾಲೂಕಿನ ರೈತರು ಮಳೆ ಕೊರತೆಯಿಂದ ತೀವ್ರ ಸಂಕಷ್ಟದಲ್ಲಿದ್ದರು. ಬರ ಘೋಷಣೆ ಮಾಡಬೇಕೆಂಬ ಬೇಡಿಕೆಯನ್ನು ನಾವು ನಿರಂತರವಾಗಿ ಮುಂದಿಟ್ಟಿದ್ದೆವು. ‘ಕಲ್ಯಾಣಸಿರಿ’ ಕೂಡ ರೈತರ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಬಿಂಬಿಸಿತ್ತು. ಇದೀಗ ಸರ್ಕಾರದ ಘೋಷಣೆಯಿಂದ ನಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿರುವುದು ಸಂತಸದ ಸಂಗತಿ” ಎಂದು ಶರಣಬಸಪ್ಪ ದಾನಕೈ ಹೇಳಿದ್ದಾರೆ.
ಬರಪೀಡಿತ ತಾಲೂಕು ಘೋಷಣೆಯಿಂದ ಅರ್ಹ ರೈತರಿಗೆ ಸರ್ಕಾರದ ನಿಯಮಾನುಸಾರ ಬರ ಪರಿಹಾರ ಹಾಗೂ ವಿವಿಧ ಸೌಲಭ್ಯಗಳು ದೊರೆಯುವ ನಿರೀಕ್ಷೆ ಮೂಡಿದೆ. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ತ್ವರಿತವಾಗಿ ತಲುಪುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬರ ಘೋಷಣೆಗೆ ಆಗ್ರಹಿಸಿ ‘ಕಲ್ಯಾಣಸಿರಿ’ಯಲ್ಲಿ ಪ್ರಕಟವಾದ ವರದಿಗಳು ಇದೀಗ ಫಲಶ್ರುತಿಯತ್ತ ಸಾಗಿದ್ದು, ರೈತರ ಸಮಸ್ಯೆಯನ್ನು ಎತ್ತಿಹಿಡಿದ ಪತ್ರಿಕೆಯ ಜನಪರ ವರದಿಗಾರಿಕೆಗೆ ಮತ್ತೊಂದು ಉದಾಹರಣೆಯಾಗಿದೆ.

