Where is the park in Benakanala? The park exists only in the NREGA bill!
ಬೆನಕನಾಳದಲ್ಲಿ ಉದ್ಯಾನವನ ಎಲ್ಲಿದೆ? ನರೇಗಾ ಹಣದ ಬಿಲ್‌ನಲ್ಲಿ ಮಾತ್ರ ಉದ್ಯಾಇನವನ!

ಸುಳೇಕಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ ಲಕ್ಷಾಂತರ ರೂ. ಅವ್ಯವಹಾರದ ಆರೋಪ; ದಾಖಲೆಗಳೊಂದಿಗೆ ತನಿಖೆಗೆ ಆಗ್ರಹ
ಕನಕಗಿರಿ: ತಾಲೂಕಿನ ಸುಳೇಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆನಕನಾಳ ಗ್ರಾಮದಲ್ಲಿ ನರೇಗಾ (MGNREGA) ಯೋಜನೆಯಡಿ ಉದ್ಯಾನವನ ನಿರ್ಮಾಣದ ಹೆಸರಿನಲ್ಲಿ ಬಿಲ್ ಸೃಷ್ಟಿಸಿ ಹಣ ಪಾವತಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ದೊರೆತಿರುವ ದಾಖಲೆಗಳ ಪ್ರಕಾರ, 2023-24ನೇ ಸಾಲಿನ ಮೆಟೀರಿಯಲ್ ಖರ್ಚಿನ ಶೀಟ್‌ನಲ್ಲಿ ‘ಬೆನಕನಾಳ ಗ್ರಾಮದಲ್ಲಿ ಉದ್ಯಾನವನ ನಿರ್ಮಾಣ’ ಎಂಬ ಕಾಮಗಾರಿಯನ್ನು ನಮೂದಿಸಲಾಗಿದೆ. ಇದರ Work Code: 1520001026/LD/93393042892293546 ಎಂದು ದಾಖಲಾಗಿದ್ದು, ಬಿಲ್ ನಂಬರ್ 1 ಮತ್ತು 2ಕ್ಕೆ 10/10/2022 ದಿನಾಂಕ ನಮೂದಿಸಲಾಗಿದೆ. ಈ ಬಿಲ್‌ಗಳಿಗೆ ಸಂಬಂಧಿಸಿದ ಪಾವತಿ 05/05/2023ರಂದು ನಡೆದಿರುವುದಾಗಿ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಬೆನಕನಾಳ ಗ್ರಾಮದಲ್ಲಿ ಉದ್ಯಾನವನ ನಿರ್ಮಾಣವಾಗಿರುವ ಸ್ಥಳವೇ ಕಾಣುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾಮಗಾರಿ ನಡೆದಿದ್ದರೆ ಅದರ ಸ್ಥಳ, ನಿರ್ಮಾಣದ ಸ್ವರೂಪ, ಬಳಸಲಾದ ಸಾಮಗ್ರಿ ಹಾಗೂ ವೆಚ್ಚದ ವಿವರಗಳನ್ನು ಸಾರ್ವಜನಿಕವಾಗಿ ಪರಿಶೀಲನೆಗೆ ಒದಗಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಕಾಗದದಲ್ಲೇ ಕಾಮಗಾರಿ?
2022-23ನೇ ಸಾಲಿನಲ್ಲಿ ಸಾಮಗ್ರಿ ಖರೀದಿಸಿದಂತೆ ದಾಖಲೆ ಸೃಷ್ಟಿಸಿ, ನಂತರ 2023-24ನೇ ಸಾಲಿನಲ್ಲಿ ಹಣ ಪಾವತಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಕಾಮಗಾರಿ ನಿಜವಾಗಿಯೂ ನಡೆದಿದೆಯೇ? ನಡೆದಿದ್ದರೆ ಅದರ ಸ್ಥಳ ಎಲ್ಲಿದೆ? ಎಷ್ಟು ಮೊತ್ತದ ಸಾಮಗ್ರಿ ಖರೀದಿಸಲಾಗಿದೆ? ಯಾರು ಪೂರೈಕೆ ಮಾಡಿದ್ದಾರೆ? ಎಂಬ ಪ್ರಶ್ನೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡಬೇಕಾಗಿದೆ.
ಉದ್ಯಾನವನ ನಿರ್ಮಾಣವೇ ಆಗದಿದ್ದರೆ, ಕಾಮಗಾರಿ ನಡೆದಂತೆ ದಾಖಲೆ ಸೃಷ್ಟಿಸಿ ನರೇಗಾ ಯೋಜನೆಯ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಸಾಧ್ಯತೆ ಕುರಿತು ತನಿಖೆ ನಡೆಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸ್ಥಳ ಪರಿಶೀಲನೆಗೆ ಆಗ್ರಹ
ಈ ಪ್ರಕರಣದ ಕುರಿತು ಗ್ರಾಮ ಪಂಚಾಯತಿ ದಾಖಲೆಗಳು, ಮಸ್ಟರ್‌ರೋಲ್, ಮೆಟೀರಿಯಲ್ ಬಿಲ್‌ಗಳು, ಪಾವತಿ ವಿವರಗಳು ಹಾಗೂ ಕಾಮಗಾರಿ ಸ್ಥಳವನ್ನು ಪರಿಶೀಲಿಸಿ ಸಮಗ್ರ ತನಿಖೆ ನಡೆಸಬೇಕು.
ಕಾಮಗಾರಿ ನಡೆದಿಲ್ಲ ಎಂಬುದು ತನಿಖೆಯಲ್ಲಿ ದೃಢಪಟ್ಟರೆ, ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಕೈಗೊಂಡು ಸರ್ಕಾರದ ಹಣವನ್ನು ವಸೂಲಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಕುರಿತು ಸುಳೇಕಲ್ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಅಧಿಕಾರಿಗಳ ಪ್ರತಿಕ್ರಿಯೆ ಲಭ್ಯವಾದಲ್ಲಿ ಮುಂದಿನ ವರದಿಯಲ್ಲಿ ಪ್ರಕಟಿಸಲಾಗುವುದು ಎಂದು ರಾಜೇಶ್ ಸಿಂದನೂರ್ ಹನುಮಂತಪ್ಪ ವಾಲೆಕರ್ ಹುಸೇನ್ ಸಾಬ್ ರಮೇಶ್, ಉಮೇಶ್ ಮತ್ತು ಊರಿನ ಗ್ರಾಮಸ್ಥರು ತಿಳಿಸಿದ್ದಾರೆ.
ವರದಿ: ಶರಣಯ್ಯ ಹಿರೇಮಠ, ಕನಕಗಿರಿ

