ಡಿ. 12 ಮತ್ತು 13ರಂದು ‘ಬಿದರಿ ಉತ್ಸವ-2026’
ಬಿದರಿ ಸಾಂಸ್ಕೃತಿಕ ವೇದಿಕೆಯಿಂದ ಉತ್ಸವ ಆಯೋಜನೆಗೆ ನಿರ್ಧಾರ

Bidari Utsava-2026’ on Dec. 12 and 13
Bidari Cultural Forum decides to organize the festival

ಬೀದರ: ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ‘ಬಿದರಿ ಉತ್ಸವ-2026’ ಹಾಗೂ ರಾಜ್ಯಮಟ್ಟದ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿಸೆಂಬರ್ 12 ಮತ್ತು 13ರಂದು ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲು ಬಿದರಿ ಸಾಂಸ್ಕೃತಿಕ ವೇದಿಕೆ ನಿರ್ಧರಿಸಿದೆ.
ಈ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಕಳೆದ ಹಲವು ವರ್ಷಗಳಿಂದ ಬಿದರಿ ಉತ್ಸವ ಹಾಗೂ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಯಶಸ್ವಿಯಾಗಿ ಆಯೋಜಿಸುತ್ತಿರುವ ಬಿದರಿ ಸಾಂಸ್ಕೃತಿಕ ವೇದಿಕೆಯು, ಪ್ರಸಕ್ತ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಉತ್ಸವವನ್ನು ಆಯೋಜಿಸಲು ಯೋಜನೆ ರೂಪಿಸಿದೆ ಎಂದು ವೇದಿಕೆಯ ಅಧ್ಯಕ್ಷೆ ರೇಖಾ ಸೌದಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಲೇಖಕಿ ಭಾರತಿ ವಸ್ತ್ರದ್ ಹಾಗೂ ಪುಣ್ಯವತಿ ವಿಸಾಜಿ, ಬಿದರಿ ಉತ್ಸವವು ಇದೀಗ ಬೀದರ್ ಜಿಲ್ಲೆಯ ಹೆಮ್ಮೆಯ ಸಾಂಸ್ಕೃತಿಕ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಜಿಲ್ಲಾ ರಂಗಮಂದಿರದಲ್ಲಿ ಉತ್ಸವ ಆಯೋಜಿಸಲು ನಿರ್ಧರಿಸಿರುವುದು ಸೂಕ್ತ ಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು.
ಯುವ ಪ್ರತಿಭೆಗಳಿಗೆ ಸುಗಮ ಸಂಗೀತ ಸ್ಪರ್ಧೆ
ಬಿದರಿ ಉತ್ಸವದ ಅಂಗವಾಗಿ 16ರಿಂದ 20 ವರ್ಷದೊಳಗಿನ ಯುವ ಪ್ರತಿಭೆಗಳಿಗೆ ಸುಗಮ ಸಂಗೀತ ಸ್ಪರ್ಧೆ ಆಯೋಜಿಸುವ ಕುರಿತು ಜನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಅವರು ಪ್ರಸ್ತಾಪಿಸಿದರು. ಇದಕ್ಕೆ ಬಾಬುರಾವ್ ದಾನಿ, ಶಿವಕುಮಾರ ಕಟ್ಟೆ, ಶರಣಪ್ಪ ಬಿರಾದರ್, ಓಂಪ್ರಕಾಶ ದಡ್ಡೆ, ಅರವಿಂದ ಕುಲಕರ್ಣಿ ಹಾಗೂ ಪೃಥ್ವಿರಾಜ್ ಅವರು ಸಹಮತ ವ್ಯಕ್ತಪಡಿಸಿದರು.
ದತ್ತಿ ಪ್ರಶಸ್ತಿಗೆ ಹಿರಿಯ ಕಲಾವಿದರ ಆಯ್ಕೆಗೆ ಸಲಹೆ
ರಾಜ್ಯಮಟ್ಟದ ಬಿದರಿ ದತ್ತಿ ಪ್ರಶಸ್ತಿಗೆ ಅರ್ಹರ ಆಯ್ಕೆಗಾಗಿ ಸಮಿತಿಯು ಶೀಘ್ರದಲ್ಲೇ ಸಂಭಾವ್ಯರ ಪಟ್ಟಿಯನ್ನು ವೇದಿಕೆಗೆ ಸಲ್ಲಿಸಲಿದೆ. ಬಳಿಕ ಪಟ್ಟಿಯ ಕುರಿತು ಚರ್ಚಿಸಿ ಅಂತಿಮ ಆಯ್ಕೆ ಮಾಡಲಾಗುವುದು ಎಂದು ವೇದಿಕೆಯ ಪ್ರಮುಖರು ತಿಳಿಸಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಸುಬ್ರಹ್ಮಣ್ಯ ಪ್ರಭು, ದೇವಿದಾಸ ಜೋಷಿ, ಸುನೀಲ ಕುಲಕರ್ಣಿ, ಶಿವಕುಮಾರ ಕೋತ್ಮೀರ್, ರತೀನ್ ಕಮಲ ಹಾಗೂ ವೀರಭದ್ರಪ್ಪ ಉಪ್ಪಿನ ಅವರು, ಪ್ರಶಸ್ತಿಗೆ ಶೀಘ್ರ ಅಂತಿಮ ರೂಪ ನೀಡಬೇಕು. ವಿಶೇಷವಾಗಿ ಹಿರಿಯ ಹಾಗೂ ಅರ್ಹ ಕಲಾವಿದರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡುವಂತೆ ಸಲಹೆ ನೀಡಿದರು.
ಸಂಗೀತ ಸಂಜೆಗೆ ಖ್ಯಾತ ಕಲಾವಿದರ ಆಹ್ವಾನಕ್ಕೆ ಸಲಹೆ
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಮಾತನಾಡಿ, ಈ ಬಾರಿಯ ಬಿದರಿ ಉತ್ಸವದ ಸಂಗೀತ ಸಂಜೆಗೆ ಮತ್ತಷ್ಟು ಮೆರುಗು ನೀಡುವಂತಹ ಖ್ಯಾತ ಕಲಾವಿದರನ್ನು ಆಹ್ವಾನಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಶಿಖರೇಶ್ವರ, ಮುಕ್ರಂಖಾನ್ ಹಾಗೂ ರಾಜು ಮಣಿಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

