ಕಿಕ್ಕೇರಿ ಕೃಷಿ ಮಾರುಕಟ್ಟೆ ಎದುರು ಕಸ ಹಾಕುವವರಿಗೆ ಕಡಿವಾಣ: ಸಿಸಿ ಕ್ಯಾಮರಾ ಅಳವಡಿಕೆ

H.Mallikarjun
H.Mallikarjun - Kalyanasiri
2 Min Read

Curbing garbage dumping opposite Kikkeri agricultural market: CCTV cameras installed.




ಕಿಕ್ಕೇರಿ ಕೃಷಿ ಮಾರುಕಟ್ಟೆ ಎದುರು ಕಸ ಹಾಕುವವರಿಗೆ ಕಡಿವಾಣ: ಸಿಸಿ ಕ್ಯಾಮರಾ ಅಳವಡಿಕೆ

ಜಾಹೀರಾತು


ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿದರೆ ಕ್ರಮದ ಎಚ್ಚರಿಕೆ; ಸ್ವಚ್ಛತೆ ಕಾಪಾಡಲು ಪಂಚಾಯಿತಿಯಿಂದ ಮನವಿ


ಕಿಕ್ಕೇರಿ: ಕೃಷಿ ಮಾರುಕಟ್ಟೆ ಎದುರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಡೆಯುವ ಉದ್ದೇಶದಿಂದ ಕಿಕ್ಕೇರಿ ಗ್ರಾಮ ಪಂಚಾಯಿತಿ ವತಿಯಿಂದ ಸಿಸಿ ಕ್ಯಾಮರಾ ಅಳವಡಿಸುವ ಮೂಲಕ ಸ್ವಚ್ಛತೆ ಕಾಪಾಡಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಕಿಕ್ಕೇರಿ ಕೃಷಿ ಮಾರುಕಟ್ಟೆ ಎದುರು ಸಾರ್ವಜನಿಕರು ಹಾಗೂ ಕೆಲ ಅಂಗಡಿ ಮಾಲೀಕರು ಕಸವನ್ನು ರಸ್ತೆ ಬದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಾಕುತ್ತಿರುವುದರಿಂದ ಪರಿಸರ ಮಾಲಿನ್ಯ ಉಂಟಾಗುವುದರ ಜೊತೆಗೆ, ಸಾರ್ವಜನಿಕರ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂಬ ದೂರುಗಳು ಗ್ರಾಮ ಪಂಚಾಯಿತಿಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಸ ಹಾಕುವವರ ಮೇಲೆ ನಿಗಾ ಇಡಲು ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ. ಚಲುವರಾಜು ಮಾತನಾಡಿ, ಕೃಷಿ ಮಾರುಕಟ್ಟೆ ಎದುರು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದರಿಂದ ಪರಿಸರದ ಸ್ವಚ್ಛತೆ ಹಾಳಾಗುವುದರ ಜೊತೆಗೆ ದುರ್ವಾಸನೆ, ಸೊಳ್ಳೆ–ನೊಣಗಳ ಕಾಟ ಹಾಗೂ ಸಾರ್ವಜನಿಕರಿಗೆ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಸಾರ್ವಜನಿಕರು ತಮ್ಮ ಮನೆ ಹಾಗೂ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಎಲ್ಲೆಂದರಲ್ಲಿ ಹಾಕದೆ, ಗ್ರಾಮ ಪಂಚಾಯಿತಿ ನಿಗದಿಪಡಿಸಿರುವ ಸ್ಥಳದಲ್ಲಿ ವಿಲೇವಾರಿ ಮಾಡಬೇಕು. ಅಲ್ಲದೆ, ಗ್ರಾಮ ಪಂಚಾಯಿತಿಯ ಕಸದ ವಾಹನ ಮನೆಗಳ ಬಳಿಗೆ ಬಂದಾಗ ಅದರಲ್ಲೇ ಕಸವನ್ನು ಹಾಕುವ ಮೂಲಕ ಪಂಚಾಯಿತಿಯ ಸ್ವಚ್ಛತಾ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
“ಗ್ರಾಮವನ್ನು ಸ್ವಚ್ಛವಾಗಿಡುವುದು ಗ್ರಾಮ ಪಂಚಾಯಿತಿಯೊಂದರ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕನೂ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಸಿಸಿ ಕ್ಯಾಮರಾ ಮೂಲಕ ಕಸ ಹಾಕುವವರ ಮೇಲೆ ನಿಗಾ ಇಡಲಾಗುವುದು. ನಿಯಮ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು,” ಎಂದು ಸಿ. ಚಲುವರಾಜು ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯಿತಿಯ ಈ ಕ್ರಮದಿಂದ ಕೃಷಿ ಮಾರುಕಟ್ಟೆ ಎದುರು ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಲು ಸಾಧ್ಯವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಸಾರ್ವಜನಿಕರು ಪಂಚಾಯಿತಿಯೊಂದಿಗೆ ಕೈಜೋಡಿಸಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಮೂಲಕ ಕಿಕ್ಕೇರಿ ಗ್ರಾಮವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಸಹಕರಿಸಬೇಕು ಎಂದು ಪಂಚಾಯಿತಿ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ. ಚಲುವರಾಜು, ಕಾರ್ಯದರ್ಶಿ ಪಾಪೇಗೌಡ, ಲೆಕ್ಕ ಸಹಾಯಕ ವಾಸು ಹಾಗೂ ಸಿಬ್ಬಂದಿ ಕಿರಣ್ ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article