Minister sets 15-day deadline for cleanliness drive at the sacred Huligi temple.

ಸುಕ್ಷೇತ್ರ ಹುಲಿಗಿ ದೇವಸ್ಥಾನದಲ್ಲಿ ಶುಚಿತ್ವ
ಕಾರ್ಯಕ್ಕೆ 15 ದಿನಗಳ ಗಡುವು ನೀಡಿದ ಸಚಿವರು

ಕೊಪ್ಪಳ ಸೆಪ್ಟೆಂಬರ್ 01 (ಕರ್ನಾಟಕ ವಾರ್ತೆ): ಉತ್ತರ ಕರ್ನಾಟಕದ ಪ್ರಸಿದ್ಧ ದೇವಸ್ಥಾನ ಹುಲಿಗೆಮ್ಮ ದೇವಿಯ ಹುಲಿಗಿ ಕ್ಷೇತ್ರದಲ್ಲಿ ದೇವಸ್ಥಾನ ಆವರಣ ಸೇರಿದಂತೆ ಸುತ್ತಲಿನ ಎಲ್ಲಾ ಕಡೆಗೂ ಯುದ್ದೋಪಾದಿಯಲ್ಲಿ ಶುಚಿತ್ವ ಕಾರ್ಯ ಆರಂಭಿಸಿ 15 ದಿನಗಳೊಳಗೆ ಪೂರ್ಣಗೊಳಿಸಬೇಕು ಎಂದು ಮುಜರಾಯಿ, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಕೆ.ಎಸ್.ಬಸವಂತಪ್ಪ ಅವರು ದೇವಸ್ಥಾನದ ಆಡಳಿತ ಅಧಿಕಾರಿಗಳಿಗೆ ಗಡುವು ವಿದಿಸಿದರು.
ಸೆಪ್ಟೆಂಬರ್ 1ರಂದು ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಹುಲಿಗೆಮ್ಮ ದೇವಿಯ ದರ್ಶನ ಪಡೆದ ಬಳಿಕ ಆಡಳಿತ ಕಚೇರಿಯ ಸಭಾಂಗಣದಲ್ಲಿ, ಸಂಸದರಾದ ಕೆ ರಾಜಶೇಖರ ಹಿಟ್ನಾಳ ಹಾಗೂ ಜಿಲ್ಲಾಧಿಕಾರಿಗಳಾದ ಸುರೇಶ ಇಟ್ನಾಳ ಅವರ ಸಮ್ಮುಖದಲ್ಲಿ ಸಭೆ ನಡೆಸಿ ಅವರು ಮಾತನಾಡಿದರು.
ಪ್ರತಿನಿತ್ಯವೂ ದೇವಸ್ಥಾನದ ಆವರಣ ಶುಚಿಯಾಗಿರಬೇಕು. ದೇವಸ್ಥಾನದ ರಸ್ತೆ ಮಾರ್ಗ, ಪ್ರವೇಶ ದ್ವಾರಗಳು, ದಾಸೋಹ ಭವನ, ಅಡುಗೆ ಕೋಣೆ, ಪುಷ್ಕರಣೆ, ಸ್ನಾನಘಟ್ಟ, ಭಕ್ತರು ಅಡುಗೆ ಮಾಡುವ ಸ್ಥಳ, ಶೌಚಾಲಯಗಳು, ಬಟ್ಟೆ ಬದಲಾಯಿಸುವ ಸ್ಥಳ ಸೇರಿದಂತೆ ಮುಖ್ಯವಾಗಿ ನದಿ ಸುತ್ತಲಿನ ಸ್ಥಳದಲ್ಲಿ ಸಾಕಷ್ಟು ಶುಚಿತ್ವ ಕಾರ್ಯ ಆಗಬೇಕು. ಇದಕ್ಕಾಗಿ ಮಾನವ ಸಂಪನ್ಮೂಲದ ಅವಶ್ಯಕತೆ ಇದ್ದರೆ ತಿಳಿಸಬೇಕು. ಹಣಕಾಸಿನ ಕೊರತೆ ಇಲ್ಲವೇ ಇಲ್ಲ. ಇಲ್ಲಿರುವುದು ಸೂಕ್ತ ನಿರ್ವಹಣೆಯ ಕೊರತೆ. ಈ ಬಗ್ಗೆ ಗಮನ ಹರಿಸಬೇಕು. ಶುಚಿತ್ವ ಕಾರ್ಯಕ್ಕೆ ಶಿಸ್ತುಬದ್ಧ ಯೋಜನೆ ರೂಪಿಸಬೇಕು. 15 ದಿನಗಳೊಳಗೆ ಶುಚಿತ್ವ ಕಾರ್ಯವಾಗದೇ ಇದ್ದಲ್ಲಿ ತಮ್ಮ ಮೇಲೆ ಮುಲಾಜಿಲ್ಲದೇ ಕ್ರಮ ವಹಿಸುತ್ತೇನೆ ಎಂದು ಸಚಿವರು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ಅನಿರೀಕ್ಷಿತ ಭೇಟಿ: ತಾವು ಹುಲಿಗಿ ದೇವಸ್ಥಾನಕ್ಕೆ ಮತ್ತೊಮ್ಮೆ ಅನಿರೀಕ್ಷತ ಭೇಟಿ ಕೊಡುವುದಾಗಿ ಆ ವೇಳೆ ಮತ್ತೆ ಯಾವುದಾದರು ಕಡೆಗಳಲ್ಲಿ ಅಶುಚಿತ್ವ ಮತ್ತು ಅವ್ಯವಸ್ಥೆ ಕಂಡು ಬಂದಲ್ಲಿ ಸೂಕ್ತ ಕ್ರಮ ಜರುಗಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಶ್ರೀ ಹುಲಿಗೆಮ್ಮ ದೇವಿ ದೇವಾಲಯದ ಸಮಗ್ರ ಅಭಿವೃದ್ಧಿಗಾಗಿ ನಕ್ಷೆಯನ್ನು ತಯಾರಿಸಿ 06.05.2025ರಂದು ನಡೆದ ಪ್ರಧಿಕಾರದ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. 20 ಮೀಟರ್ ಅಳತೆಯ ಮುಖ್ಯ ರಸ್ತೆ, 60 ಮೀಟರ್ ಪ್ರಸ್ತಾಪಿತ ಉಪ ರಸ್ತೆಗಳು, ವಾಹನ ನಿಲುಗಡೆ ಸ್ಥಳ, ಕ್ಯೂಲೈನ್ ಮತ್ತು ವೀಕ್ಷಣಾ ಗ್ಯಾಲರಿ, ತೆರೆದ ಮುಕ್ತ ಮಂಟಪ, ಕ್ಯಾಂಟೀನ್, ಪುಷ್ಕರಣಿ, ಸ್ನಾನಘಟ್ಟ, ಭಕ್ತರು ಅಡುಗೆ ಮಾಡುವ ಸ್ಥಳ, ವಾಣಿಜ್ಯ ಮಳಿಗೆ, ಶೌಚಾಲಯಗಳು, ಗೋಶಾಲೆ, ವಸತಿ ಗೃಹಗಳು, ಎಸ್‌ಟಿಪಿ, ಓಎಸ್‌ಟಿ, ಹೊಸ ಕಾಲುವೆ ಹಾಗೂ ಹಳೆಯ ಕಾಲುವೆ ಸೇರಿದಂತೆ ನಾನಾ ಕಾಮಗಾರಿಗಳನ್ನು ಪ್ರಸ್ತಾಪಿತ ನಕ್ಷೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಬಸ್ ನಿಲ್ದಾಣ ನಿರ್ಮಿಸಲು ಒತ್ತಾಯ: ಹುಲಿಗಿ ಕ್ಷೇತ್ರ ದಿನೇದಿನೆ ಹೆಸರಾಗುತ್ತಿದೆ. ಆದರೆ, ಇಲ್ಲಿ ಮೂಲಭೂತ ಸೌಕರ್ಯಗಳಿಗೆ ಸಾಕಷ್ಟು ಕೊರತೆಯಿದೆ. ಪ್ರತಿ ಮಾಹೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುತ್ತಿದ್ದು ಆದರೆ ಇಂತಹ ಪ್ರಮುಖ ಸ್ಥಳದಲ್ಲಿ ಬಸ್ ನಿಲ್ದಾಣ ಇಲ್ಲ ಎಂದು ಸಮಾಜ ಸೇವಕರಾದ ಈರಪ್ಪ ಅವರು ಸಚಿವರಲ್ಲಿ ಮನವಿ ಮಾಡಿದರು.
ಮಾನವ ಸಂಪನ್ಮೂಲ ಒದಗಿಸಿ: ಹುಲಿಗಿ ಕ್ಷೇತ್ರಕ್ಕೆ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ನಿರ್ವಹಣೆಗಾಗಿ ಸೂಕ್ತ ಮಾನವ ಸಂಪನ್ಮೂಲದ ಅವಶ್ಯಕತೆ ಇರುತ್ತದೆ. ಇಲ್ಲಿ ಪ್ರತಿಯೊಂದು ಕಾರ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಬೇಕು. ಲೆಕ್ಕಪತ್ರ, ಆಡಳಿತ, ದಾಸ್ತಾನು ನಿರ್ವಹಣೆ, ಶುಚಿತ್ವ ಕಾರ್ಯದ ಮೇಲ್ವಿಚಾರಣೆ ಸೇರಿದಂತೆ ನಾನಾ ಕಾರ್ಯಗಳಿಗೆ ನುರಿತ ಮಾನವ ಸಂಪನ್ಮೂಲ ಬೇಕಾಗುತ್ತದೆ. ಈ ಕಾರ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ರಾಜ್ಯ ಕಾರ್ಮಿಕ ಸಲಹಾ ಮಂಡಳಿ ಸದಸ್ಯರಾದ ಪಂಪಾಪತಿ ಅವರು ಸಭೆಗೆ ಸಲಹೆ ಮಾಡಿದರು.
ಅಂಗಡಿಗಳು ರಸ್ತೆಗೆ ಬರಬಾರದು: ದೇವಸ್ಥಾನ ಎದುರಿನ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿನ ಕೆಲವು ಅಂಗಡಿಕಾರರು ದಿನೇದಿನೆ ರಸ್ತೆಯನ್ನು ಒತ್ತುವರಿ ಮಾಡುತ್ತ ಲಾಭಕ್ಕಾಗಿ ರೋಡಿಗೆ ಆಕ್ರಮಿಸುತ್ತಾರೆ. ಇದರಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಈ ಹಿಂದೆ ರಸ್ತೆ ಒತ್ತುವರಿಯನ್ನು ತೆರವು ಮಾಡಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಉತ್ತಮ ಕಾರ್ಯ ಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಯನ್ನು ನಿಯೋಜಿಸಿ ಜನದಟ್ಟಣೆಯನ್ನು ನಿಯಂತ್ರಿಸಬೇಕು. ರಸ್ತೆ ಒತ್ತುವರಿ ಮಾಡಿರುವುದು, ಮಾಡುತ್ತಿರುವುದು ಕಂಡು ಬಂದಲ್ಲಿ ಮುಲಾಜಿಲ್ಲದೇ ತೆರವು ಕಾರ್ಯವನ್ನು ನಿರಂತರ ಮಾಡಿ ವಿಶಾಲ ರಸ್ತೆಯ ಶಿಸ್ತನ್ನು ಕಾಯ್ದುಕೊಳ್ಳಬೇಕು ಎಂದು ಸಭೆಯಲ್ಲಿದ್ದ ಗ್ರಾಮದ ಪ್ರಮುಖರೆಲ್ಲರೂ ಸಭೆಗೆ ಆಗ್ರಹ ಮಾಡಿದರು.
ಸಭೆಯಲ್ಲಿ ಆಡಳಿತಾಧಿಕಾರಿ ಎಂ ಎಚ್ ಪ್ರಕಾಶರಾವ್, ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಮತ್ತು ಹುಲಿಗಿ ಗ್ರಾಮಸ್ಥರು ಇದ್ದರು.

