ಬಿಡಾಡಿ ದನಗಳನ್ನು ರಸ್ತೆಗೆ ಬಿಡದಂತೆ ಮಾಲೀಕರಿಗೆ ಕೊಪ್ಪಳ ನಗರಸಭೆ ಸೂಚನೆ

H.Mallikarjun
H.Mallikarjun - Kalyanasiri
1 Min Read

Koppal City Council advice to owners not to let animals roam on the road

Contents
ಸಾಂಧರ್ಭಿಕ ಚಹಿತ್ರ

 

ಬಿಡಾಡಿ ದನಗಳನ್ನು ರಸ್ತೆಗೆ ಬಿಡದಂತೆ ಮಾಲೀಕರಿಗೆ ಕೊಪ್ಪಳ ನಗರಸಭೆ ಸೂಚನೆ

ಕೊಪ್ಪಳ ಆಗಸ್ಟ್ 12 (ಕರ್ನಾಟಕ ವಾರ್ತೆ): ಕೊಪ್ಪಳ ನಗರದಲ್ಲಿ ದನ-ಕರುಗಳನ್ನು ರಸ್ತೆಗೆ ಬಿಡುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ದನಗಳ ಮಾಲೀಕರು ತಮ್ಮ ಜಾನುವಾರುಗಳನ್ನು ಮನೆಯಲ್ಲಿಯೇ ಕಟ್ಟಿಹಾಕಿ ಸಾಕುವಂತೆ ಕೊಪ್ಪಳ ನಗರಸಭೆ ಸೂಚನೆ ನೀಡಿದೆ.
ನಗರದ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ ಬಿಡಾಡಿ ದನಗಳು ಮಲಗುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ರಸ್ತೆ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಅಲ್ಲದೆ, ತರಕಾರಿ ಮಾರುಕಟ್ಟೆಗಳಲ್ಲಿ ಬಿಡಾಡಿ ದನಗಳು ತರಕಾರಿಗಳನ್ನು ತಿನ್ನುವುದರಿಂದ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ.
ನಗರದ ವಿವಿಧ ಬಡಾವಣೆಗಳ ಕಿರಿದಾದ ರಸ್ತೆಗಳಲ್ಲಿ ದನಗಳು ಗುಂಪಾಗಿ ಓಡಾಡುವುದರಿಂದ ಮಕ್ಕಳು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಅಪಘಾತದ ಅಪಾಯ ಎದುರಾಗುತ್ತಿದೆ. ರಸ್ತೆಗಳಲ್ಲಿ ದನಗಳು ಗುಂಪು ಗುಂಪಾಗಿ ನಿಲ್ಲುವುದರಿಂದ ಸಂಚಾರ ದಟ್ಟಣೆ ಉಂಟಾಗಿ ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ ಎರಡು ದಿನಗಳೊಳಗಾಗಿ ಸಂಬಂಧಪಟ್ಟ ದನಗಳ ಮಾಲೀಕರು ತಮ್ಮ ದನ-ಕರುಗಳನ್ನು ಮನೆಯಲ್ಲಿ ಕಟ್ಟಿಹಾಕಿಕೊಂಡು ಸಾಕಬೇಕು ಅಥವಾ ಅವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ತಪ್ಪಿದಲ್ಲಿ ಬಿಡಾಡಿ ದನಗಳನ್ನು ನಗರಸಭೆ ವಶಕ್ಕೆ ಪಡೆದು ಗೋಶಾಲೆಗೆ ಹಸ್ತಾಂತರಿಸಲಾಗುವುದು.
ವಶಕ್ಕೆ ಪಡೆದ ದನಗಳು ತಮ್ಮದೇ ಎಂದು ಮಾಲೀಕರು ನಗರಸಭೆ ಕಚೇರಿಗೆ ಬಂದಲ್ಲಿ ಪ್ರತಿ ದನಕ್ಕೆ ರೂ. 5,000 ದಂಡ ವಿಧಿಸಲಾಗುವುದು. ಜೊತೆಗೆ ಸಂಬಂಧಪಟ್ಟವರ ವಿರುದ್ಧ ಕಾನೂನು ರೀತ್ಯಾ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article