3 ದಿನಗಳಲ್ಲಿ ಬೆಂಗಳೂರಿನ 60 ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ: 1 ವರ್ಷಕ್ಕೂ ಹಳೆಯ ಮಾಂಸ ಪತ್ತೆ!

H.Mallikarjun
H.Mallikarjun - Kalyanasiri
4 Min Read

← Back

Thank you for your response. ✨

 

Raids on 60 star hotels in Bengaluru over 3 days: Meat older than a year discovered

 

3 ದಿನಗಳಲ್ಲಿ ಬೆಂಗಳೂರಿನ 60 ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ: 1 ವರ್ಷಕ್ಕೂ ಹಳೆಯ ಮಾಂಸ ಪತ್ತೆ!

ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆ ಮೂರು ದಿನಗಳಲ್ಲಿ 60 ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದೆ. 1 ವರ್ಷಕ್ಕೂ ಹಳೆಯ ಮಾಂಸ, ಕೊಳೆತ ಆಹಾರ, ಸತ್ತ ಜಿರಳೆ ಇದ್ದ ಚೀಸ್, ಫಂಗಸ್ ಬಂದ ಮಶ್ರೂಮ್, ಕೊಳೆತ ತರಕಾರಿ, ಅವಧಿ ಮೀರಿದ ಹಾಲು-ಮೊಸರು ಸೇರಿದಂತೆ ಭಾರಿ ಪ್ರಮಾಣದ ಆಹಾರ ಪದಾರ್ಥ ಪತ್ತೆಯಾಗಿದೆ.

ಬೆಂಗಳೂರು, ಆಗಸ್ಟ್ 10: ಬೆಂಗಳೂರಿನ (Bengaluru) ಸ್ಟಾರ್ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದ್ದು, ಮೂರು ದಿನಗಳಲ್ಲಿ ಬರೋಬ್ಬರಿ 60 ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ ನಡೆಸಲಾಗಿದೆ. ತಪಾಸಣೆ ವೇಳೆ ಕೊಳೆತ ಮಾಂಸ, ಅವಧಿ ಮೀರಿದ ಆಹಾರ ಪದಾರ್ಥಗಳು, ಕೊಳೆತ ತರಕಾರಿಗಳು, ಬಳಸಿದ ಅಡುಗೆ ಎಣ್ಣೆ ಸೇರಿದಂತೆ ಹಲವು ಆಹಾರ ಸುರಕ್ಷತಾ ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ. ಅಚ್ಚರಿ ಎಂದರೆ, ಒಂದು ವರ್ಷಕ್ಕೂ ಹೆಚ್ಚು ಅವಧಿ ಮೀರಿರುವ ಮಾಂಸಾಹಾರ ಉತ್ಪನ್ನಗಳೂ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.null

ಜಾಹೀರಾತು

77 ಆಹಾರ ಮಾದರಿ ಸಂಗ್ರಹ

ದಾಳಿ ವೇಳೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಒಟ್ಟು 77 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ತಪಾಸಣೆಯಲ್ಲಿ 640 ಕೆ.ಜಿ. ಚಿಕನ್, ಮಟನ್ ಮತ್ತು ಮೀನು, 276 ಕೆ.ಜಿ. ಕೊಳೆತ ತರಕಾರಿ, 45 ಲೀಟರ್ ಅವಧಿ ಮೀರಿದ ಹಾಲು ಮತ್ತು ಮೊಸರು, 12 ಕೆ.ಜಿ. ಬೇಕರಿ ಉತ್ಪನ್ನಗಳು ಹಾಗೂ 67 ಕೆ.ಜಿ. ಅವಧಿ ಮೀರಿದ ಮತ್ತು ತಪ್ಪು ಲೇಬಲಿಂಗ್ ಹೊಂದಿದ್ದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.

ಇದರ ಜೊತೆಗೆ 49 ಲೀಟರ್ ಬಳಸಿದ ಹಾಗೂ ನಿಯಮಬಾಹಿರ ಅಡುಗೆ ಎಣ್ಣೆ ಕೂಡ ವಶಕ್ಕೆ ಪಡೆಯಲಾಗಿದೆ. ಎಕ್ಸ್‌ಪೈರಿ ದಿನಾಂಕವಿಲ್ಲದ ಮತ್ತು ಒಂದು ವರ್ಷಕ್ಕೂ ಹೆಚ್ಚು ಅವಧಿ ಮೀರಿರುವ ಮಾಂಸಾಹಾರ ಉತ್ಪನ್ನಗಳು ಪತ್ತೆಯಾಗಿರುವುದು ಅಧಿಕಾರಿಗಳಿಗೂ ಆಘಾತ ಮೂಡಿಸಿದೆ. ಅವಧಿ ಮೀರಿದ ಆಹಾರವನ್ನು ಮತ್ತೆ ಪ್ಯಾಕ್ ಮಾಡಿ ಬಳಸಲು ಸಿದ್ಧಪಡಿಸಿರುವುದು ಕೂಡ ತಪಾಸಣೆ ವೇಳೆ ಬೆಳಕಿಗೆ ಬಂದಿದೆ.null

ಹೋಟೆಲ್‌ಗಳಲ್ಲಿ ಏನೆಲ್ಲ ಪತ್ತೆ?

ಯುಬಿ ಸಿಟಿ, ಎಂಜಿ ರೋಡ್, ಬ್ರಿಗೇಡ್ ರೋಡ್ ಸೇರಿದಂತೆ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿರುವ ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳ ಅಡುಗೆಮನೆ ಮತ್ತು ಆಹಾರ ಸಂಗ್ರಹಣಾ ಸ್ಥಳಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಅಲ್ಲಿ ಪತ್ತೆಯಾಗಿರುವ ಕಳಪೆ ಆಹಾರವಸ್ತುಗಳ ವಿವರ ಇಲ್ಲಿದೆ;

ಹೋಟೆಲ್ ಸ್ಕೈ, ಯುಬಿ ಸಿಟಿ

  • 45 ಕೆ.ಜಿ. ಕೊಳೆತ ಕೋಳಿ ಮತ್ತು ಬೀಫ್
  • 6 ಕೆ.ಜಿ. ವೆಜಿಟೇಬಲ್ ಕಟ್ಲೆಟ್
  • 15 ಲೀಟರ್ ಬಳಸಿದ ಅಡುಗೆ ಎಣ್ಣೆ.

ರಾಯಲ್ ಚೈನ್ ಹೋಟೆಲ್

  • 50 ಕೆ.ಜಿ. ಡಕ್ ಮಾಂಸ ವಶ
  • 5 ಕೆ.ಜಿ. ಮೀನು ವಶಕ್ಕೆ

ಮದ್ರಾಸ್ ಕಿಚನ್

  • 5 ಕೆ.ಜಿ. ಹಸಿ ಬಟಾಣಿ ಜಪ್ತಿ

ಟೆಸ್ಕಾನ್ ಹೋಟೆಲ್

  • 5 ಕೆ.ಜಿ. ಕಳಪೆ ಮಶ್ರೂಮ್ ಪತ್ತೆ, ಆಹಾರ ಸುರಕ್ಷತೆ ಕುರಿತು ಪರಿಶೀಲನೆ

ಸೆಂಚೆಜ್ ಹೋಟೆಲ್

  • 3 ಕೆ.ಜಿ. ಮೀನು
  • 7 ಕೆ.ಜಿ. ಕೇಕ್
  • ಆಲೂಗಡ್ಡೆ ಸೇರಿದಂತೆ ಇತರೆ ಆಹಾರ ಪದಾರ್ಥಗಳ ಜಪ್ತಿ

ಚೀಸ್‌ನಲ್ಲಿ ಸತ್ತ ಜಿರಳೆ, ಮಶ್ರೂಮ್‌ಗೆ ಫಂಗಸ್!

ತಪಾಸಣೆ ವೇಳೆ ಕೆಲವು ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಸ್ಥಿತಿ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. ಚೀಸ್ ಪ್ಯಾಕೆಟ್‌ನಲ್ಲಿ ಸತ್ತ ಜಿರಳೆ, ಮಶ್ರೂಮ್‌ನಲ್ಲಿ ಫಂಗಸ್ ಹಾಗೂ ಬೇಬಿ ಕಾರ್ನ್‌ನಲ್ಲಿ ಕೀಟಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫ್ರೀಜರ್‌ಗಳಲ್ಲಿ ಸೂಕ್ತ ರೀತಿಯಲ್ಲಿ ಸಂಗ್ರಹಿಸದ ಮಾಂಸಾಹಾರ ಪದಾರ್ಥಗಳೂ ಪತ್ತೆಯಾಗಿವೆ.

ಯುಬಿ ಸಿಟಿಯಲ್ಲಿರುವ ಹೋಟೆಲ್ ಸ್ಕೈನಲ್ಲಿ ದೊಡ್ಡ ಪ್ರಮಾಣದ ಮಾಂಸ ಮತ್ತು ಇತರೆ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಅಡುಗೆಮನೆಗೆ ಬೀಗ ಹಾಕಿ ಸೀಲ್ ಮಾಡಲಾಗಿದೆ.

ಮ್ಯಾಕ್‌ಡೊನಾಲ್ಡ್ಸ್ ಸೇರಿ ಇತರೆ ಸಂಸ್ಥೆಗಳಲ್ಲೂ ತಪಾಸಣೆ

ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಸ್ಟಾರ್ ಹೋಟೆಲ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. KFC, ಮ್ಯಾಕ್‌ಡೊನಾಲ್ಡ್ಸ್ ಮತ್ತು ಸಬ್‌ವೇ ಸೇರಿದಂತೆ ಹಲವು ಆಹಾರ ಮಳಿಗೆಗಳಲ್ಲೂ ತಪಾಸಣೆ ಮುಂದುವರಿದಿದೆ. ಆಹಾರ ಸಂಗ್ರಹಿಸುವ ಗೋದಾಮುಗಳಲ್ಲೂ ನಿಯಮಗಳ ಪಾಲನೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಅಡುಗೆ ಎಣ್ಣೆ ಶುದ್ಧೀಕರಿಸಲು ಮೆಗ್ನೀಸಿಯಂ ಸಲ್ಫೈಟ್ ಬಳಕೆ

ಬ್ರಿಗೇಡ್ ರಸ್ತೆಯಲ್ಲಿರುವ ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ಶುದ್ಧೀಕರಿಸಲು ಮೆಗ್ನೀಸಿಯಂ ಸಲ್ಫೈಟ್ ಬಳಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಆಹಾರ ಸುರಕ್ಷತಾ ನಿಯಮಗಳ ದೃಷ್ಟಿಯಿಂದ ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಸದ್ಯ ಜಪ್ತಿ ಮಾಡಿರುವ ಆಹಾರ ಪದಾರ್ಥಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಲ್ಯಾಬ್ ವರದಿ ಬಂದ ಬಳಿಕ ನಿಯಮ ಉಲ್ಲಂಘಿಸಿರುವ ಹೋಟೆಲ್‌ಗಳು ಮತ್ತು ಆಹಾರ ಸಂಸ್ಥೆಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

  •  
  •  
  •  
  •  

 

 

 

 

 

 

 

 

 

 

Total Views: 0
Share This Article