Request to the City Council to clean up Durgamma's Halla and open the parking area to the public.

ದುರ್ಗಮ್ಮನ ಹಳ್ಳ ಸ್ವಚ್ಛಗೊಳಿಸಿ, ಪಾರ್ಕಿಂಗ್ ಜಾಗ ಸಾರ್ವಜನಿಕರಿಗೆ ಮುಕ್ತಗೊಳಿಸಲು ನಗರಸಭೆಗೆ ಮನವಿ

ಗಂಗಾವತಿ, ಆ.೨:ನಗರದ ಹೃದಯಭಾಗದಲ್ಲಿ ಹರಿಯುತ್ತಿರುವ ದುರ್ಗಮ್ಮನ ಹಳ್ಳವನ್ನು ತುರ್ತಾಗಿ ಸ್ವಚ್ಛಗೊಳಿಸಬೇಕು ಹಾಗೂ ಅಮೃತ್ ನಗರ ಯೋಜನೆಯಡಿ ನಿರ್ಮಿಸಿರುವ ಪಾರ್ಕಿಂಗ್ ಸ್ಥಳಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ದುರ್ಗಮ್ಮನ ಹಳ್ಳದ ಇಂದಿನ ಸ್ಥಿತಿ:
ನಾಲ್ಕು ವರ್ಷಗಳ ಹಿಂದೆ “ನಮ್ಮ ಊರು ನಮ್ಮ ಹಳ್ಳ” ಸಮಾನ ಮನಸ್ಕರ ತಂಡದ ವತಿಯಿಂದ ದುರ್ಗಮ್ಮನ ಹಳ್ಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿತ್ತು. ಆನಂತರ ಅಮೃತ್ ನಗರ ಯೋಜನೆಯಡಿ ಹಳ್ಳಕ್ಕೆ ತಡೆಗೋಡೆ ಕೂಡ ನಿರ್ಮಿಸಲಾಗಿತ್ತು. ಆದರೆ ಇದೀಗ ನಿರ್ವಹಣೆಯ ಕೊರತೆಯಿಂದಾಗಿ ಹಳ್ಳದಲ್ಲಿ ಮತ್ತೆ ಗಿಡ-ಗಂಟೆಗಳು ಬೆಳೆದು, ಕಸ-ಕಡ್ಡಿ ತುಂಬಿಕೊಂಡು ಬೃಹತ್ ಚರಂಡಿಯಂತಾಗಿದೆ. ಇದು ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಹಾಗೂ ಆತಂಕವನ್ನು ಮೂಡಿಸಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಪವಿತ್ರ ಸ್ಥಳಗಳ ಆವರಣದಲ್ಲಿ ಮಲಿನ:
ಹಳ್ಳದ ದಂಡೆಯಲ್ಲೇ ಐತಿಹಾಸಿಕ ಚನ್ನಬಸವಸ್ವಾಮಿಗಳ ಮಠ (ತಾತನ ಮಠ) ಹಾಗೂ ಗ್ರಾಮದೇವತೆ ಶ್ರೀ ದುರ್ಗಾದೇವಿ ದೇವಸ್ಥಾನದಂತಹ ಪವಿತ್ರ ಸ್ಥಳಗಳಿವೆ. ಇಂತಹ ಧಾರ್ಮಿಕ ಕೇಂದ್ರಗಳ ಪಕ್ಕದಲ್ಲೇ ಹಳ್ಳದ ಸ್ವಚ್ಛತೆ ಕಾಪಾಡುವಲ್ಲಿ ನಗರಸಭೆ ಹಾಗೂ ಸಾರ್ವಜನಿಕರು ವಿಫಲರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.
ಬಳಕೆಯಾಗದ ಪಾರ್ಕಿಂಗ್ ಸ್ಥಳಗಳು:
ಅಮೃತ್ ನಗರ ಯೋಜನೆಯಡಿ ತಾತನ ಮಠದ ಎದುರು, ಶಿವ ಚಿತ್ರಮಂದಿರದ ಎದುರು ಹಾಗೂ ಇಸ್ಲಾಂಪುರ ಸೇತುವೆ ಸಮೀಪ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಪಾರ್ಕಿಂಗ್ ಸ್ಥಳಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಈ ಜಾಗಗಳನ್ನು ತಕ್ಷಣವೇ ಸಾರ್ವಜನಿಕರ ಪಾರ್ಕಿಂಗ್‌ಗೆ ಮುಕ್ತಗೊಳಿಸಿ, ಸುಸಜ್ಜಿತವಾಗಿ ನಿರ್ವಹಿಸಬೇಕೆಂದು ಒತ್ತಾಯಿಸಲಾಗಿದೆ.
ಮನವಿಯಲ್ಲಿನ ಪ್ರಮುಖ ಬೇಡಿಕೆಗಳು:
- ಹಳ್ಳಕ್ಕೆ ಸಾರ್ವಜನಿಕರು ಮತ್ತು ವ್ಯಾಪಾರಿಗಳು ಕಸ ಹಾಕುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು.
- ಹಳ್ಳದ ಎರಡೂ ದಂಡೆಗಳಿಂದ ಹರಿಯುವ ಕೊಳಚೆ ನೀರನ್ನು ಯುಜಿಡಿ (UGD) ವ್ಯವಸ್ಥೆಗೆ ಸಂಪರ್ಕಿಸಬೇಕು.
- ಹಳ್ಳದಲ್ಲಿ ಕೇವಲ ಕಾಲುವೆ ನೀರು ಮಾತ್ರ ಹರಿಯುವಂತೆ ಕ್ರಮ ಕೈಗೊಂಡು, ದುರ್ಗಮ್ಮನ ಹಳ್ಳವನ್ನು ಸ್ವಚ್ಛ ಹಾಗೂ ಸುಂದರವಾಗಿ ಅಭಿವೃದ್ಧಿಪಡಿಸಬೇಕು.
ದುರ್ಗಮ್ಮನ ಹಳ್ಳ ಸ್ವಚ್ಛತಾ ಅಭಿಯಾನದ ಸಂಚಾಲಕರಾದ ಡಾ. ಶಿವಕುಮಾರ್ ಮಾಲಿಪಾಟೀಲ, ಉಮೇಶ್ ಸಿಂಗನಾಳ, ಪ್ರಹ್ಲಾದ್ ಕುಲಕರ್ಣಿ, ಬಸವರಾಜ ಮ್ಯಾಗಳಮನಿ, ಸಂದೇಶ್ ಹಿರೇಮಠ, ಹರನಾಯಕ, ನವೀನಕುಮಾರ ಮಾಲಿ ಪಾಟೀಲ್, ಮಂಜುನಾಥ ಮಂಗಳಗಿ, ನಾಗರಾಜ ನಾಯಕ ಸೇರಿದಂತೆ ಮುಖಂಡರು ನಗರಸಭೆಯ ಪರಿಸರ ಅಭಿಯಂತರರಾದ ಶ್ರೀ ಶರಣಪ್ಪ ಅವರ ಮೂಲಕ ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
