ತುಂಗಭದ್ರಾ ಜಲಾಶಯದ 33 ಸ್ಪಿಲ್‌ವೇ ಗೇಟುಗಳ ಲೋಕಾರ್ಪಣೆ ಕಾರ್ಯಕ್ರಮ

H.Mallikarjun
H.Mallikarjun - Kalyanasiri
5 Min Read
ಜಾಹೀರಾತು
Inauguration ceremony of 33 spillway gates of Tungabhadra reservoir




ತುಂಗಭದ್ರಾ ಜಲಾಶಯದ 33 ಸ್ಪಿಲ್‌ವೇ ಗೇಟುಗಳ ಲೋಕಾರ್ಪಣೆ ಕಾರ್ಯಕ್ರಮ

ಜಾಹೀರಾತು


ರೈತರ ಹಿತರಕ್ಷಣೆಗೆ ಮೂರೂ ರಾಜ್ಯಗಳ ಒಮ್ಮತದ ಐತಿಹಾಸಿಕ ತೀರ್ಮಾನ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಕೊಪ್ಪಳ ಜೂನ್ 25 (ಕರ್ನಾಟಕ ವಾರ್ತೆ): ತುಂಗಭದ್ರಾ ನದಿ ಪಾತ್ರದ ರೈತರ ಹಿತರಕ್ಷಣೆಗೆ ಮೂರೂ ರಾಜ್ಯಗಳ ಒಮ್ಮತದ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಜಿಲ್ಲೆಯ ಮುನಿರಾಬಾದ್‌ನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಗುರುವಾರಂದು ಕರ್ನಾಟಕ ಸರ್ಕಾರ, ಜಲಸಂಪನ್ಮೂಲ ಇಲಾಖೆ ಹಾಗೂ ತುಂಗಭದ್ರಾ ಮಂಡಳಿಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ತುಂಗಭದ್ರಾ ಜಲಾಶಯದ ನೂತನ 33 ಸ್ಪಿಲ್‌ವೇ ಗೇಟುಗಳ ಲೋಕಾರ್ಪಣೆ’ ಸಮಾರಂಭದಲ್ಲಿ ಅವರು ಮಾತನಾಡಿದರು.
ರೈತ ಸಂಘಟನೆಗಳು ಹಾಗೂ ವೇದಿಕೆಯವರು ನೀಡಿರುವ ಅರ್ಜಿ ಮತ್ತು ಪ್ರತಿಪಾದನೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನವಲಿ ಡ್ಯಾಂ ನಿರ್ಮಾಣ ಇರಬಹುದು ಅಥವಾ ಜಲಾಶಯದಲ್ಲಿ ಶೇಖರಣೆಯಾಗಿರುವ ಹೂಳನ್ನು ತೆಗೆದು ನೀರನ್ನು ಸಂರಕ್ಷಿಸುವ ವಿಚಾರವಾಗಿರಬಹುದು, ಇವೆಲ್ಲದರ ಬಗ್ಗೆ ಗಂಟೆಗಳ ಕಾಲ ಸುದೀರ್ಘವಾಗಿ ಹಾಗೂ ವ್ಯಾಪಕವಾಗಿ ಚರ್ಚೆ ನಡೆಸಲಾಗಿದೆ. ರೈತರ ಹಿತವನ್ನು ಕಾಯಲು ಮತ್ತು ಅವರ ರಕ್ಷಣೆ ಮಾಡಲು ನಾವೆಲ್ಲರೂ ಸೇರಿ ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದೇವೆ. ಈ ಸಭೆಯಲ್ಲಿ ಕೈಗೊಳ್ಳಲಾದ ಅಂತಿಮ ನಿರ್ಧಾರಗಳನ್ನು ಕೇಂದ್ರ ಸಚಿವರು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.
ಇಂದು ಜಲಸಂಪನ್ಮೂಲ ಇಲಾಖೆಯ ಇತಿಹಾಸದಲ್ಲೇ ಅತ್ಯಂತ ಪ್ರಮುಖವಾದ ದಿನವಾಗಿದೆ. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನವನ್ನು ಎತ್ತಿಹಿಡಿಯಲು, ನಮ್ಮ ಹಕ್ಕುಗಳನ್ನು ರಕ್ಷಿಸಲು ಹಾಗೂ ರೈತರನ್ನು ಬದುಕಿಸಲು “ನಮ್ಮ ನೀರು ನಮ್ಮ ಹಕ್ಕು” ಎಂಬ ಘೋಷಣೆಯಡಿ ಮೂರು ರಾಜ್ಯಗಳ (ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ) ರೈತರ ಹಿತ ಕಾಯುವ ನಿಟ್ಟಿನಲ್ಲಿ ಈ ಐತಿಹಾಸಿಕ ತೀರ್ಮಾನಕ್ಕೆ ಬರಲಾಗಿದೆ. ತುಂಗಭದ್ರಾ ನದಿಗೆ ಜಲಾಶಯ ನಿರ್ಮಿಸುವ ಆಲೋಚನೆಗೆ 1860 ರಲ್ಲೇ ಬ್ರಿಟಿಷ್ ಇಂಜಿನಿಯರ್ ಸರ್ ಆರ್ಥರ್ ಕಾಟನ್ ಅವರು ನಾಂದಿ ಹಾಡಿದ್ದರು. ತದನಂತರ 1949 ರಲ್ಲಿ ಇದರ ಕಾಮಗಾರಿ ಆರಂಭಗೊAಡು ಪೂರ್ಣಗೊಳ್ಳುವ ಹೊತ್ತಿಗೆ ಅನೇಕ ಮಹನೀಯರು ಇದಕ್ಕೆ ಸಾಕ್ಷಿಯಾಗಿದ್ದಾರೆ. ರಾಯಲಸೀಮೆ, ಬಳ್ಳಾರಿ ಭಾಗದ ಜನರ ಹಿತದೃಷ್ಟಿಯಿಂದ ಹಾಗೂ ಕಾಮಾಕ್ಷಿ ಪೀಠದ ಮಾರ್ಗದರ್ಶನದಂತೆ ಈ ಯೋಜನೆಯನ್ನು ಜಾರಿಗೊಳಿಸಬೇಕಾದ ಅನಿವಾರ್ಯತೆ ಇವತ್ತಿನದ್ದಾಗಿದೆ ಎಂದರು.
ಮೂರು ರಾಜ್ಯಗಳ ನೀರಾವರಿ ಸಮಸ್ಯೆಗಳನ್ನು ಒಟ್ಟಾಗಿ ಹೇಗೆ ಬಗೆಹರಿಸಿ ರೈತರನ್ನು ಬದುಕಿಸಬೇಕು ಎನ್ನುವುದಕ್ಕೆ ಇವತ್ತಿನ ದಿನ ಸಾಕ್ಷಿಯಾಗಿದೆ. “ದೇವರು ನಮಗೆ ಎರಡು ಆಯ್ಕೆಗಳನ್ನು ನೀಡಿದ್ದಾನೆ; ಒಂದು ಕೊಟ್ಟು ಹೋಗುವುದು, ಇಲ್ಲವೇ ಬಿಟ್ಟು ಹೋಗುವುದು. ದೇವರು ಯಾರಿಗೂ ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ, ಕೇವಲ ಅವಕಾಶವನ್ನು ಮಾತ್ರ ನೀಡುತ್ತಾನೆ. ಈ ಬದುಕಿನಲ್ಲಿ ನಮ್ಮ ಹೆಜ್ಜೆಯ ಗುರುತುಗಳನ್ನು ಉಳಿಸಿ ಹೋಗಲು, ಸಾಕ್ಷಿ ಗುಡ್ಡಗಳನ್ನು ನಿರ್ಮಾಣ ಮಾಡಲು ಸಿಕ್ಕಿರುವ ಈ ಅವಕಾಶದಲ್ಲಿ ಜನಸಾಮಾನ್ಯರ ಹಾಗೂ ರೈತರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾವುಕರಾಗಿ ನುಡಿದರು.
2024 ರ ಆಗಸ್ಟ್ 10 ರಂದು ಜಲಾಶಯದ 19ನೇ ಗೇಟ್ ಮುರಿದುಬಿದ್ದ ಸಂದರ್ಭವನ್ನು ನೆನೆದ ಮುಖ್ಯಮಂತ್ರಿಗಳು, “ಅಂದು ಮಧ್ಯರಾತ್ರಿ ಜಿಲ್ಲಾ ಸಚಿವರಾದ ತಂಗಡಗಿ ಹಾಗೂ ಅಧಿಕಾರಿಗಳು ಫೋನ್ ಮಾಡಿ ಡ್ಯಾಂ ಶೇಕ್ ಆಗುತ್ತಿರುವ ಪರಿಸ್ಥಿತಿಯನ್ನು ವಿವರಿಸಿದ್ದರು. ನಾನು ತಕ್ಷಣವೇ ಕಾರ್ಯಪ್ರವೃತ್ತನಾಗಿ ಬೆಳಿಗ್ಗೆ 8:30ರ ಹೊತ್ತಿಗೆ ಡ್ಯಾಂ ಸ್ಥಳದಲ್ಲಿದ್ದೆ. ಕೇವಲ 10-15 ದಿನಗಳಲ್ಲಿ 19ನೇ ಗೇಟನ್ನು ಯಶಸ್ವಿಯಾಗಿ ಬದಲಾಯಿಸುವ ಮೂಲಕ ಈ ಭಾಗದ ರೈತರ ಕಣ್ಣೀರನ್ನು ಒರೆಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ” ಎಂದರು.
ಗೇಟ್ ಮುರಿದಾಗ ವಿರೋಧ ಪಕ್ಷದವರು ಟೀಕೆ ಮಾಡಿದ್ದರು ಎಂದು ನೆನಪಿಸಿಕೊಂಡ ಅವರು, ಶಾರದಾ ದೇವಿ, ಹುಲಿಗೆಮ್ಮ ಹಾಗೂ ಹುಚ್ಚರಾಯಸ್ವಾಮಿಯ ಆಶೀರ್ವಾದ, ಹಂಪಿ ವಿರೂಪಾಕ್ಷನ ಕೃಪೆ ಮತ್ತು ರಾಘವೇಂದ್ರ ಸ್ವಾಮಿಯ ಶಕ್ತಿಯಿಂದ ಇಂತಹ ಮಹತ್ವದ ಕಾರ್ಯವನ್ನು ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು. ಅಲ್ಲದೆ, ಮೂರೂ ರಾಜ್ಯಗಳ ರೈತರ ಹಿತದೃಷ್ಟಿಯಿಂದ ಜಲಾಶಯದ ಎಲ್ಲಾ 33 ಗೇಟುಗಳನ್ನು ಬದಲಾಯಿಸುವ ದಿಟ್ಟ ತೀರ್ಮಾನವನ್ನು ಕೈಗೊಳ್ಳಲಾಯಿತು ಎಂದು ಅವರು ವಿವರಿಸಿದರು.
“ನಾವು ಇತಿಹಾಸವನ್ನು ಮರೆಯುವವರಲ್ಲ, ಇತಿಹಾಸವನ್ನು ಓದುವವರಲ್ಲ, ಬದಲಿಗೆ ಇತಿಹಾಸವನ್ನು ಸೃಷ್ಟಿಸುವವರು” ಎಂದು ಘೋಷಿಸಿದ ಡಿ.ಕೆ. ಶಿವಕುಮಾರ್ ಅವರು, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರ ನೇತೃತ್ವದಲ್ಲಿ ದಕ್ಷಿಣ ಭಾರತದ ಮೂವರು ಪ್ರಮುಖ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು (ಆಂಧ್ರಪ್ರದೇಶ) ಮತ್ತು ರೇವಂತ್ ರೆಡ್ಡಿ (ತೆಲಂಗಾಣ) ಅವರೊಂದಿಗೆ ತಾವೂ ಸೇರಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.
“ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು” ಎಂಬ ತತ್ವದಡಿ ಮೂರೂ ರಾಜ್ಯಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಈ ಒಗ್ಗಟ್ಟಿನ ಮೂಲಕ 33 ಟಿಎಂಸಿ ನೀರನ್ನು ಉಳಿಸುವ ಹಾಗೂ ಮುಂದಿನ ದಿನಗಳಲ್ಲಿ ಡ್ಯಾಂ ಅನ್ನು ಸಂಪೂರ್ಣವಾಗಿ ರಕ್ಷಿಸುವ ಭರವಸೆಯನ್ನು ರೈತರಿಗೆ ನೀಡಿದರು. ತಾವು ಹಿಂದೆ ನೀರಾವರಿ ಸಚಿವರಾಗಿದ್ದಾಗ ಹಾಗೂ ಪ್ರಸ್ತುತ ಮುಖ್ಯಮಂತ್ರಿಯಾಗಿದ್ದರೂ ಸಹ, ಎಂದಿಗೂ ರೈತರ ಸೇವಕ ಮತ್ತು ಬಂಧುವಾಗಿ ಜವಾಬ್ದಾರಿಯಿಂದ ಕೆಲಸ ಮಾಡುವುದಾಗಿ ಮುಖ್ಯಮಂತ್ರಿ ಶಿವಕುಮಾರ್ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ರೈತನಿಗೆ ಸಂಬಳವಿಲ್ಲ, ಪ್ರಮೋಷನ್ ಇಲ್ಲ, ಪೆನ್ಷನ್ ಇಲ್ಲ, ರಜೆಯೂ ಇಲ್ಲ ಹಾಗೂ ನಿವೃತ್ತಿಯೂ ಇಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ದೇಶಕ್ಕೆ ಅನ್ನ ನೀಡುವ ರೈತನ ಬದುಕನ್ನು ಉಳಿಸಬೇಕು ಮತ್ತು ಈ ಭಾಗದ ಭತ್ತದ ಕಣಜವನ್ನು ಕಾಪಾಡಬೇಕು ಎಂಬ ದೃಢ ತೀರ್ಮಾನವನ್ನು ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನಾವು ತೆಗೆದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಭಾವುಕರಾಗಿ ನುಡಿದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್. ಪಾಟೀಲ್, ಆಂಧ್ರಪ್ರದೇಶ ಮುಖ್ಯಮಂತ್ರಿಗಳಾದ ಎನ್.ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿಗಳಾದ ಎ.ರೇವಂತ್ ರೆಡ್ಡಿ, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಎಸ್ ಹೊರಟ್ಟಿ, ಆಂಧ್ರಪ್ರದೇಶದ ಜಲಸಂಪನ್ಮೂಲ ಇಲಾಖೆ ಮಾನ್ಯ ಸಚಿವರಾದ ಡಾ. ನಿಮ್ಮಲ ರಾಮನಾಯ್ಡು, ಆಂಧ್ರಪ್ರದೇಶದ ಹಣಕಾಸು, ಯೋಜನೆ, ವಾಣಿಜ್ಯ ತೆರಿಗೆ ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ ಸಚಿವರಾದ ಪಯ್ಯವುಲ ಕೇಶವ್, ತೆಲಂಗಾಣದ ನೀರಾವರಿ ಇಲಾಖೆ ಹಾಗೂ ಸಿಎಡಿ ಸಚಿವರಾದ ಎನ್.ಉತ್ತಮ್ ಕುಮಾರ ರೆಡ್ಡಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ್, ಸಂಸದರಾದ ಕೆ. ರಾಜಶೇಖರ ಹಿಟ್ನಾಳ್, ಬಳ್ಳಾರಿ ಸಂಸದರಾದ ಈ. ತುಕಾರಾಮ್, ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಬರುವ ವಿಧಾನಸಭೆ ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಶಿವರಾಜ ಎಸ್. ತಂಗಡಗಿ, ಮುನಿರಾಬಾದ್ ತುಂಗಾಭದ್ರಾ ಯೋಜನೆ (ಕಾಡಾ) ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹಸನ್‌ಸಾಬ್ ನಬಿಸಾಬ್ ದೋಟಿಹಾಳ, ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಹೆಚ್.ಆರ್. ಗವಿಯಪ್ಪ, ಎಂ.ಪಿ. ಲತಾ ಮಲ್ಲಿಕಾರ್ಜುನ, ವಿಧಾನಪರಿಷತ್ ಶಾಸಕರುಗಳಾದ  ಶರಣಗೌಡ ಅನ್ನದಾನಗೌಡ ಪಾಟೀಲ ಬಯ್ಯಾಪೂರ, ಬಸನಗೌಡ ಬಾದರ್ಲಿ ಹಾಗೂ ಎನ್.ಎಸ್. ಬೋಸರಾಜು, ಗದಗ ಜಿಲ್ಲೆಯ ವ್ಯಾಪ್ತಿಗೆ ಬರುವ ವಿಧಾನಸಭೆ ಶಾಸಕರುಗಳಾದ ಹೆಚ್.ಕೆ. ಪಾಟೀಲ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ, ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು

Total Views: 0
Share This Article