Human Trafficking Prevention Day: A Legal Awareness Approach
ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ: ಕಾನೂನು ಅರಿವು-ನೆರವು

ಕೊಪ್ಪಳ ಆಗಸ್ಟ್ 01 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಕೊಪ್ಪಳ ಹಾಗೂ ಶ್ರೀ ಮಹಿಳಾ ಪ್ರತಿಧ್ವನಿ ಸಾಮಾಜಿಕ, ಶೈಕ್ಷಣಿಕ ಮತ್ತು ಗ್ರಾಮಿಣ ಅಭಿವೃದ್ಧಿ ಸೇವಾ ಸೊಸೈಟಿ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ (ಆ.1ರಂದು) ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ನಡೆಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಉಪಮುಖ್ಯ ಕಾನೂನು ಅಭಿರಕ್ಷಕರಾದ ಪ್ರದೀಪ್ ಕುಮಾರ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ಮಾನವ ಸಾಗಾಣಿಕೆ ಕುರಿತು ಜುಲೈ 30 ರಂದು ಮಾನ ಕಳ್ಳ ಸಾಗಾಣಿಕೆ ವಿರೋಧಿ ದಿನ ಆಚರಿಸಲಾಗುತ್ತಿದೆ. ಇದು ವಿಶ್ವ ಸಂಸ್ಥೆ ಜಾರಿಗೆ ತಂದಿದೆ. ಮಾನವನಿಗೆ ಮೋಸ ಆಮೀಷಗಳನ್ನು ತೋರಿಸಿ ಬೇರೆ ದೇಶಕ್ಕೆ ಕಳುಹಿಸುವ ಭರವಸೆ ನೀಡಿ, ಮೋಸ ಮಾಡುವುದು ಮತ್ತು ಬೇರೆ ಸಂಸ್ಥೆಗಳಿಗೆ ಮಾರಾಟ ಮಾಡುವುದು ಮಾನವ ಕಳ್ಳ ಸಾಗಾಣಿಕೆಯಾಗಿದೆ. ಮಾನವ ಕಳ್ಳ ಸಾಗಾಣಿಕೆಯಲ್ಲಿ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಬಲಿಪಶು ಆಗುತ್ತಾರೆ. ಇದರಲ್ಲಿ ಬಲವಂತದ ದುಡಿಮೆ, ಲೈಂಗಿಕ ಶೋಷಣೆ ಹಾಗೂ ಬಾಲ ಕಾರ್ಮಿಕತೆಯು ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಮಾನವನ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಇದಲ್ಲದೇ ಮನುಷ್ಯನು ದೈಹಿಕ ಮತ್ತು ಮಾನಸಿಕ ಹಿಂಸೆಗೂ ಒಳಗಾಗುತ್ತಾನೆ ಎಂದರು.
ಮಾನವಗಳ ಸಾಗಾಣಿಕೆ ಮಾಡುವವರ ವಿರುದ್ಧ ಬಿಎನ್‌ಎಸ್ ಆ್ಯಕ್ಟ್ ಮೂಲಕ ಕಾನೂನು ಕ್ರಮಕ್ಕೆ ಅವಕಾಶವಿದ್ದು, ಅಂತಹ ಪ್ರಕರಣಗಳು ಕಂಡುಬದಲ್ಲಿ ಪೊಲೀಸರಿಗೆ ದೂರು ನೀಡಬೇಕು. ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಸುರಕ್ಷತೆ ಬಗ್ಗೆ ಮಾಹಿತಿ ನೀಡಬೇಕು. ವಿಶೇಷವಾಗಿ ಗ್ರಾಮ ಪಂಚಾಯಿತಿಯಲ್ಲಿಯೂ ಅರಿವು ಮೂಡಿಸಬೇಕು. ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಗೌರವ ಕಾಪಾಡಬೇಕು. ಯಾರೂ ಸಹ ಶೋಷಣೆಗಳನ್ನು ಸಹಿಸಿಕೊಳ್ಳಬಾರದು. ಬಲಿ ಪಶುಗಳಿಗೆ ಬೆಂಬಲ ಮತ್ತು ಪುನರ ವಸತಿ ನೀಡಲು ಸಂಬಧಪಟ್ಟ ಇಲಾಖೆಗಳು ಶ್ರಮಿಸಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ನಟರಾಜ್ ಅವರು ಮತನಾಡಿ, ಸಖಿ ಒನ್ ಸ್ಟಾಪ್ ಸೆಂಟರ್, ಮಹಿಳಾ ಸಬಲೀಕರಣ ಘಟಕ, ಸಾಂತ್ವಾನ ಕೇಂದ್ರ, ಮೇಲ್ವಿಚಾರಕರು ಹೆಚ್ಚು ಮಹಿಳೆಯರ ಜೊತೆ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳಿಗೆ ಮನುಷ್ಯರಿಗೆ ಯಂತ್ರವಾಗಿ ಬಳಸುವುದು ವಿನಾಶಕಾರಿಯಾಗಿದೆ. ಪ್ರತಿ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಮಕ್ಕಳ ಕಾವಲು ಸಮಿತಿ ರಚನೆಯಾಗಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಯನ್ನು ಏರ್ಪಡಿಸಿ ಗ್ರಾಮಗಳಲ್ಲಿ ವಾರ್ಡಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಂಕಿ ಅಂಶಗಳನ್ನು ಕ್ರೂಡಿಕರಿಸಿ ಮಾಹಿತಿ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಅಮರೇಶ್ ಅವರು ವಹಿಸಿದ್ದರು.
ವಕೀಲರಾದ ಕೆ.ಬಿ ಬರಮಣ್ಣ ಅವರು ಮಾತನಾಡಿ, ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಬೇಕು. 112ಗೆ ಕರೆ ಮಾಡಿ ಎಂದು ಮಾಹಿತಿ ತಿಳಿಸಿದರು.
ಕೊಪ್ಪಳ ತಾಲೂಕ್ ಪಂಚಾಯತ್ ಸಹಾಯಕ ನಿರ್ದೇಶಕರಾದ ಮಹೇಶ್ ಅವರು ಮಾತನಾಡಿ ಕಾರ್ಯಕ್ರಮದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಕ್ಷೇತ್ರ ಅಧಿಕಾರಿಗಳಾದ ಗಂಗಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅನ್ನಪೂರ್ಣ ಕುಬಕಡ್ಡಿ ಸೇರಿದಂತೆ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಹಿರಿಯ, ಕಿರಿಯ ಮೇಲ್ವಿಚಾರಕಿಯರು, ಸಿಬ್ಬಂದಿಗಳು, ಸಖಿ ಒನ್ ಸ್ಟಾಪ್ ಸೆಂಟರ್ ಕೊಪ್ಪಳದ ಸಿಬ್ಬಂದಿಗಳು, ಸಾಂತ್ವಾನ ಯೋಜನೆಯ ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮಿ ಬಾಗೇವಾಡಿ ಅವರು “ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನದ ಹಾಗೂ ವ್ಯಸನ ಮುಕ್ತ ದಿನಾಚರಣೆಯ ಕುರಿತು ಪ್ರತಿಜ್ಞಾವಿಧಿ” ಯನ್ನು ಬೋಧಿಸಿದರು.
ಮೇಲ್ವಿಚಾರಕಿ ಪ್ರೀತಿ ಕೋರಿ ಅವರು ಪ್ರಾರ್ಥನೆ ಗೈದರು. ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿನಿ ಕೊಟಗಾರ ಅವರು ಸ್ವಾಗತಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ವಂದನಾರ್ಪಣೆಯೊಂದಿಗೆ ಮುಕ್ತಾಯಗೊಳಿಸಿದರು.
****
Total Views:
0
