ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನರ ಪಾಲ್ಗೊಳ್ಳುವಿಕೆ ಅಗತ್ಯ: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸಲಹೆ

H.Mallikarjun
H.Mallikarjun - Kalyanasiri
6 Min Read

Youth participation is necessary to build an addiction-free society: Additional District Commissioner Sidrameshwar’s advice

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನರ ಪಾಲ್ಗೊಳ್ಳುವಿಕೆ ಅಗತ್ಯ: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸಲಹೆ


ಕೊಪ್ಪಳ ಆಗಸ್ಟ್ 01 (ಕರ್ನಾಟಕ ವಾರ್ತೆ): ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನರ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದು ಅಪರ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ತರಬೇತಿ ಕೇಂದ್ರ, ಪದವಿ ಪೂರ್ವ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಆರೋಗ್ಯ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಇವರ ಸಹಯೋಗದಲ್ಲಿ ಆಗಸ್ಟ್ 1 ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಡಾ.ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆಯ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಮಹಾಂತ ಶಿವಯೋಗಿಗಳು ಸಮಾಜವನ್ನು ವ್ಯಸನಮುಕ್ತಗೊಳಿಸಲು ಶ್ರಮಿಸಿದರು. ಕುಡಿತ, ತಂಬಾಕು ಸೇವೆನೆಯಂತಹ ದುರಭ್ಯಾಸಗಳ ವಿರುದ್ಧ ವ್ಯಾಪಕ ಜನಜಾಗೃತಿ ಮೂಡಿಸಿದರು. ಅವರ ಜನ್ಮದಿನದ ನಿಮಿತ್ತ ವ್ಯಸನಮುಕ್ತ ದಿನಾಚರಣೆಯನ್ನು ಸರ್ಕಾರದಿಂದ ಆಚರಿಸಲಾಗುತ್ತಿದೆ. ಡಾ. ಮಹಾಂತ ಶಿವಯೋಗಿಗಳು ತೋರಿದ ಹಾದಿಯಲ್ಲಿ ನಡೆದು ವ್ಯಸನಮುಕ್ತ ಸಮಾಜ ನಿರ್ಮಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿಶೇಷವಾಗಿ ಈ ಬಗ್ಗೆ ಯುವಜನತೆಯ ಜವಾಬ್ದಾರಿ ಹೆಚ್ಚಿದ್ದು, ಇಂದಿನ ಯುವ ಪೀಳಿಗೆಯು ಡ್ರಗ್ಸ್ ಹಾಗೂ ಇತರ ದುರಭ್ಯಾಸಗಳತ್ತ ಬೇಗ ಆಕರ್ಷಿತರಾಗುವ ಮಾನಸಿಕತೆ ಹೊಂದುತ್ತಿರುವುದು ಕಳವಳಕಾರಿ. ಹಾಗಾಗಿ, ಈ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಯುವಜನತೆ ದುರಭ್ಯಾಸಗಳಿಗೆ ಬಲಿಯಾಗದೆ, ಇವುಗಳ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು.
ವ್ಯಸನ ಎಂದರೆ ಕೇವಲ ಡ್ರಗ್ಸ್ ಮಾತ್ರವಲ್ಲ; ಮದ್ಯಪಾನ, ಸಿಗರೇಟ್ ಸೇವನೆ ಸೇರಿದಂತೆ ಎಲ್ಲಾ ರೀತಿಯ ದುರಭ್ಯಾಸಗಳೂ ಸೇರುತ್ತವೆ. ಇದರಿಂದ ಕೇವಲ ದೈಹಿಕ ಆರೋಗ್ಯ ಮಾತ್ರ ಹಾಳಾಗುವುದಿಲ್ಲ, ಬದಲಿಗೆ ಮಾನಸಿಕ ಅಸ್ವಸ್ಥತೆ, ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳ ನಷ್ಟ, ಆರ್ಥಿಕ ಹಾಗೂ ಸಾಮಾಜಿಕ ಕುಸಿತ ಉಂಟಾಗುತ್ತದೆ. ಕುಟುಂಬ ಮತ್ತು ಸಮಾಜದ ಮೇಲಾಗುವ ಪೆಟ್ಟು, ಒಬ್ಬ ವ್ಯಕ್ತಿ ವ್ಯಸನಕ್ಕೆ ಒಳಗಾದರೆ ಆತನ ತಂದೆ-ತಾಯಿ ಹಾಗೂ ಕುಟುಂಬದವರು ದಿನನಿತ್ಯ ಅನುಭವಿಸುವ ಯಾತನೆ ಹೆಚ್ಚು. ಆತನನ್ನು ಹೊರತರಲು ಕುಟುಂಬದವರು ನಿರಂತರ ಹೋರಾಟ ನಡೆಸಬೇಕಾಗುತ್ತದೆ. ವ್ಯಸನಿಯಾದ ವ್ಯಕ್ತಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಲು ಸಾಧ್ಯವಿಲ್ಲ. ವ್ಯಸನಮುಕ್ತ ದಿನಾಚರಣೆಯಲ್ಲಿ ಕೇವಲ ಪ್ರತಿಜ್ಞಾ ವಿಧಿ ಸ್ವೀಕರಿಸಿ ಹೋಗುವುದಷ್ಟೇ ಸಾಲದು; ಅದನ್ನು ಕಟ್ಟುನಿಟ್ಟಾಗಿ ಜೀವನದಲ್ಲಿ ಆಚರಣೆಗೆ ತರಬೇಕು. ಸ್ವತಃ ವ್ಯಸನಗಳಿಂದ ದೂರವಿರುವುದಷ್ಟೇ ಅಲ್ಲದೆ, ತಮ್ಮ ಕುಟುಂಬ, ನೆರೆಹೊರೆಯವರು ಹಾಗೂ ಹಳ್ಳಿ ಮತ್ತು ಜಿಲ್ಲೆಯನ್ನು ವ್ಯಸನಮುಕ್ತಗೊಳಿಸಲು ಯುವಜನತೆ ಶ್ರಮಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ಕರೆ ನೀಡಿದರು.
ಹೊಸಪೇಟೆಯ ಖ್ಯಾತ ಚಿಕ್ಕಮಕ್ಕಳ ಮನೋತಜ್ಞರಾದ ಡಾ. ಲಕ್ಷ್ಮೀದೇವಿ ಎಮ್. ಪಾಟೀಲ್ ಅವರು “ವ್ಯಸನದಿಂದಾಗುವ ದುಷ್ಪರಿಣಾಮಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ, ಇತ್ತೀಚಿನ ದಿನಗಳಲ್ಲಿ 18 ರಿಂದ 25 ವರ್ಷದ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್.ಐ.ವಿ ಹಾಗೂ ಏಡ್ಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಡ್ರಗ್ಸ್ ಸೇವನೆ ಹಾಗೂ ಸಿರಿಂಜ್-ಸೂಜಿಗಳನ್ನು ಹಂಚಿಕೊಳ್ಳುವುದು ಮುಖ್ಯ ಕಾರಣವಾಗಿದೆ. ಇಂಟರ್ನೆಟ್ ಹಾಗೂ ಸೋಷಿಯಲ್ ಮೀಡಿಯಾಗಳ ಸುಲಭ ಲಭ್ಯತೆಯಿಂದಾಗಿ ಯುವಜನತೆ ಕೇವಲ ಕುತೂಹಲಕ್ಕೋಸ್ಕರ ಗಾಂಜಾ, ಐ.ವಿ ಡ್ರಗ್ಸ್ ಗಳಂತಹ ಅಪಾಯಕಾರಿ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ನೇರವಾಗಿ ರಕ್ತಕ್ಕೆ ಸೇರುವ ಡ್ರಗ್ಸ್ಗಳು ಮಿದುಳಿನ ‘ರಿವಾರ್ಡ್ ಸಿಸ್ಟಮ್’ ಅನ್ನು ಸಂಪೂರ್ಣವಾಗಿ ಹೈಜಾಕ್ ಮಾಡುತ್ತವೆ. ಇದರಿಂದಾಗಿ ದೈನಂದಿನ ಸಾಮಾನ್ಯ ಚಟುವಟಿಕೆಗಳು ಅಥವಾ ಸಂತೋಷದ ಕ್ಷಣಗಳು ಅವರಿಗೆ ಖುಷಿ ಕೊಡುವುದಿಲ್ಲ; ಬದಲಿಗೆ ಮತ್ತೆ ಮತ್ತೆ ಅದೇ ಡ್ರಗ್ಸ್ ಬೇಕು ಎನ್ನಿಸುವ ಸ್ಥಿತಿಗೆ ತಲುಪುತ್ತಾರೆ ಎಂದರು.
ವ್ಯಸನವು ಕೇವಲ ದೈಹಿಕ ಆರೋಗ್ಯವನ್ನಷ್ಟೇ ಅಲ್ಲದೆ, ನರಮಂಡಲ, ಲಿವರ್ ಮತ್ತು ಹೃದಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ, ಕುಟುಂಬದಲ್ಲಿ ಜಗಳ, ಆರ್ಥಿಕ ಮುಗ್ಗಟ್ಟು ಹಾಗೂ ಸಾಂಸಾರಿಕ ನೆಮ್ಮದಿ ಹಾಳಾಗಲು ಕಾರಣವಾಗುತ್ತದೆ. ವ್ಯಸನದಿಂದ ಹೊರಬರಲು ಹೆದರುವ ಅಥವಾ ಮುಜುಗರಪಡುವ ಅಗತ್ಯವಿಲ್ಲ. ಪ್ರತಿಯೊಂದು ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಉಚಿತ ಡಿ-ಅಡಿಕ್ಷನ್ ಚಿಕಿತ್ಸೆ ಮತ್ತು ಕೌನ್ಸೆಲಿಂಗ್ ಲಭ್ಯವಿದೆ. ಮಾನಸಿಕ ಮತ್ತು ವ್ಯಸನಮುಕ್ತ ಕೌನ್ಸೆಲಿಂಗ್ ಅಗತ್ಯವಿದ್ದರೆ `ಟೆಲಿ-ಮಾನಸ್’ ಉಚಿತ ಟೋಲ್ ಫ್ರೀ ಸಂಖ್ಯೆ 14416 ಗೆ ಕರೆ ಮಾಡಿ ಉಚಿತ ಹಾಗೂ ರಹಸ್ಯ ಸಲಹೆಗಳನ್ನು ಪಡೆಯಬಹುದು ಎಂದು ಅವರು ಮಾಹಿತಿ ನೀಡಿದರು.
ಕೊಪ್ಪಳದ ಪ್ರಸಿದ್ಧ ಉಪನ್ಯಾಸಕ ಶಿವನಗೌಡ ಪೊಲೀಸ್ ಪಾಟೀಲ್ ಅವರು, ಡಾ. ಮಹಾಂತ ಶಿವಯೋಗಿಗಳ ಕುರಿತು ವಿಶೇಷ ಉಪನ್ಯಾಸ ನೀಡಿ, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಲಕಲ್ ಸಮೀಪದ ಗ್ರಾಮದವರಾದ ಡಾ. ಮಹಾಂತ ಶಿವಯೋಗಿಗಳು, ಕೇವಲ 10 ವರ್ಷದ ಸಣ್ಣ ವಯಸ್ಸಿನಲ್ಲಿಯೇ ಸನ್ಯಾಸತ್ವ ಸ್ವೀಕರಿಸಿ ಮಠದ ಹಿರಿಯ ಪೀಠಾಧಿಪತಿಗಳಾಗಿ ಆಯ್ಕೆಯಾದರು. ಇಲಕಲ್ಲಿನ ಚಿತ್ತರಗಿ ಸಂಸ್ಥಾನ ಮಠದ ಪೀಠಾಧಿಪತಿಗಳಾಗಿ 1970 ರಿಂದ 2018ರವರೆಗೆ ಸುಮಾರು 48 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದರು. ಮಹಾಂತ ಶಿವಯೋಗಿಗಳಿಗೆ ಆಧ್ಯಾತ್ಮಿಕ ಕಣ್ಣು ಮತ್ತು ಸಮಾಜದ ನೋವುಗಳಿಗೆ ಸ್ಪಂದಿಸುವ ಸಮಾಜಮುಖಿ ಕಣ್ಣು ಎಂಬ ಎರಡು ದೃಷ್ಟಿಗಳಿದ್ದವು. ಇವುಗಳ ಮೂಲಕವೇ ಅವರು ಇಡೀ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. 1980ರಲ್ಲಿ ಮೊಟ್ಟಮೊದಲ ಬಾರಿಗೆ ಜೋಳಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಈ ಜೋಳಿಗೆಯಲ್ಲಿ ಅವರು ಹಣ, ಆಸ್ತಿ ಅಥವಾ ತನು-ಮನ-ಧನವನ್ನು ಕೇಳಲಿಲ್ಲ. ಬದಲಾಗಿ, ಜನರಲ್ಲಿದ್ದ ಕೆಟ್ಟ ದುಶ್ಚಟಗಳು ಮತ್ತು ವ್ಯಸನಗಳನ್ನು ಜೋಳಿಗೆಗೆ ಹಾಕಿ, ದುಶ್ಚಟ ಮುಕ್ತರಾಗುವಂತೆ ಕ್ರಾಂತಿಕಾರಿ ಪ್ರತಿಜ್ಞೆ ಮಾಡಿಸಿದರು ಎಂದರು.
ಮನುಷ್ಯನು ಬಿಡಿ ಸಿಗರೇಟ್ ಬಳಕೆ ಹಾಗು ಕುಡಿತದ ದುರ್ವೆಸನಗಳಿಂದ ದೂರವಿರಬೇಕು. ಇದರ ಬದಲಿಗೆ ಪ್ರಾಮಾಣಿಕತೆ, ಸೇವೆ ಮತ್ತು ಆಧ್ಯಾತ್ಮಿಕತೆ, ಮೂರು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕೆಂದು ಡಾ. ಮಹಾಂತ ಶಿವಯೋಗಿಗಳು ಮಹತ್ವದ ಸಂದೇಶ ನೀಡಿದ್ದಾರೆ. ಇಂದಿನ ಕಾಲದಲ್ಲಿ ಮದ್ಯ-ಧೂಮಪಾನದ ಜೊತೆಗೆ ‘ಮೊಬೈಲ್ ಗೀಳು’ ಹಾಗೂ ‘ರೀಲ್ಸ್ ಹುಚ್ಚು’ ಕೂಡ ದೊಡ್ಡ ಮಾನಸಿಕ ಕಾಯಿಲೆಯಾಗಿ ಬೆಳೆದಿದ್ದು, ಜನರನ್ನು ತನ್ನ ದಾಸರನ್ನಾಗಿ ಮಾಡಿಕೊಳ್ಳುತ್ತಿದೆ. ಇದರ ಬಗ್ಗೆ ಯುವಜನರು ಹೆಚ್ಚು ಗಮನಿಸಬೇಕು. ಸಮಾಜದಲ್ಲಿ ಯಾರೂ ಕೆಟ್ಟವರಲ್ಲ, ಅವರಲ್ಲಿರುವ ವ್ಯಸನಗಳನ್ನು ತಿದ್ದಿ ಸರಿಪಡಿಸಬೇಕೆಂದು ಡಾ. ಮಹಾಂತ ಶಿವಯೋಗಿಗಳು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಗವಿಸಿದ್ದಪ್ಪ ಹೊಸಮನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ಮಹಾಂತ ಶಿವಯೋಗಿಗಳು ಮದ್ಯ ಹಾಗೂ ಇತರೆ ದುರಭ್ಯಾಸಗಳಿಗೆ ಬಲಿಯಾದವರ ಮನೆಗೆ ಜೋಳಿಗೆಯನ್ನು ಹಿಡಿದು ಹೋಗಿ, ಅವರ ದುಶ್ಚಟಗಳನ್ನು ಜೋಳಿಗೆಗೆ ಹಾಕಿಸಿಕೊಳ್ಳುವ ಮೂಲಕ ಅವರನ್ನು ಸನ್ಮಾರ್ಗಕ್ಕೆ ತಂದು ಸಮಾಜದಲ್ಲಿ ಬಹುದೊಡ್ಡ ಸಾಮಾಜಿಕ ಸುಧಾರಣೆ ತಂದಿದ್ದಾರೆ. ಇಂತಹ ಮಹನೀಯರ ಜನ್ಮದಿನವನ್ನು ವ್ಯಸನ ಮುಕ್ತ ದಿನಾಚರಣೆಯನ್ನಾಗಿ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಭಾಷಣ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗೆ ಸಹಕರಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಕಾರ್ಯಕ್ರಮ ಯಶಸ್ವಿಯಾಗಲು ಇನ್ನೀತರ ಎಲ್ಲ ಇಲಾಖೆಗಳ ಸಹಕಾರ ನೀಡಿವೆ ಎಂದು ತಿಳಿಸಿದರು.
*ಪ್ರತಿಜ್ಞಾ ಸ್ವೀಕಾರ:* ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಜಗದೀಶ ಅವರು ವ್ಯಸನ ಮುಕ್ತ ದಿನದ ಪ್ರತಿಜ್ಞೆ ಬೋಧಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ವ್ಯಸನಮುಕ್ತ ಸಮಾಜ ನಿರ್ಮಾಣದ ಪ್ರತಿಜ್ಞೆ ಸ್ವೀಕರಿಸಿದರು.
ಸಮಾರಂಭದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಟಿ.ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಅಜ್ಜಪ್ಪ ಸೊಗಲದ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಎ.ಬಸವರಾಜ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ನವಚೇತನ ಪಿಯು ಕಾಲೇಜು, ಜ್ಞಾನಬಂಧು ಪದವಿ ಪೂರ್ವ ಕಾಲೇಜು, ಚೈತನ್ಯ ಪಿಯು ಕಾಲೇಜಿ, ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು, ಐಟಿಐ ಕಾಲೇಜು, ಶಾರದ ಇಂಟರ್‌ನ್ಯಾಷ್ನಲ್ ಸ್ಕೂಲ್, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಎಸ್.ವಿ.ಎಂ ಸ್ಕೂಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯರಾದ ಕೃಷ್ಣಮುರ್ತಿ ದೇಸಾಯಿ ಅವರು ಕಾರ್ಯಕ್ರಮ ನಿರೂಪಿಸಿದರು. ಶಕುಂತಲಾ ಬಿನ್ನಾಳ ಹಾಗೂ ತಂಡದವರು ನಾಡಗೀತೆ ಹಾಗೂ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ಮಹಾಂತ ಸ್ವಾಮೀಜಿ ಅವರ ಜೀವನ ಸಂದೇಶದ ಬಗ್ಗೆ ಶ್ರೀಮತಿ ಸೌಮ್ಯ ವಿಜಯಕುಮಾರ ನಾಲವಾಡ ಅವರು ವಚನ ಗಾಯನ ಪ್ರಸ್ತುತಪಡಿಸಿದರು.
Total Views: 0
Share This Article