Condemnation of the order to release water to Tamil Nadu – Mr. Pampanna Nayaka, District President of the Karnataka Rakshana Vedike (KRV), urges the protection of the state's farmers' interests.

ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡನೆ – ರಾಜ್ಯದ ರೈತರ ಹಿತ ಕಾಪಾಡಲು ಕ.ರ.ವೇ. ಜಿಲ್ಲಾ ಅಧ್ಯಕ್ಷರಾದ ಶ್ರೀ ಪಂಪಣ್ಣ ನಾಯಕ ಒತ್ತಾಯ.
ಗಂಗಾವತಿ, ಜುಲೈ 29:ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ನೀಡಿರುವ ಆದೇಶವು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತಪರ ಹೋರಾಟ ಸಂಘದ ಮುಖಂಡರು ತಿಳಿಸಿದ್ದಾರೆ.
ಈ ಕುರಿತು ಮಾನ್ಯ ತಹಶೀಲ್ದಾರರು, ಗಂಗಾವತಿ ಇವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಶ್ರೀ ಪಂಪಣ್ಣ ನಾಯಕ ಅವರು, ರಾಜ್ಯದಲ್ಲಿ ಈ ವೇಳೆಗೆ ಸುಮಾರು ಶೇ.70ರಷ್ಟು ಮುಂಗಾರು ಮಳೆಯಾಗಬೇಕಾಗಿದ್ದರೂ ಕೇವಲ ಶೇ.20ರಷ್ಟು ಮಾತ್ರ ಮಳೆಯಾಗಿದೆ. ರಾಜ್ಯದಲ್ಲಿ ತೀವ್ರ ಮಳೆಯ ಕೊರತೆ ಇರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಹರಿಸುವುದು ನ್ಯಾಯಸಮ್ಮತವಾಗುವುದಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತುಂಗಭದ್ರಾ ಜಲಾಶಯದಲ್ಲಿಯೂ ಇನ್ನೂ ಭಾಗಶಃ ಮಾತ್ರ ನೀರು ಸಂಗ್ರಹವಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಕೈಗಾರಿಕೆಗಳಿಗೆ ಹಾಗೂ ಕಾರ್ಖಾನೆಗಳಿಗೆ ಕದ್ದುಮುಚ್ಚಿ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಿ, ಲಭ್ಯವಿರುವ ನೀರನ್ನು ನಮ್ಮ ಭಾಗದ ರೈತರ ಕೃಷಿ ಭೂಮಿಗಳಿಗೆ ಹಾಗೂ ಜಾನುವಾರುಗಳ ಅಗತ್ಯಗಳಿಗೆ ಆದ್ಯತೆ ನೀಡುವಂತೆ ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮಾನ್ಯ ಮುಖ್ಯಮಂತ್ರಿಗಳು ತಕ್ಷಣವೇ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕ.ರ.ವೇ ಕಾರ್ಯಕರ್ತರಾದ ಶಂಕರಪೂಜಾರಿ, ಹುಸೇನಸಾಬ್, ಉಮೇಶ ಬಂಡಿ, ಮುತ್ತುರಾಜ್, ಬಸವರಾಜ್, ಅಂಜಿ ನಾಯಕ, ಪುಂಡಲಿಕ, ರಮೇಶ್ ಸೇರಿದಂತೆ ಉಪಸ್ಥಿತರಿದ್ದರು.
