ತಾಳಕನಕಾಪುರ ಗ್ರಾಮದ ಅಲೆಮಾರಿ ಕುಟುಂಬಗಳ ಮನೆಗೆ
ಕೊಪ್ಪಳ ತಾ.ಪಂ ಇಓ ದುಂಡಪ್ಪ ತುರಾದಿ ಭೇಟಿ: ಎಸ್‌ಐಆರ್ ಜಾಗೃತಿ
Koppal Taluk Panchayat EO Dundappa Turadi’s visit to the houses of wandering families in Thalakankapura village: SIR awareness

ಕೊಪ್ಪಳ ಜುಲೈ 27 (ಕರ್ನಾಟಕ ವಾರ್ತೆ): ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಿಮಿತ್ತ ಕಲಕೇರಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ತಾಳಕನಕಾಪುರ ಗ್ರಾಮದ ಭಾಗ ಸಂ.40ರಲ್ಲಿ 70 ಅಲೆಮಾರಿ ಕುಟುಂಬಗಳು ವಾಸಿಸುತ್ತಿರುವ ಮನೆಗಳಿಗೆ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕೊಪ್ಪಳ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಅವರು ಇತ್ತೀಚೆಗೆ (ಜು. 23ರಂದು) ಭೇಟಿ ನೀಡಿ ಜಾಗೃತಿ ಮೂಡಿಸಿದರು.
ನಿಮ್ಮ ಮನೆಯಲ್ಲಿರುವ 18 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದು ಹಾಗೂ ಮರಣ ಹೊಂದಿರುವವರು, ಸ್ಥಳಾಂತರಗೊಂಡಿರುವವರು, ನಕಲು ಹೆಸರುಗಳು, ಮತ್ತು ಇತರ ಅನರ್ಹ ಮತದಾರರನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಾ.ಪಂ ಇಓ ಹೇಳಿದರು.
ಅಲೆಮಾರಿ ಕುಟುಂಬದವರಾದ ಸ್ವಾರೆಮ್ಮ ದ್ಯಾಮಣ್ಣ ಪರಿಯವರ ಮನೆಗೆ ಭೇಟಿ ನೀಡಿದರು. ನಮ್ಮ ಮನೆಯಲ್ಲಿರುವ 18 ವರ್ಷ ಮೇಲ್ಪಟ್ಟವರ ಮಾಹಿತಿಯನ್ನು ಬೂತ್ ಮಟ್ಟದ ಅಧಿಕಾರಿಗಳು ನೀಡುವ ಗಣತಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿದ್ದು ಇದೇ ಸಂದರ್ಭದಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ ಸ್ವಾರೆಮ್ಮ ಸಲ್ಲಿಸಿದರು. ಅಲೆಮಾರಿ ಕುಟುಂಬಗಳ 18 ವರ್ಷ ಮೇಲ್ಪಟ್ಟ ಸದಸ್ಯರ ಮಾಹಿತಿಯು ಕೈ ಬಿಡದಂತೆ ಕ್ರಮವಹಿಸಲು ಬೂತ್ ಮಟ್ಟದ ಅಧಿಕಾರಿಗೆ ಕಾರ್ಯನಿರ್ವಾಹಕ ಅಧಿಕಾರಿಗಳು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಡ್ಡಿ ತವದಿ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಬೂತ್ ಮಟ್ಟದ ಅಧಿಕಾರಿ ಮರ್ದಾನಬೀ, ಗ್ರಾಮ ಪಂಚಾಯತಿ ಡಿಇಒ ಕುಮಾರ ಪರಗಿ, ತಾಂಡಾ ರೋಜಗಾರ್ ಮಿತ್ರ ಯಮನೂರಪ್ಪ ಹಾಜರಿದ್ದರು.
Total Views:
0

