Applications invited from eligible parents under the foster care scheme.ಪೋಷಕತ್ವ ಯೋಜನೆಯಡಿ ಅರ್ಹ ಪೋಷಕರಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ ಜುಲೈ 07 (ಕರ್ನಾಟಕ ವಾರ್ತೆ): ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಪೋಷಕತ್ವ ಯೋಜನೆಯಡಿ ಅರ್ಹ ಪೋಷಕರಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಮಕ್ಕಳ ಕಲ್ಯಾಣ ಸಮಿತಿಯು ಮಗುವಿನ ರಕ್ಷಣೆಯನ್ನು ಜೈವಿಕ ಕುಟುಂಬವನ್ನು ಹೊರತುಪಡಿಸಿ ಮತ್ತೊಂದು ಕೌಟುಂಬಿಕ ವಾತಾವರಣ ಹೊಂದಿರುವ ಪರ್ಯಾಯ ವ್ಯವಸ್ಥೆಯಲ್ಲಿ ಇರಿಸುವುದೇ ಪೋಷಕತ್ವ. ಮಕ್ಕಳ ನ್ಯಾಯ (ಮಕ್ಕಳ ಪೋಷಣೆ & ರಕ್ಷಣೆ) ಕಾಯ್ದೆ-2015 ಕಲಂ-(2)ರಂತೆ ಆರೈಕೆ ಮತ್ತು ಪೋಷಣೆ ಅಡಿಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾದ 6 ರಿಂದ 18 ವರ್ಷದೊಳಗಿನ ದತ್ತು ಮುಕ್ತ ಆದೇಶ ಪಡೆದು ದತ್ತು ಹೋಗಲು ಸಾಧ್ಯವಾಗದಿರುವ ಮಕ್ಕಳಿಗೆ ಬಾಲನ್ಯಾಯ ಕಾಯ್ದೆ- ಸೆಕ್ಷನ್ 44 ರನ್ವಯ ಪೋಷಕತ್ವ ಯೋಜನೆಯಡಿ ಪರ್ಯಾಯ ಕುಟುಂಬ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಹೆತ್ತವರ ಪ್ರೀತಿಯನ್ನು ನೀಡುವ ಅತ್ಯುತ್ತಮ ಯೋಜನೆಯಾಗಿದೆ.
*ಪೋಷಕತ್ವದ ಅವದಿ:* ಅಲ್ಪಾವಧಿ ಪೋಷಕತ್ವಯು ಒಂದು ವರ್ಷದ ಅವಧಿಯಾಗಿದೆ. ಧೀರ್ಘಾವಧಿ ಪೋಷಕತ್ವಯು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಅಥವಾ ಮಗುವಿನ ಹೊಂದಾಣಿಕೆಯ ಮೌಲ್ಯಮಾಪನದ ಆದಾರದ ಮೇಲೆ, ಮಗುವಿಗೆ 18 ವರ್ಷ ವಯಸ್ಸಾಗುವವರೆಗೆ ಈ ಅವಧಿಯನ್ನು ಸಮಿತಿಯು ನಿಯತಕಾಲಿಕವಾಗಿ ವಿಸ್ತರಿಸಬಹುದಾಗಿದೆ.
*ನಿರೀಕ್ಷಿತ ಸಾಕು ಪೋಷಕರು ಹೊಂದಿರಬೇಕಾದ ಅವಶ್ಯಕ ಮಾನದಂಡಗಳು:* ನಿರೀಕ್ಷಿತ ಸಾಕು ಪೋಷಕರು ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಸಮರ್ಥರಾಗಿರಬೇಕು ಹಾಗೂ ಅವರಿಗೆ ಯಾವುದೇ ಮಾರಣಾಂತಿಕ ಖಾಯಿಲೆ, ರೋಗ ಹೊಂದಿರಬಾರದು. ಯಾವುದೇ ಅಪರಾಧಿಕ ಕೃತ್ಯದಲ್ಲಿ ಶಿಕ್ಷೆಗೊಳಗಾಗಿರಬಾರದು ಅಥವಾ ಯಾವುದೇ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣದ ಆರೋಪವನ್ನು ಸಹ ಹೊಂದಿರಬಾರದು. ಯಾವುದೇ ವ್ಯಕ್ತಿಗಳ & ಅವರ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೇ (ಅವಿವಾಹಿತ, ಅವಿವಾಹಿತೆ, ವಿಧವೆ, ವಿಧುರ, ವಿಚ್ಛೇದಿತರು ಅಥವಾ ಕಾನೂನು ಬದ್ಧವಾಗಿ ಬೇರ್ಪಟ್ಟವರು) ಮತ್ತು ಅವರಿಗೆ ಜೈವಿಕ ಮಗು ಇರಲಿ ಅಥವಾ ಇಲ್ಲದಿರಲಿ, ಷರತ್ತು ಬದ್ಧವಾಗಿ ಮಗುವನ್ನು ಪೋಷಕತ್ವದಡಿಯಲ್ಲಿ ಪಡೆಯಬಹುದಾಗಿದೆ.
*ನಿರೀಕ್ಷಿತ ಸಾಕು ಪೋಷಕರ ವಯಸ್ಸಿನ ಮಾನದಂಡಗಳು:* 6 ವರ್ಷ ಮೇಲ್ಪಟ್ಟ ಮತ್ತು 12 ವರ್ಷ ವರ್ಷದೊಳಗಿನ ಮಕ್ಕಳಿಗಾಗಿ ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು – ದಂಪತಿಗಳ ಸಂಯೋಜಿತ ವಯಸ್ಸು 70 ವರ್ಷಗಳಾಗಿರಬೇಕು. ಏಕ ಪೋಷಕರಾಗಿದ್ದಲ್ಲಿ 35 ವರ್ಷಗಳಾಗಿರಬೇಕು. ಗರಿಷ್ಠ ವಯಸ್ಸು – ದಂಪತಿಗಳ ಸಂಯೋಜಿತ ವಯಸ್ಸು 110 ವರ್ಷಗಳು ಮತ್ತ ಏಕ ಪೋಷಕರಾಗಿದ್ದಲ್ಲಿ 55 ವರ್ಷಗಳು.
12 ವರ್ಷ ಮೇಲ್ಪಟ್ಟ ಮತ್ತು 18 ವರ್ಷ ವರ್ಷದೊಳಗಿನ ಮಕ್ಕಳಿಗಾಗಿ ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು – ದಂಪತಿಗಳ ಸಂಯೋಜಿತ ವಯಸ್ಸು 70 ವರ್ಷಗಳಾಗಿರಬೇಕು. ಏಕ ಪೋಷಕರಾಗಿದ್ದಲ್ಲಿ 35 ವರ್ಷಗಳಾಗಿರಬೇಕು. ಗರಿಷ್ಠ ವಯಸ್ಸು – ದಂಪತಿಗಳ ಸಂಯೋಜಿತ ವಯಸ್ಸು 115 ವರ್ಷಗಳು ಮತ್ತು ಏಕ ಪೋಷಕರಾಗಿದ್ದಲ್ಲಿ 60 ವರ್ಷಗಳು. ಕೌಟುಂಬಿಕ ಪ್ರೀತಿಯಿಂದ ವಂಚಿತವಾದ ಮಕ್ಕಳಿಗೆ ತಂದೆ-ತಾಯಿಯ ಪ್ರೀತಿಯಿಂದ ವಂಚಿತವಾದ ಮಕ್ಕಳಿಗೆ ಕೌಟುಂಬಿಕ ಪ್ರೀತಿಯನ್ನು ನೀಡಿ ಮಗುವಿಗೆ ಉತ್ತಮ ಭವಿಷ್ಯವನ್ನು ರೂಪಿಸುವ ಇಚ್ಛೆಯನ್ನು ಹೊಂದಿರುವ ಯಾವುದೇ ಪೋಷಕರು ಅರ್ಜಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಕೊಪ್ಪಳ ದೂ.ಸಂ: 08539-200755 ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ದೂ.ಸಂ: 08539-225030 ಕ್ಕೆ ಸಂಪರ್ಕಿಸಬಹುದಾಗಿದೆ ಅಥವಾ ಈ ವಿಳಾಸಕ್ಕೆ ಭೇಟಿ ನೀಡಿ ಸಂದರ್ಶಿಸಬಹುದು ಎಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

