400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಟಿಸಿ ಕೊಡದ ಶಾಲೆ ವಿರುದ್ಧ ಶಿಕ್ಷಣ ಇಲಾಖೆಯಿಂದ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Education Department files complaint at Kothanur police station against school for not providing TC to over 400 students

400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಟಿಸಿ ಕೊಡದ ಶಾಲೆ ವಿರುದ್ಧ ಶಿಕ್ಷಣ ಇಲಾಖೆಯಿಂದ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಜಾಹೀರಾತು

ನ್ಯಾಯಾಲಯ ಮತ್ತು ಸರ್ಕಾರದ ಆದೇಶ ಪಾಲಿಸದ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ ಶಿಕ್ಷಣ ಇಲಾಖೆ

ಬೆಂಗಳೂರು: ಮಾನ್ಯತೆ ರದ್ದುಪಡಿಸಿ ಶಾಲಾ ಶಿಕ್ಷಣ ಇಲಾಖೆ ಸ್ಪಷ್ಟವಾಗಿ ಆದೇಶ ಹೊರಡಿಸಿರುವ ಜೊತೆಗೆ ಹೈಕೋರ್ಟ್ ಆದೇಶ ಉಲ್ಲಂಘಿಸಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ – ಟಿಸಿ ವಿತರಿಸದೇ ಕಾನೂನು ಉಲ್ಲಂಘಿಸುತ್ತಿರುವ ಧಣಿಸಂದ್ರದ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ನ ಮುಖ್ಯ ಆಡಳಿತಾಧಿಕಾರಿ ಖಾಲಿದ್ ಮುಷ್ರಫ್ ವಿರುದ್ಧ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ ಸ್ವಾಮಿ ಅವರು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೈಕೋರ್ಟ್ ಆದೇಶ ಪರಿಪಾಲಿಸದ ಹಾಗೂ ಸರ್ಕಾರದ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಆಡಳಿತ ಮಂಡಳಿ ವಿರುದ್ಧ ಶಾಲಾ ಶಿಕ್ಷಣ ಇಲಾಖೆ ಪೊಲೀಸ್ ಮೊರೆ ಹೊಗಿದೆ.

ಬುಧವಾರ ಈ ಕುರಿತು ದೂರು ನೀಡಿ, ತಕ್ಷಣವೇ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ನ ದಾಖಲೆಗಳನ್ನು ಥಣಿಸಂದ್ರದ ಸರ್ಕಾರಿ ಫ್ರೌಢ ಶಾಲೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ಇದೇ ಜನವರಿಯಲ್ಲಿ ಶಾಲೆ ಆಡಳಿತಾಧಿಕಾರಿ ಖಾಲಿದ್ ಮುಷ್ರಫ್ ವಿರುದ್ಧ ಕೊತ್ತನೂರು ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿತ್ತು.

ಶಾಲೆಯ ಮಾನ್ಯತೆ ರದ್ದಾದ ಮತ್ತು ಶಿಕ್ಷಣ ಇಲಾಖೆಯ ಸೂಚನೆ ಮೇರೆಗೆ 350 ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಟಿಸಿ ವಿತರಿಸಿದ್ದು, ಉಳಿದವರಿಗೆ ವರ್ಗಾವಣೆ ಪತ್ರ ನೀಡದೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಡಳಿತಾಧಿಕಾರಿ ಮಾರಕವಾಗಿ ಪರಿಣಮಿಸಿದ್ದಾರೆ.

ಫ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕರು ಏಪ್ರಿಲ್ 10 ಮತ್ತು ಮೇ 15, 30 ರಂದು ಪೋಷಕರ ಸಭೆ ಆಯೋಜಿಸಿ ಶಾಲೆಯ ಮಾನ್ಯತೆ ಹಿಂಪಡೆದು ನೋಂದಣಿಯನ್ನು ರದ್ದುಪಡಿಸಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಇದೇ ಸಂದರ್ಭದಲ್ಲಿ ಸಂಬಂಧಪಟ್ಟ ಶೈಕ್ಷಣಿಕ ದಾಖಲೆಗಳನ್ನು ಸರ್ಕಾರಿ ಪ್ರೌಢಶಾಲೆಗೆ ಹಸ್ತಾಂತರಿಸುವಂತೆ ಆದೇಶಿಸಿದ್ದು, ನಿರ್ದೇಶನಗಳನ್ನು ಶಾಲಾ ಆಡಳಿತ ಮಂಡಳಿ ಈವರೆಗೆ ಪಾಲಿಸಿಲ್ಲ.

ಇಷ್ಟಾದರೂ ನಕಲಿ ಎಜುಕೇಷನ್ ಸೊಸೈಟಿ ಹೆಸರಿನಲ್ಲಿ 2026-2027 ನೇ ಸಾಲಿಗೆ ಜಾಮೀಯ ಮಹಮ್ಮದೀಯ ಮಂಸೂರ ಹೆಸರಿನಲ್ಲಿ ರಾಜ್ಯ ಪಠ್ಯಕ್ರಮ ಶಾಲೆ ಎಂದು ಜಾಹಿರಾತು ನೀಡಿ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಿರುವುದು ಕಂಡುಬಂದಿದೆ. ಆದರೆ ಮುಖ್ಯ ಆಡಳಿತಾಧಿಕಾರಿ ಖಾಲೀದ್ ಮುಷರಫ್ ಮತ್ತಿತರರ ಶಾಲಾ ಆಡಳಿತ ಮಂಡಳಿಯವರು ಸಹ ಶಾಲೆಯಲ್ಲಿ ಹಾಜರಿರದೇ ಸಂಪರ್ಕಕ್ಕೆ ಸಿಗದೆ ಸ್ಪಂದಿಸದೆ ಇರುವುದರಿಂದ ಇಲಾಖಾ ಆದೇಶಗಳನ್ನು ಅನುಷ್ಟಾನಗೊಳಸಲು ಸಾಧ್ಯವಾಗಿಲ್ಲ.

ನಕಲಿ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಖಾಲೀದ್ ಮುಷರಫ್ ವಿರುದ್ಧ ಈಗಾಗಲೇ ತಮ್ಮ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಹೀಗಾಗಿ ಸಾಮರ್ ಇಂಟರ್ ನ್ಯಾಷನಲ್ ಸ್ಕೂಲ್ ದಾಖಲೆಗಳನ್ನು ಥಣಿಸಂದ್ರದ ಸರ್ಕಾರಿ ಪ್ರೌಢಶಾಲೆಗೆ ಹಸ್ತಾಂತರಿಸಲು ತಮ್ಮ ಹಂತದಲ್ಲಿ ಕ್ರಮ ಕೈಗೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಯವರು ಕೋರಿದ್ದಾರೆ.
@@@

Total Views: 0
Share This Article