
Sri Mummadi Nirvana Swamigal of Sri Degula Math is a transgender.

ಶ್ರೀ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು ಲಿಂಗೈಕ್ಯ

ಕನಕಪುರ; ಕನಕಪುರ ಮಾತೃವಾತ್ಸಲ್ಯದ ಕರುಣಾಮಯಿಗಳು ಶ್ರೀ ದೇಗುಲ ಮಠದ ಹಿರಿಯ ಶ್ರೀಗಳಾಗಿದ್ದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು ಸೋಮವಾರ ಸಂಜೆ ಲಿಂಗೈಕ್ಯರಾಗಿದಾರೆ.
ಸರಳತೆಯ ಸಾಕರಮೂರ್ತಿ, ಸಹಸ್ರಾರು ವಿದ್ಯಾರ್ಥಿಗಳ ದಿವ್ಯ ಜ್ಯೋತಿ, ಕನಕಪುರದ ಶ್ರೀ ದೇಗುಲಮಠದ ಹಿರಿಯ ಶ್ರೀಗಳೂ, ಮಹಾ ಮಾತೃ ಹೃದಯಿಗಳೂ ಆದ ಪರಮಪೂಜ್ಯ ಡಾ. ಶ್ರೀ ಶ್ರೀ ಮುಮ್ಮಡಿ ನಿರ್ವಾಣಮಹಾಸ್ವಾಮಿಗಳವರು (84 ವರ್ಷ) ಅಂಗೈಕ್ಯರಾಗಿರುತ್ತಾರೆ. ಪೂಜ್ಯರ ಅಂತಿಮ ವಿಧಿ ವಿಧಾನ ಕಾರ್ಯಗಳು ಕ್ರಿಯೆಗಳು 23.06.2026 ಮಂಗಳವಾರ ಮಧ್ಯಾಹ್ನ 04:00 ಗಂಟೆಗೆ ನಾಡಿನ ಹರಗುರು ಚರಮೂರ್ತಿಗಳು ಸಮ್ಮುಖದಲ್ಲಿ ಕನಕಪುರ ದೇಗುಲ ಮಠದಲ್ಲಿ ನೆರವೇರಿಸಲಾಗುತ್ತದೆ.
ತುಮಕೂರಿನ ಶ್ರೀ ಸಿದ್ದಗಂಗಾ ಮಠ ಹಾಗೂ ಲಿಂಗೈಕ್ಯ ಡಾ.ಶ್ರೀ.ಶ್ರೀ.ಶಿವಕುಮಾರ ಮಹಾ ಸ್ವಾಮೀಜಿ ಅವರೊಂದಿಗೆ ಒಡನಾಟ ಹೊಂದಿದ್ದ ಶ್ರೀಗಳು ಶ್ರೀಮಠದ ತ್ರಿವಿಧ ದಾಸೋಹ ಪದ್ಧತಿಯನ್ನು ಕನಕಪುರ ದೇಗುಲ ಮಠದಲ್ಲೂ ಅಳವಡಿಸಿಕೊಂಡು ಸಾವಿರಾರು ವಿದ್ಯಾರ್ಥಿಗಳು ದಾರಿದೀಪವಾಗಿದ್ದರು.
ಶ್ರೀಗಳ ನಿಧನಕ್ಕೆ ಸಿದ್ದಗಂಗೆಯ ಶ್ರೀಸಿದ್ದಲಿಂಗಸ್ವಾಮೀಜಿ, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
14ನೆಯ ಶತಮಾನದ ಶ್ರೀ ಗೋಸಲ ಸಿದ್ದಲಿಂಗ ಯತಿಗಳ ಅನುಯಾಯಿಗಳು ಹಾಗೂ ನೂರೊಂದು ವಿರಕ್ತರಲ್ಲಿ ಒಬ್ಬರೂ ಆಗಿದ್ದ ಶ್ರೀ ನಿರ್ವಾಣ ಸ್ವಾಮಿಗಳಿಂದ ಸ್ಥಾಪಿತವಾದ ಕನಕಪುರದ ಶ್ರೀ ದೇಗುಲ ಮಠ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ. ಈ ಮಠದ 13ನೇ ಮಠಾಧೀಶರಾಗಿದ್ದ ಶ್ರೀಗಳು ಶ್ರೀಮಠವನ್ನು ಎಲ್ಲ ದೃಷ್ಟಿಯಿಂದಲೂ ಅಭಿವೃದ್ಧಿ ಪಡಿಸಿದರು. ಸಾತ್ವಿಕ ವ್ಯಕ್ತಿತ್ವ, ಮೃದುವಾದ ಮಾತು, ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಭಕ್ತ ಜನ ಸಮುದಾಯದ ಆರಾಧ್ಯ ಗುರುಗಳಾಗಿದ್ದರು. ಯಾವುದೇ ಭೇದಭಾವವಿಲ್ಲದೆ ಶ್ರೀಮಠವನ್ನು ಎಲ್ಲರ ಮಠವೆನ್ನುವಂತೆ ಬೆಳೆಸಿದರು.
1943 ಮೇ 20ರಂದು ಟಿ. ನರಸೀಪುರ ತಾಲೂಕು ಕುರುಬೂರಿನಲ್ಲಿ ಶ್ರೀಗಳು ಜನಿಸಿದರು. ಶ್ರೀ ಶಿವರುದ್ರಪ್ಪ ಎಂಬುದು ಅವರ ಪೂರ್ವಾಶ್ರಮದ ಹೆಸರು. ಕುರುಬೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಚಾಮರಾಜನಗರದಲ್ಲಿ ಪ್ರೌಢಶಿಕ್ಷಣ, ಮೈಸೂರಿನ ಶಾರದಾ ವಿಲಾಸ ಹಾಗೂ ಯುವರಾಜ ಕಾಲೇಜುಗಳಲ್ಲಿ ಬಿಎಸ್ಸಿ ಪಡೆದರು. 1968ರಲ್ಲಿ ಸೇವೆಗೂ ಸೇರಿದ್ದರು. 1970ರಲ್ಲಿ ಮರಿಯಾಲ ಶ್ರೀಮಠಕ್ಕೆ ಉತ್ತರಾಧಿಕಾರಿಗಳಾಗಿ ನೇಮಕವಾದುದರಿಂದ ಕೆಲಸಕ್ಕೆ ರಾಜೀನಾಮೆ ನೀಡಿ, ಧಾರ್ಮಿಕ ಕ್ಷೇತ್ರಕ್ಕೆ ಪ್ರವೇಶ ಮಾಡಿದರು. ನಂತರ ಕೆಲಕಾಲ ಮಳವಳ್ಳಿ ತಾಲೂಕು ನೆಲ್ಲಿಗೆರೆಯ ಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು. ಅನಂತರ ಕನಕಪುರ ಶ್ರೀ ದೇಗುಲ ಮಠದ ಉತ್ತರಾಧಿಕಾರಿಗಳಾದರು. ಅದೊಂದು ಯೋಗಾಯೋಗವೇ ಸರಿ.
ಶ್ರೀಗಳು ಐದು ದಶಕಗಳ ಕಾಲ ಕನಕಪುರದ ಶ್ರೀ ದೇಗುಲ ಮಠವನ್ನು ತ್ರಿವಿಧ ದಾಸೋಹ ಕೇಂದ್ರವಾಗಿ ಬೆಳೆಸಿದರು. ಶ್ರೀಮಠದ ಖುಷಿ ಭೂಮಿಯನ್ನು ನೀರಾವರಿಗೊಳಪಡಿಸಿದರು. ಮಠದ ಸಮುಚ್ಚಯವನ್ನು ವಿಸ್ತಾರವಾಗಿ ಬೆಳೆಸಿದರು. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷವಾಗಿ ನೆರವೇರುತ್ತಿದ್ದವು. ಪ್ರಸಾದನಿಲಯ, ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳು, ಅನಾಥಾಲಯಗಳು ಮಠದ ಆಶ್ರಯದಲ್ಲಿ ಆರಂಭವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದವು.
ಸಜ್ಜನಿಕೆಯ ವ್ಯಕ್ತಿತ್ವದಿಂದಾಗಿ ಎಲ್ಲರ ಪ್ರೀತಿ ಗೌರವಗಳಿಗೆ ಭಾಜನರಾಗಿದ್ದರು. ಆ ಭಾಗದ ಎಲ್ಲ ಮಠಗಳ ಬೆಳವಣಿಗೆಗೆ ಸದಾ ಸಹಕಾರ ನೀಡುತ್ತಿದ್ದರು. ಮಠಾಧೀಶರೆಲ್ಲರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಮಾತೃವಾತ್ಸಲ್ಯದ ಕರುಣಾಮಯಿಗಳಾಗಿದ್ದರು. ಶ್ರೀಮಠಕ್ಕೆ ಡಾ. ಶ್ರೀ ಚನ್ನಬಸವ ಸ್ವಾಮಿಗಳನ್ನು ಕಿರಿಯ ಶ್ರೀಗಳನ್ನಾಗಿ ಆಯ್ಕೆ ಮಾಡಿ, ಅವರಿಗೆ ಮಾರ್ಗದರ್ಶನ ನೀಡಿ ಶ್ರೀಮಠದ ಎಲ್ಲ ಚಟುವಟಿಕೆಗಳ ಮುಂದುವರಿಕೆಗೆ ಅವಕಾಶ ಕಲ್ಪಿಸಿದುದು ವಿಶೇಷವಾದುದು. ಡಾ. ಶ್ರೀ ಚನ್ನಬಸವಸ್ವಾಮಿಗಳು ಶ್ರೀಮಠವನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಶ್ರೀಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಕಳೆದ ವರ್ಷ ಮಳವಳ್ಳಿಯಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವ ಶ್ರೀಗಳ ಆಶಯದ ಫಲವಾಗಿಯೇ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಭಕ್ತ ಸಮುದಾಯದ ಗೌರವಾದರಗಳಿಗೆ ಪಾತ್ರರಾಗಿದ್ದರು. ಶ್ರೀಗಳು ಲಿಂಗೈಕರಾದದ್ದು ನಿಜಕ್ಕೂ ವಿಷಾದದ ಸಂಗತಿ. ಶ್ರೀಮಠದ ಎಲ್ಲ ಸೇವಾಕಾರ್ಯಗಳು ಎಂದಿನಂತೆ ಇಂದಿನ ಶ್ರೀಗಳ ಮಾರ್ಗದರ್ಶನದಲ್ಲಿ ಮುಂದುವರಿದುಕೊಂಡು ಹೋಗಲೆಂದು ಆಶಿಸುತ್ತಾ, ಶ್ರೀಗಳ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಸರ್ವರಿಗೂ ಅನುಗ್ರಹಿಸಲಿ ಎಂದು ಹಾರೈಸುತ್ತೇವೆ.
