ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಕಟ್ಟಡ ಕಾರ್ಮಿಕರನ್ನು ಕರೆದೊಯ್ಯುವ ಕುರಿತು ಸರ್ಕಾರಕ್ಕೆ ಮನವಿ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Appeal to the government to take construction workers to an environmental awareness program

 

ಕೊಪ್ಪಳ, ಜೂನ್ 22: ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಕಟ್ಟಡ ಕಾರ್ಮಿಕರನ್ನು ಕರೆದೊಯ್ಯುವ ಕುರಿತು ಸರ್ಕಾರಕ್ಕೆ ಮನವಿ

ಜಾಹೀರಾತು

ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘ (ರಿ) ಎಐಯುಟಿಯುಸಿ ಸಂಯೋಜಿತ ಸಂಘಟನೆಯ ವತಿಯಿಂದ ಇಂದು ಕೊಪ್ಪಳ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಮುಖಾಂತರ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಬೆಂಗಳೂರು ಅವರಿಗೆ ಮನವಿ ಸಲ್ಲಿಸಲಾಯಿತು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ಜೂನ್ 27, 2026 ರಂದು ಬೆಂಗಳೂರಿನಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 7.5 ಲಕ್ಷ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಹಾಗೂ ಶ್ಲಾಘನೀಯವಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 13,750 ಕಟ್ಟಡ ಕಾರ್ಮಿಕರನ್ನು ಭಾಗವಹಿಸಲು ಆಹ್ವಾನಿಸಿರುವುದಾಗಿ ತಿಳಿದುಬಂದಿದೆ.

ಆದರೆ ಕಟ್ಟಡ ಕಾರ್ಮಿಕರು ದಿನಗೂಲಿ ಆಧಾರಿತ ಜೀವನ ನಡೆಸುತ್ತಿರುವ ಕಾರಣ, ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಅವರ ಒಂದು ದಿನದ ಕೂಲಿ ನಷ್ಟವಾಗುವ ಸಾಧ್ಯತೆಯಿದೆ. ಕಾರ್ಮಿಕರಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಲಾಗಿದ್ದರೂ, ಅವರಿಗೆ ಆ ದಿನದ ಕೂಲಿಯನ್ನು ನೀಡುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ಕಟ್ಟಡ ಕಾರ್ಮಿಕರಿಗೆ ದಿನದ ಕೂಲಿಯನ್ನು ಸಹ ನೀಡಬೇಕು ಎಂದು ಸಂಘವು ಆಗ್ರಹಿಸಿದೆ.

ಅಲ್ಲದೆ, ಇದು ಸರ್ಕಾರದ ಕಾರ್ಯಕ್ರಮವಾಗಿರುವುದರಿಂದ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾಗಿರುವ ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯನ್ನು ಈ ಕಾರ್ಯಕ್ರಮಕ್ಕಾಗಿ ಬಳಸಬಾರದು ಎಂದು ಸಂಘದ ಮುಖಂಡರು ಒತ್ತಾಯಿಸಿದರು.

ಪ್ರಮುಖ ಬೇಡಿಕೆಗಳು

*ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹಮ್ಮಿಕೊಂಡಿರುವ ಸಸಿ ನೆಡುವ ಕಾರ್ಯಕ್ರಮಕ್ಕೆ 13,750 ಕಟ್ಟಡ ಕಾರ್ಮಿಕರನ್ನು ಕರೆದೊಯ್ಯುವ ಯಾವುದೇ ವೆಚ್ಚಕ್ಕಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಬಳಸಬಾರದು.

*ಕಾರ್ಯಕ್ರಮದಲ್ಲಿ ಭಾಗವಹಿಸುವ ಕಟ್ಟಡ ಕಾರ್ಮಿಕರಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ಪ್ರಯಾಣ ವ್ಯವಸ್ಥೆಯ ಜೊತೆಗೆ ಆ ದಿನದ ಪೂರ್ಣ ಕೂಲಿಯನ್ನು ನೀಡಬೇಕು. ಈ ವೆಚ್ಚವನ್ನು ಸಹ ಸರ್ಕಾರವೇ ಭರಿಸಬೇಕು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ, ಜಿಲ್ಲಾ ಮುಖಂಡರಾದ ಕುಮಾರ ದೊಡ್ಡಗೌಡರ್, ನಾಗರಾಜ್ ಹುಲಿಗಿ, ಎಲ್ಲಪ್ಪ ಬೆಟಗೇರಿ, ಆಂಜನೇಯ, ಶರೀಫ್ ಸಾಬ್, ಮಲ್ಲಪ್ಪ ಮಾದನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Total Views: 0
Share This Article