
45-day summer camp concludes: Children need moral and skill education — Sri Sangameshwara Swamiji

45 ದಿನಗಳ ಬೇಸಿಗೆ ಶಿಬಿರ ಸಮಾರೋಪ: ಮಕ್ಕಳಿಗೆ ಸಂಸ್ಕಾರ ಹಾಗೂ ಕೌಶಲ್ಯ ಶಿಕ್ಷಣ ಅಗತ್ಯ — ಶ್ರೀ ಸಂಗಮೇಶ್ವರ ಸ್ವಾಮೀಜಿ

ಗಂಗಾವತಿ: ಕಲಬುರಗಿಯ ಜ್ಞಾನ ಶಾರದೆ ಅಕಾಡೆಮಿ, ಹಾನಗಲ್ಲಿನ ಶ್ರೀ ಗುರು ಕುಮಾರ ವೇದ ಸಂಸ್ಕೃತ ಪಾಠಶಾಲೆ, ಗಂಗಾವತಿಯ ಶ್ರೀ ಗುರು ಕುಮಾರೇಶ್ವರ ಗುರುಕುಲಂ ಹಾಗೂ ಕನ್ನಡ ಜಾಗೃತಿ ಸಮಿತಿಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ೪೫ ದಿನಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪರಮಪೂಜ್ಯ ಶ್ರೀ ಸಂಗಮೇಶ್ವರ ಸ್ವಾಮೀಜಿ ಅಪ್ಪಾಜಿ ಮಠ, ಶ್ರೀ ಕ್ಷೇತ್ರ ಗಡ್ಡಿ ಅವರು, ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಕೇವಲ ಪಾಠಪುಸ್ತಕದ ಜ್ಞಾನವಷ್ಟೇ ಅಲ್ಲದೆ ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಜೀವನ ಕೌಶಲ್ಯಗಳ ಶಿಕ್ಷಣವೂ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ಶಿಬಿರದಲ್ಲಿ ೧ರಿಂದ ೪ನೇ ತರಗತಿಯ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ತಜ್ಞ ಶಿಕ್ಷಕರಿಂದ ವಿವಿಧ ವಿಷಯಗಳಲ್ಲಿ ವಿಶೇಷ ತರಬೇತಿ ನೀಡಲಾಯಿತು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಶುದ್ಧ ಬರವಣಿಗೆ, ಸರಳ ಹಾಗೂ ಪರಿಣಾಮಕಾರಿ ಸಂವಹನ ಕೌಶಲ್ಯ, ಇಂಗ್ಲಿಷ್ ಮಾತನಾಡುವ ತರಬೇತಿ, ಅಭಂಗ, ವೇದ ಪಠಣ ಹಾಗೂ ಸಂಸ್ಕೃತ ಕಥೆಗಳ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯದ ಅರಿವು ಮೂಡಿಸಲಾಯಿತು.
ಮಕ್ಕಳು ಶಿಬಿರದಲ್ಲಿ ಕಲಿತ ಕೌಶಲ್ಯಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಗಣ್ಯರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶರಣಬಸವ ದೇವರು ಅರಳಹಳ್ಳಿ ಮಠ, ರೇವಣಸಿದ್ದಯ್ಯ ತಾತನವರು ಅರಳಹಳ್ಳಿ ಮಠ, ಸಂಸ್ಕೃತ ಶಿಕ್ಷಕಿ ಶ್ರೀಮತಿ ಪಂಪಾದೇವಿ, ಆಡಳಿತಾಧಿಕಾರಿ ಶೃತಿ ತಾವರಗೇರಾ, ಅಶ್ವಿನಿ, ಮೇಘ, ಶರಣಮ್ಮ, ದೇವರಾಜ್ ಪತ್ರಕರ್ತರು, ಪಾಲಕರು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.
