ಹಲವು ಬೇಡಿಕೆಗಳ ಈಡೇರಿಕೆಗೆ ಬ್ರಾಹ್ಮಣ ಮಹಾಸಭಾ ಮನವಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Brahmin Mahasabha appeals for fulfillment of many demands




ಹಲವು ಬೇಡಿಕೆಗಳ ಈಡೇರಿಕೆಗೆ ಬ್ರಾಹ್ಮಣ ಮಹಾಸಭಾ ಮನವಿ

ಜಾಹೀರಾತು

ಕೊಪ್ಪಳ: ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಮೇಲಿದ್ದ ಜನಿವಾರ ತಗಿಸಿ ಕತ್ತರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಘಟನೆ ನಡೆದ ಎರಡು ಶಿಕ್ಷಣ ಸಂಸ್ಥೆಗಳ ಅನುಮತಿ ರದ್ದು ಮಾಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕ ಆಗ್ರಹಿಸಿದೆ.

ಘಟಕದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿ ‘ಬ್ರಾಹ್ಮಣ ಸಮಾಜದ ಜನರ ಭಾವನೆಗಳಿಗೆ ಧಕ್ಕೆ ತಂದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾಕೇಂದ್ರದಲ್ಲಿ ಬ್ರಾಹ್ಮಣ ಸಮಾಜಕ್ಕೆ ಪ್ರತ್ಯೇಕ ಸ್ಮಶಾನದ ಜಾಗ ಮಂಜೂರು ಮಾಡಬೇಕು. ಗವಿಸಿದ್ಧೇಶ್ವರ ಮಠದ ಹಿಂಭಾಗದಲ್ಲಿ ಮೃತದೇಹ ಸುಡುವ ಪದ್ಧತಿಯಿರುವ ಸಮಾಜದವರ ಅಂತ್ಯಕ್ರಿಯೆ ನಡೆಯುತ್ತಿದೆ. ಇದರಿಂದಾಗಿ ಬ್ರಾಹ್ಮಣ ಸಮುದಾಯದ ವಿಧಿವಿಧಾನದಂತೆ ಅಂತಿಮ ಸಂಸ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲ. ಹಲವು ಬಾರಿ ಮೂರ್ನಾಲ್ಕು ಅಂತ್ಯಕ್ರಿಯೆಗಳು ನಡೆದಾಗ ಸರತಿಯಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾದ ಉದಾಹರಣೆಗಳೂ ಇವೆ. ಆದ್ದರಿಂದ ಆಸಕ್ತಿ ವಹಿಸಿ ನಮ್ಮ ಸಮುದಾಯದ ಸ್ಮಶಾನಕ್ಕೆ  ಒಂದು ಎಕರೆ ಭೂಮಿ ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.

ಈಗಿರುವ ಸ್ಮಶಾನದ ಭೂಮಿಯ ಅಭಿವೃದ್ಧಿಗೆ ಬೇಕಾದ ಕ್ರಮ ವಹಿಸಲಾಗುವುದು. ಸಮುದಾಯದ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಮಹಾಸಭಾದ ಜಿಲ್ಲಾ ಚುನಾಯಿತಿ ಪ್ರತಿನಿಧಿ ಗುರುರಾಜ ಎನ್‌. ಜೋಶಿ, ರಾಘವೇಂದ್ರಸ್ವಾಮಿಗಳ ಇಲ್ಲಿನ ಮಠದ ವ್ಯವಸ್ಥಾಪಕ ಜಗನ್ನಾಥಚಾರ್ಯ ಹುನಗುಂದ, ಸಮುದಾಯದ ಮುಖಂಡರಾದ ಕೆ.ಜಿ. ಕುಲಕರ್ಣಿ, ವೇಣುಗೋಪಾಲ ಆಚಾರ್‌ ಜಹಗೀರದಾರ್, ರಾಜೇಂದ್ರ ಆಚಾರ್ ಬಿಸಿರಳ್ಳಿ, ಸುಶೀಲೇಂದ್ರ ದೇಶಪಾಂಡೆ, ವಿಶ್ವನಾಥ್ ದೀಕ್ಷಿತ್, ಶ್ರೀನಿವಾಸ ಜೋಶಿ, ರವಿ ಪುರೋಹಿತ್, ಪ್ರಲ್ಹಾದ ಬನ್ನಿಗೋಳ, ಆನಂದ್, ರಾಮಮೂರ್ತಿ ಸಿದ್ಧಾಂತಿ, ಶ್ರೀನಾಥ್ ಆಯಾಚಿತ್, ಹರಿಸರ್ವೋತ್ತಮಾಚಾರ್, ಮೈಲಾರಾವ್ ಕುಲಕರ್ಣಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Total Views: 0
Share This Article