
PDS rice transport, creation of documents suspicious, demand for verification

ಪಿಡಿಎಸ್ ಅಕ್ಕಿ ಸಾಗಣೆ ,ದಾಖಲೆಗಳ ಸೃಷ್ಟಿ ಅನುಮಾನ, ಪರಿಶೀಲನೆಗೆ ಆಗ್ರಹ

ಗಂಗಾವತಿ, ಮಾ.28:ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಅಕ್ಕಿ ಸಾಗಣೆ ಪ್ರಕರಣವು ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಪಿಡಿಎಸ್ ಅಕ್ಕಿ ಅಕ್ರಮ ಸಾಗಣೆ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಮಾನ್ವಿ ನಗರದ ವೀರಭದ್ರೇಶ್ವರ ಇಂಡಸ್ಟ್ರೀಸ್ ಸಂಸ್ಥೆಯಿಂದ ಕುಕನಪಳ್ಳಿಯ ಮಹಾಮಾಯ ಟ್ರೇಡರ್ಸ್ಗೆ ಅಕ್ಕಿ ಸಾಗಣೆ ಮಾಡಲಾಗಿರುವುದು ದಾಖಲೆಗಳಿಂದ ತಿಳಿದುಬಂದಿದೆ.
ಈ ಸಾಗಣೆಗಾಗಿ APMC ಅನುಮತಿ ಪತ್ರ, e-Way Bill ಸೇರಿದಂತೆ ಅಗತ್ಯ ದಾಖಲೆಗಳು ಸಿದ್ಧಪಡಿಸಿರುವುದು ಗಮನಾರ್ಹವಾಗಿದೆ.
ದಾಖಲೆಗಳ ಪ್ರಕಾರ, ಸುಮಾರು 350 ಕ್ವಿಂಟಲ್ ಅಕ್ಕಿ (₹9.80 ಲಕ್ಷ ಮೌಲ್ಯ) KA16D0922 ವಾಹನದ ಮೂಲಕ ಸಾಗಣೆ ಮಾಡಲಾಗಿದೆ. e-Way Bill ಹಾಗೂ APMC ಪರವಾನಗಿ ದಾಖಲೆಗಳು ಪರಸ್ಪರ ಹೊಂದಾಣಿಕೆ ಹೊಂದಿರುವುದರಿಂದ ಸಾಗಣೆ ಪ್ರಾಥಮಿಕವಾಗಿ ಕಾನೂನುಬದ್ಧವಾಗಿದೆ ಎಂದು ಕಂಡುಬಂದಿದೆ.
ಆದರೆ, Food Corporation of India (FCI) ನಿಂದ ಪಡೆದಿರುವ ಬಿಡುಗಡೆ ಆದೇಶ (Release Order) ನಲ್ಲಿ ಕೇವಲ 9 ಮೆಟ್ರಿಕ್ ಟನ್ (90 ಕ್ವಿಂಟಲ್) ಅಕ್ಕಿ ಮಾತ್ರ ಖರೀದಿಸಿರುವ ದಾಖಲೆ ಲಭ್ಯವಿದ್ದು, ಸಾಗಣೆ ಮಾಡಿರುವ ಒಟ್ಟು ಪ್ರಮಾಣದೊಂದಿಗೆ ವ್ಯತ್ಯಾಸ ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ, ಅಕ್ಕಿಯ ಮೂಲದ ಬಗ್ಗೆ ಅನುಮಾನಗಳು ಮೂಡಿದ್ದು, ಪಿಡಿಎಸ್ ಅಕ್ಕಿ ಅಕ್ರಮವಾಗಿ ಮಿಶ್ರಣ ಮಾಡಿ ಸಾಗಣೆ ಮಾಡಿರುವ ಸಾಧ್ಯತೆ ಕುರಿತು ಸಾರ್ವಜನಿಕರು ಹಾಗೂ ಸಂಘಟನೆಯ ಮುಖಂಡರು ಪ್ರಶ್ನಿಸಿದ್ದಾರೆ.
ಸಂಘಟನೆ ಮುಖಂಡರು ಮಾತನಾಡಿ,
“ಸರ್ಕಾರದ ಪಿಡಿಎಸ್ ಅಕ್ಕಿ ಅಕ್ರಮವಾಗಿ ಖಾಸಗಿ ಮಿಲ್ಗಳಿಗೆ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಹಲವು ಬಾರಿ ದೂರುಗಳಿವೆ.
ಈ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಸತ್ಯಾಸತ್ಯತೆ ತಿಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
