
ತೋಟಗಾರಿಕೆಯಲ್ಲಿ ಕೊಪ್ಪಳ ಜಿಲ್ಲೆ ಅತ್ಯಮೂಲ್ಯ ಬದಲಾವಣೆ ಕಾಣುತ್ತಿದೆ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ
Exhibition and sale fair of various fruits, honey, mushrooms launched in Koppal district

ಕೊಪ್ಪಳ ಫೆಬ್ರುವರಿ 12 (ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕದ ಹಣ್ಣಿನ ಕಣಜ ಎಂದೇ ಖ್ಯಾತಿ ಪಡೆದ ಕೊಪ್ಪಳ ಜಿಲ್ಲೆಯು ತೋಟಗಾರಿಕೆ ಕ್ಷೇತ್ರದಲ್ಲಿ ಅತ್ಯಮೂಲ್ಯ ಬದಲಾವಣೆಯನ್ನು ಕಾಣುತ್ತಿದೆ ಎಂದು ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಯಮಿತದ ಅಧ್ಯಕ್ಷರು ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಗುರುವಾರ ಕೊಪ್ಪಳ ನಗರದ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ, ರೈತರಿಂದ ಖರೀದಿಸಿ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಶಿವರಾತ್ರಿ ಪ್ರಯುಕ್ತ ಫೆಬ್ರವರಿ 12 ರಿಂದ ಫೆ. 16 ರವರೆಗೆ ಏರ್ಪಡಿಸಲಾಗಿದ್ದ “ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯ, ಹಲಸು, ಜೇನು ಹಾಗೂ ಅಣಬೆ’’ ಪ್ರದರ್ಶನ ಮತ್ತು ಮಾರಾಟ ಮೇಳ-2026ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಜಿಲ್ಲೆಯು ತೋಟಗಾರಿಕೆ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮುಂದೆ ಬರುತ್ತಿದ್ದು, ಇದಕ್ಕೆ ಕಾರಣ ರೈತರು, ವಾಣಿಜ್ಯ ಬೆಳೆಗಳಾದ ಮಾವಿನ ಹಣ್ಣು, ಬಾಳೆ, ದ್ರಾಕ್ಷೀ, ಪೇರಲ, ಪಪ್ಪಾಯ ಸೇರಿದಂತೆ ವಿವಿಧ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ ಹಾಗೂ ಅಣಬೆ ಮತ್ತು ಜೇನು ಕೃಷಿಯಲ್ಲಿಯೂ ಹೆಚ್ಚು ಆಸಕ್ತಿ ತೋರುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಈ ದಿಶೆಯಲ್ಲಿ ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಮಾರುಕಟ್ಟೆ ಒದಗಿಸುವ ಕೆಲಸ ಆಗುತ್ತಿದೆ. ವಿಶೇಷವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿ ತೋಟಗಾರಿಕಾ ಬೆಳೆಗಳಿಗೆ ಹೆಚ್ಚು ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದಾರೆ. ಹಾಗಾಗಿ ಬೇರೆ ಬೇರೆ ಭಾಗಗಳಲ್ಲಿ ಬೆಳೆಯಲಾಗುತ್ತಿರುವ ವಿವಿಧ ತಳಿಯ ಹಣ್ಣುಗಳನ್ನು ಪ್ರಸ್ತುತ ನಮ್ಮ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ ಎಂದರು.

ನಮ್ಮ ರಾಜ್ಯ ಸರ್ಕಾರದಿಂದ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ತೋಟಗಾರಿಕೆ ಟೆಕ್ನಾಲಜಿ ಪಾರ್ಕ್ ಮಂಜೂರಾಗಿದ್ದು, ಇದರಿಂದ ನಮ್ಮ ಜಿಲ್ಲೆಯ ಬೆಳೆಗಳು ಮತ್ತು ಅವುಗಳ ಉತ್ಪನ್ನಗಳನ್ನು ದೇಶ, ವಿದೇಶಗಳಿಗೆ ಮಾರಾಟ ಮಾಡಲು ಎಲ್ಲಾ ರೈತರಿಗೆ ತುಂಬಾ ಅನುಕೂಲವಾಗಲಿದೆ. ಇಂತಹ ಮೇಳಗಳನ್ನು ಹಮ್ಮಿಕೊಳ್ಳುವ ಮೂಲಕ ತೋಟಗಾರಿಕೆಯತ್ತ ರೈತರ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿ, ತೋಟಗಾರಿಕೆ ಬೆಳೆಗಾರರಿಗೆ ಉತ್ತೇಜನ ನೀಡುವ ಕೆಲಸವಾಗುತ್ತಿದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೆಶಕರಾದ ಕೃಷ್ಣ ಉಕ್ಕುಂದ ಅವರು ಮಾತನಾಡಿ, ಶಿವರಾತ್ರಿ ಪ್ರಯುಕ್ತ 9ನೇ ವರ್ಷದ ಹಣ್ಣು, ಜೇನು ಮತ್ತು ಅಣಬೆ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಫೆಬ್ರುವರಿ 16 ರವರೆಗೆ ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆಯ ಎಲ್ಲಾ ರೈತರು ಬೆಳೆದ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ವಿವಿಧ ಜೇನು ಉತ್ಪನ್ನಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ. ಈ ವರ್ಷ ಅಣಬೆ ಮೇಳವನ್ನು ವಿಶೇಷವಾಗಿ ಮಾಡುತ್ತಿದ್ದು ಇದರ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜಗತ್ತಿನ ದುಬಾರಿ ಅಣಬೆ ಯರ್ಸಗುಂಬ ಅಣಬೆ ಇದರ ಬೆಲೆಯು ಒಂದು ಕೆ.ಜಿ.ಗೆ 15 ಲಕ್ಷ ರೂ. ಆಗಿದ್ದು, ಇದನ್ನು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಅಣಬೆಯನ್ನು ಭಾರತ ದೇಶದ ಹಿಮಾಚಲ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ ಹಾಗೂ ಕೊಪ್ಪಳ ತಾಲ್ಲೂಕು ಅಧ್ಯಕ್ಷರಾದ ಬಾಲಚಂದ್ರನ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಮಂಜುನಾಥ ಲಿಂಗಣ್ಣವರ, ಸಂತೋಷ ಧರಣ, ದುರ್ಗಾಪ್ರಸಾದ, ಲಿಂಗನಗೌಡ, ಶಿವಯೋಗಪ್ಪ ಹಾಗೂ ಯೋಗೆಶ್ವರ ಸೇರಿದಂತೆ ಇತರೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ರೈತ ಉತ್ಪಾದಕರ ಸಂಸ್ಥೆ, ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಗಳು ಪ್ರತಿನಿಧಿಗಳು, ರೈತರು, ತೋಟಗಾರಿಕೆ ಬೆಳೆಗಾರರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
*ಕೈಪಿಡಿ ಬಿಡುಗಡೆ:* ಇದೇ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯಿಂದ ಸಿದ್ದಪಡಿಸಲಾದ ಅಣಬೆ ಕುರಿತು ಸಮಗ್ರ ಮಾಹಿತಿಯನ್ನೊಳಗೊಂಡ ಕಿರು ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
*ಜಗತ್ತಿನ ದುಬಾರಿ ಅಣಬೆ “ಯರ್ಸಗುಂಬ ಅಣಬೆ” ಪ್ರದರ್ಶನ:* ಈ ಮೇಳದ ಪ್ರದರ್ಶನದಲ್ಲಿ ಹಿಮಾಲಯದಲ್ಲಿ ಬೆಳೆಯುವ ಜಗತ್ತಿನ ಅತ್ಯಂತ ದುಬಾರಿ ಅಣಬೆ, ಪ್ರತಿ ಕೆ.ಜಿ.ಗೆ ರೂ. 15 ಲಕ್ಷ ಮೌಲ್ಯದ “ಯರ್ಸಗುಂಬ ಅಣಬೆ”ಯನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಇದು ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಇದನ್ನು ನೋಡಲು ಜನರು ಅತ್ಯಂತ ಉತ್ಸಾಹದಿಂದ ಈ ಮೇಳಕ್ಕೆ ಪಾಲ್ಗೊಳ್ಳುತ್ತಿದ್ದಾರೆ.
ಇದರೊಂದಿಗೆ ವಿವಿಧ ವಿದೇಶಿ ಹಣ್ಣಿನ ತಳಿಯ ಹಣ್ಣುಗಳು, ಸ್ವದೇಶಿ ಹಾಗೂ ಜಿಲ್ಲೆಯ ರೈತರು ಬೆಳೆದ ಪ್ಪಪಾಯ, ದ್ರಾಕ್ಷಿ, ಕಲ್ಲಂಗಡಿ, ದಾಳಿಂಬೆ, ಪರಲ, ಅಂಜೂರ, ಪಪ್ಪಾಯ, ಹಲಸು, ಬಾಳೆ, ಸಪೋಟ ಹಾಗೂ ಅಣಬೆ, ಜೇನು ಅಲ್ಲದೇ ಅದಕ್ಕೆ ಪೂರಕವಾದ ಜೇನಿನ ಉಪ ಉತ್ಪನ್ನಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳು ಸಹ ಪ್ರದರ್ಶನದಲ್ಲಿ ಇಡಲಾಗಿದೆ. 5 ದಿನಗಳ ಕಾಲ ಕೊಪ್ಪಳ ನಗರದ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ನಡೆಯುವ ಕೊಪ್ಪಳ ಜಿಲ್ಲೆಯ ಹಣ್ಣುಗಳು, ಜೇನು ಮತ್ತು ಅಣಬೆ ಮೇಳದಲ್ಲಿ ಸಾರ್ವಜನಿಕರು ಪಾಲ್ಗೊಂಡು ತಾಜಾ ಹಣ್ಣುಗಳನ್ನು ರೈತರಿಂದ ನೇರವಾಗಿ ಖರಿದೀಸಿ, ರೈತರನ್ನು ಪ್ರತ್ಸಾಹಿಸಬೇಂಕೆದು ಎಲ್ಲಾ ಗ್ರಾಹಕರಲ್ಲಿ ಕೊಪ್ಪಳ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೆಶಕರು ಮನವಿ ಮಾಡಿದ್ದಾರೆ.
****




