
ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಚಾಲನೆ

Touch leprosy awareness campaign launched

ಕೊಪ್ಪಳ ಜನವರಿ 31 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಹಾಗೂ ಮಹಾತ್ಮ ಗಾಂಧಿಜಿಯವರ ಪುಣ್ಯಸ್ಮರಣೆಯ ಅಂಗವಾಗಿ ಶುಕ್ರವಾರದಂದು ಮಹಾತ್ಮ ಗಾಂಧಿಜಿಯವರ ಸೇವಾ ಮತ್ತು ಶ್ರಮದ ಜ್ಞಾಪಕಾರ್ಥವಾಗಿ ವಿಶ್ವ ಕುಷ್ಠರೋಗ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಕೊಪ್ಪಳ ಜಿಲ್ಲಾಧಿಕಾರಿಗಳ ಮುಖಾಂತರ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕುಷ್ಠರೋಗವು ಮೈಕ್ರೋಬ್ಯಾಕ್ಟೀಯಂ ಲೆಪ್ರೆ ಎಂಬ ಬ್ಯಾಕ್ಟೀರಿಯ ರೋಗಾಣುವಿನಿಂದ ಖಾಯಿಲೆಯಿರುವ ವ್ಯಕ್ತಿಯು ಕೆಮ್ಮಿದಾಗ ಮತ್ತು ಸೀನಿದಾಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ವ್ಯಕ್ತಿಯ ರೋಗ ನಿರೋಧಕ ಶಕ್ತಿಯ ಆಧಾರದ ಮೇಲೆ 2 ರಿಂದ 20 ವರ್ಷಗಳ ಕಾಲಾವಧಿ ಸಮಯ ತೆಗೆದುಕೊಳ್ಳಬಹುದು. ಕುಷ್ಠರೋಗವು ಮುಖ್ಯವಾಗಿ ಚರ್ಮ ಮತ್ತು ನರಗಳ ಮೇಲೆ ಪ್ರಭಾವ ಬೀರುವ ಖಾಯಿಲೆ ಆಗಿರುತ್ತದೆ. ಚರ್ಮದ ಮೇಲೆ ತಿಳಿ-ಬಿಳಿ ತಾಮ್ರ ವರ್ಣದ ಮುಖ್ಯವಾಗಿ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಕಂಡುಬರುತ್ತದೆ. ಈ ಮಚ್ಚೆಗಳಲ್ಲಿ ಬೆವರುವಿಕೆ ಮತ್ತು ಕಾಲಕ್ರಮೇಣ ಕೂದಲು ಬೆಳೆಯದೇ ಇರುವುದು ಗಮನಾರ್ಹವಾಗಿರುತ್ತದೆ. ನರಗಳಲ್ಲಿ ಉರಿಯೂತ ಉಂಟಾಗಿ ನರಗಳು ದೌರ್ಬಲ್ಯಗೊಂಡು ಕ್ರಮೇಣ ಕೈ ಕಾಲುಗಳಲ್ಲಿ ಅಂಗವೈಕಲ್ಯವನ್ನುಂಟು ಮಾಡಬಹುದು. ಕುಷ್ಠರೋಗದಲ್ಲಿ ದೇಹದಲ್ಲಿ ಕಾಣಿಸಿಕೊಳ್ಳುವ ಮಚ್ಚೆಗಳ ಸಂಖ್ಯೆ ಮತ್ತು ನರಗಳ ಮೇಲಿನ ಪ್ರಭಾವದ ಆಧಾರದ ಮೇರೆಗೆ ಪಿ.ಬಿ ಮತ್ತು ಎಂ.ಬಿ ಎಂದು ಎರಡು ವಿಧಗಳಿರುತ್ತವೆ. ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಕುಷ್ಟರೋಗಕ್ಕೆ ಪರೀಕ್ಷೆ ಮತ್ತು ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿರುತ್ತದೆ. ಪಿ.ಬಿ ಖಾಯಿಲೆಗೆ ಆರು ತಿಂಗಳಿನವರೆಗೆ ಮತ್ತು ಎಂ.ಬಿ ಖಾಯಿಲೆಗೆ ಒಂದು ವರ್ಷದ ಅವಧಿಯವರೆಗೂ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅಂಗವೈಕಲ್ಯ ಹೊಂದಿದ ರೋಗಿಗಳಿಗೆ ಮರು ಚಿಕಿತ್ಸಾ ಶಸ್ತ್ರಚಿಕಿತ್ಸೆಯನ್ನು (ಆರ್.ಸಿ,) ಸಂಪೂರ್ಣ ಉಚಿತವಾಗಿ ಮಾಡಲಾಗುತ್ತದೆ.
ಕೊಪ್ಪಳ ಜಿಲ್ಲೆಯಲ್ಲಿನ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ಏಪ್ರೀಲ್-2025 ರಿಂದ ಡಿಸೆಂಬರ್-2025 ರವರೆಗೆ ಒಟ್ಟು 88 ಹೊಸ ಪ್ರಕರಣಗಳು ಪತ್ತೆಹಚ್ಚಲಾಗಿದ್ದು, ಎಲ್ಲರಿಗೂ ಎಂ.ಡಿ.ಟಿ ಚಿಕಿತ್ಸೆಯನ್ನು ನೀಡಲಾಗಿರುತ್ತದೆ. ವಿಶೇಷವಾಗಿ 2025ರ ನವೆಂಬರ್ 24 ರಿಂದ 2025ರ ಡಿಸೆಂಬರ್ 19 ರವರೆಗೆ ಜಿಲ್ಲೆಯಲ್ಲಿ “ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ” ಹಮ್ಮಿಕೊಂಡು ಒಟ್ಟು 283 ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ ಒಟ್ಟು 20 ಪ್ರಕರಣಗಳನ್ನು ಪತ್ತೆ ಹಚ್ಚಿ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿರುತ್ತದೆ.
ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು, ಪ್ರತಿಜ್ಞಾವಿಧಿಯನ್ನು ಬೋಧಿಸಿ ಈ ಸಾಲಿನ ಘೋಷ ವಾಕ್ಯ: “ತಾರತಮ್ಯವನ್ನು ಕೊನೆಗೊಳಿಸುವುದು, ಘನತೆಯನ್ನು ಕಾಪಾಡುವುದು” ಎಂಬ ಘೋಷವಾಕ್ಯದೊಂದಿಗೆ ಭೀತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜ್ ಟಿ., ಜಿಲ್ಲಾ ಕ್ಷಯರೋಗ ಮತ್ತು ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಎ.ಶಶಿಧರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.




