
ಫೆ.5 ರಿಂದ 7 ರವರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರಿಂದ ಕೊಪ್ಪಳ ಜಿಲ್ಲಾ ಪ್ರವಾಸ

Dr. Nagalakshmi Chaudhary, Chairperson of the State Women's Commission, will visit Koppal district from Feb. 5 to 7.

ಕೊಪ್ಪಳ ಜನವರಿ 31, (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಫೆಬ್ರವರಿ 5 ರಿಂದ 7 ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಅಧ್ಯಕ್ಷರು ಫೆ.5 ರಂದು ಬೆಳಿಗ್ಗೆ 6.30 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು. ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಪಿಯು ಹಾಗೂ ಪದವಿ ಕಾಲೇಜು ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸುವರು. ಮಧ್ಯಾಹ್ನ 2 ಗಂಟೆಗೆ ಕೊಪ್ಪಳದ ವಾರ್ಡ್ ನಂ.28, ಸಿದ್ದೇಶ್ವರ ನಗರದ ಅಲೆಮಾರಿ ಕಾಲೋನಿಗೆ ಭೇಟಿ ನೀಡಿ, ಅಲೆಮಾರಿ ಸಮುದಾಯದ ಮಹಿಳೆಯರ ಸಮಸ್ಯೆಗಳನ್ನು ಆಲಿಸುವರು. ಮಧ್ಯಾಹ್ನ 3 ಗಂಟೆಗೆ ಕೊಪ್ಪಳ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ದೇವದಾಸಿ ಮಹಿಳೆಯರೊಂದಿಗೆ ಸಂವಾದ ನಡೆಸುವರು. ಸಂಜೆ 6 ಗಂಟೆಗೆ ಕೊಪ್ಪಳದ ಅಲ್ಪಸಂಖ್ಯಾತ ಇಲಾಖೆಯ ಪೋಸ್ಟ್ ಮೆಟ್ರಿಕ್ ಬಾಲಕಿಯರ ವಸತಿನಿಲಯಕ್ಕೆ ಭೇಟಿ ನೀಡುವರು. ಅಂದು ರಾತ್ರಿ ಕೊಪ್ಪಳದಲ್ಲಿಯೇ ವಾಸ್ತವ್ಯ ಮಾಡುವರು.
ಫೆ.6 ರಂದು ಬೆಳಿಗ್ಗೆ 10 ಗಂಟೆಗೆ ಅಧ್ಯಕ್ಷರು ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆ ಹಾಗೂ ಕೊಪ್ಪಳ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವರು. ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿರುವ POSH ಅಧಿನಿಯಮ 2013ರ ತರಬೇತಿ ಹಾಗೂ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಧ್ಯಾಹ್ನ 12 ಗಂಟೆಗೆ ಕೊಪ್ಪಳದಿಂದ ನಿರ್ಗಮಿಸಿ 1.15 ಗಂಟೆಗೆ ಕುಷ್ಟಗಿಗೆ ತೆರಳಿ, ಕುಷ್ಟಗಿ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡುವರು. ಮಧ್ಯಾಹ್ನ 3 ಗಂಟೆಗೆ ಕುಷ್ಟಗಿ ಪೊಲೀಸ್ ಠಾಣೆಗೆ ಭೇಟಿ ನೀಡುವರು. ಸಂಜೆ 5 ಗಂಟೆಗೆ ಕುಷ್ಟಗಿಯ ಸಮಾಜ ಕಲ್ಯಾಣ ಇಲಾಖೆಯ ಪೋಸ್ಟ್ ಮೆಟ್ರಿಕ್ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡುವರು. ಸಂಜೆ 6 ಗಂಟೆಗೆ ಕುಷ್ಟಗಿಯಿಂದ ನಿರ್ಗಮಿಸಿ ರಾತ್ರಿ 7.15 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ವಾಸ್ತವ್ಯ ಮಾಡುವರು.
ಫೆ.7 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಮಹಿಳಾ ಸ್ಪಂದನಾ ಕಾರ್ಯಕ್ರಮ ಹಾಗೂ ಮಹಿಳಾ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಮಧ್ಯಾಹ್ನ 3 ಗಂಟೆಗೆ ವಿವಿಧ ಮಾಧ್ಯಮದವರೊಂದಿಗೆ ಪತ್ರಿಕಾಗೋಷ್ಠಿ ನಡೆಸುವರು. ಸಂಜೆ 6.30 ಗಂಟೆಗೆ ಕೊಪ್ಪಳದಿಂದ ರೈಲಿನ ಮೂಲಕ ನಿರ್ಗಮಿಸಿ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸುವರು ಎಂದು ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




