
ಶಹಪುರ ಗ್ರಾಮದಲ್ಲಿ ಕೋತಿ ಹಿಡಿದ ಅರಣ್ಯ ಇಲಾಖೆ

Forest department catches monkey in Shahapura village

ಕೊಪ್ಪಳ: ಜಿಲ್ಲೆಯ ಶಹಪುರ ಗ್ರಾಮದಲ್ಲಿ ಈ ಹಿಂದೆ ಇದ್ದ ಕೋತಿಗಳ ಹಾವಳಿ ಮತ್ತೆ ಕಳೆದ ಮೂರ್ನಾಲ್ಕು ತಿಂಗಳಿಂದ ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಕೋತಿ ಹಿಡಿದು ಕಾಡಿಗೆ ಬಿಡಲಾಗಿದೆ.
ಶಹಪುರ ಗ್ರಾಮದ ಸುತ್ತ ಮುತ್ತಲೂ ಹಸಿರು ಗದ್ದೆ, ರಾಷ್ಟ್ರೀಯ ಹೆದ್ದಾರಿ, ಹಳ್ಳ, ಕೆರೆ ಬಯಲು, ಮಟ್ಟಿ, ಸಣ್ಣ ಪುಟ್ಟ ಝರಿಗಳು, ತೋಟಗಳು, ಸಿಹಿ ನೀರಿನ ಹಳ್ಳ, ತರಕಾರಿ ಬೆಳೆಯುವ ಹೊಲಗಳು ಇರುವುದರಿಂದ ಕೋತಿಗೆ ಎಲೆ, ಹಣ್ಣು, ಸವತೆಕಾಯಿ ಸೇವನೆಗೆ ಸಹಕಾರಿಯಾಗಿವೆ. ಗ್ರಾಮದಲ್ಲಿ ತೆಂಗಿನ ಮರಗಳು ಮತ್ತು ಬೆಟ್ಟದ ಹುಣಿಸೆ ಹಣ್ಣಿನ ಗಿಡಗಳು ಇವೆ. ಜೊತೆಗೆ ಮನೆಯ ಬೆಳಕಿಂಡಿಯಿAದ ಅಡುಗೆ ಮನೆಗೆ ನುಗ್ಗಿ ರೊಟ್ಟಿ, ಅನ್ನ, ಹಣ್ಣು, ಹಂಪಲುಗಳನ್ನು ಎತ್ತಿಕೊಂಡು ಹೋಗುವ ಮೂಲಕ ಕೋತಿ ಚೇಷ್ಟೆ ಮಾಡುತ್ತಿವೆ.
ಈ ಕಾರಣದಿಂದ ಕಳೆದ ಮೂರ್ನಾಲ್ಕು ತಿಂಗಳಲ್ಲಿ ಗ್ರಾಮದೊಳಗೆ ಕೋತಿಗಳು ನೆಲೆ ನಿಂತಿದ್ದು, ಇಷ್ಟಾಗಿದ್ದರೆ ಸಾಕಾಗಿತ್ತೇನೋ…! ಟ್ರಾಕ್ಟರ್ ಸವಾರಿ ಮಾಡುವ ಚಾಲಕರ ಮೇಲೆ ದಾಳಿ ನಡೆಸುವ ಕೋತಿಯಿಂದ ಚಾಲಕರು ಭಯಗೊಂಡಿದ್ದಾರೆ. ಗ್ರಾಮದ ಮಕ್ಕಳು ಮತ್ತು ಮಹಿಳೆಯರ ಮೇಲೆ ಏರಿ ಹೋಗುವುದರಿಂದ ಆತಂಕವನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿ ವೀರಣ್ಣ ಕೋಮಲಾಪುರ ಇವರು ಗ್ರಾಮ ಪಂಚಾಯಿತಿ ಸದಸ್ಯರಾದ ಹಾಲಪ್ಪ ತೋಟದ, ಹನುಮಂತ ಗೊಲ್ಲರ, ನಿಂಗಪ್ಪ ನಾಗಲಾಪುರ, ನಾಗರಾಜ ದೊಡ್ಡಮನೆ, ಗ್ರಾಮದ ಹಿರಿಯರಾದ ಬಸವರಾಜಸ್ವಾಮಿ ಹಿರೇಮಠ, ಶರಣಪ್ಪ ಕುಟುಗನಹಳ್ಳಿ ಸೇರಿದಂತೆ ಗ್ರಾಮದ ಯುವ ಧುರೀಣರಾದ ನಿಂಗಪ್ಪ ನಾಗಲಾಪುರ, ಬಸವರಾಜ ಹೊನ್ನುಂಚಿ ಇವರೊಂದಿಗೆ ಚರ್ಚಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿಯವರು ಗ್ರಾಮಕ್ಕೆ ಆಗಮಿಸಿ ಕೋತಿ ಸಂಚರಿಸುವ ಸ್ಥಳದಲ್ಲಿ ಬೋನು ಇಟ್ಟು, ಕೋತಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮಸ್ಥರು ಇದೀಗ ನಿರಾಳರಾಗಿದ್ದು, ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಪುರ ಪ್ರಮುಖರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.




