
Grand Jayanti Celebration of Nijasharan Ambigara Choudaiah
ಸರ್ವ ಸಮುದಾಯದ ಜೊತೆಗೂಡಿ ನಿಜಶರಣ ಅಂಬಿಗರ ಚೌಡಯ್ಯನವರ ಅದ್ಧೂರಿ ಜಯಂತಿ ಆಚರಣೆ
ಚೌಡಯ್ಯನವರ ವಚನಗಳು ಸರ್ವ ಕಾಲದಲ್ಲಿಯೂ ಅನುಕರಣೀಯ: ಪರಣ್ಣ ಮುನವಳ್ಳಿ


ಗಂಗಾವತಿ, ಜ.21: ನಗರ ಗ್ರಾಮ ದೇವತೆ ಶ್ರೀ ದುರ್ಗಮ್ಮದೇವಿ ದೇವಸ್ಥಾನ ಬಳಿಯ ಶ್ರೀ ಅಂಬಿಗರ ಚೌಡಯ್ಯ ವೃತ್ತದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯೋತ್ಸವವನ್ನು ಗಂಗಾಮತ ಸಮುದಾಯದ ಬಾಂಧವರು ಸರ್ವ ಸಮುದಾಯದವರ ಜೊತೆಗೂಡಿ ಬುಧವಾರದಂದು ಅದ್ಧೂರಿಯಾಗಿ ಆಚರಿಸಿದರು.
ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು, 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಬಂಡಾಯ ಶರಣರೆಂದೇ ಗುರುತಿಸಿಕೊಂಡಿದ್ದ ಅಂಬಿಗರ ಚೌಡಯ್ಯನವರ ವಚನಗಳು ಸರ್ವ ಕಾಲದಲ್ಲಿಯೂ ಅನುಕರಣೀಯವಾಗಿವೆ. ಇವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಎಲ್ಲಾ ಸಮುದಾಯದವರು ಸಮಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು. ಸರ್ವ ಸಮುದಾಯದವರ ಜೊತೆಗೂಡಿ ಗಂಗಾಮತ ಸಮುದಾಯದ ಬಾಂಧವರು ಪ್ರತಿವರ್ಷವೂ ಆಚರಿಸುವ ಅಂಬಿಗರ ಚೌಡಯ್ಯ ಜಯಂತಿಯು ಅನುಕರಣೀಯ ಎಂದರು.
ನಂತರ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಹೆಚ್.ಆರ್.ಶ್ರೀನಾಥ ಅವರು, ಹಿಂದುಳಿದ ಸಮುದಾಯದಲ್ಲಿ ಜನಿಸಿ ಬಂಡಾಯ ಸಾಹಿತಿಯಾಗಿ ಬಸವಣ್ಣವರ ಸಹವರ್ತಿಯಾಗಿದ್ದ ಅಂಬಿಗರ ಚೌಡಯ್ಯನವರು ನಮ್ಮೆಲ್ಲರಿಗೂ ಸ್ಫೂರ್ತಿ. ಗಂಗಾಮತ ಸಮುದಾಯವು ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಆರ್ಥಿಕವಾಗಿಯೂ ಕೂಡ ಹಿಂದುಳಿದಿದ್ದಾರೆ. ನದಿ ದಂಡೆಗಳಲ್ಲಿ ವಾಸವಿದ್ದು ಮೀನುಗಾರಿಕೆ ಮಾಡುತ್ತಿರುವ ಸಾವಿರಾರು ಕುಟುಂಬಗಳಿಗೆ ರಾಜ್ಯ ಕಾಂಗ್ರೆಸ್ ಸರಕಾರ ಮನೆ ನಿರ್ಮಿಸಿಕೊಡಬೇಕು. ಬೇರೆ ಸಮುದಾಯಗಳಿಗೆ ನೀಡಿದಂತೆ ಈ ಸಮುದಾಯದ ಏಳ್ಗೆಗಾಗಿ ಸರಕಾರವು ಅಗತ್ಯ ಅನುದಾನಗಳನ್ನು ನೀಡಿ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಗಂಗಾಮತ ಸಮುದಾಯದ ತಾಲೂಕು ಅಧ್ಯಕ್ಷ ಹನುಮೇಶ ಬಟಾರಿ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸರ್ವ ಸಮುದಾಯದವರ ಜೊತೆಗೂಡಿ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಜಗತ್ತಿನಲ್ಲಿ ನೀರಿಲ್ಲದ ಸ್ಥಳವಿಲ್ಲ. ಅದೇ ರೀತಿ ನಿಜಶರಣರ ವಚನಗಳಲ್ಲಿ ಜಗತ್ತಿಗೆ ಸಾರದ ಸಂದೇಶಗಳಿಲ್ಲ. ಬಂಡಾಯಶರಣ ಅಂಬಿಗರ ಚೌಡಯ್ಯನವರ ವಚನಗಳು ಸ್ವಲ್ಪ ಕಟುವಾಗಿದ್ದರೂ ಕೂಡ ಸಮಾಜ ಸುಧಾರಣೆ ಹಾಗೂ ಸಮಸಮಾಜದ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಇತ್ತೀಚಿಗೆ ನಡೆದ ಅಧಿವೇಶನದಲ್ಲಿ ಎಂಎಲ್ಸಿ ತಿಪ್ಪಣ್ಣ ಕಮಕನೂರು ಅವರು ವಿಧಾನಸೌಧದಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಒತ್ತಾಯಿಸಿದ್ದಾರೆ. ಈ ಕಾರ್ಯವನ್ನು ಶೀಘ್ರದಲ್ಲಿಯೇ ಮಾಡಬೇಕು. ತಪ್ಪಿದಲ್ಲಿ ಸಮುದಾಯದ ವತಿಯಿಂದ ಬೃಹತ್ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಹೆಚ್ ನರಸಿಂಹಯ್ಯ ಪ್ರಶಸ್ತಿ ಪುರಸ್ಕøತ ಲಿಟಲ್ ಆಟ್ರ್ಸ್ ಸ್ಕೂಲಿನ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ಮಾಜಿ ಸಂಸದ ಶಿವರಾಮೇಗೌಡ, ಗಂಗಾಮತ ಸಮುದಾಯದ ಮುಖಂಡ ರಾಜಶೇಖರ್ ಮುಷ್ಟೂರು, ಬಿಜೆಪಿ ಮುಖಂಡ ವಿರೂಪಾಕ್ಷಪ್ಪ ಸಿಂಗನಾಳ ಅವರು ಮಾತನಾಡಿದರು.
ಈ ವೇಳೆ ತಹಸೀಲ್ದಾರ್ ಯು.ನಾಗರಾಜ್, ಕಾಡಾ ಮಾಜಿ ಅಧ್ಯಕ್ಷ ಗಿರೇಗೌಡ, ನಗರಸಭೆ ಸದಸ್ಯ ಪರಶುರಾಮ ಮಡ್ಡೇರ್, ಅಂಬಿಗರ ಅಂಜಿನಪ್ಪ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವುಕುಮಾರ ಅರಿಕೇರಿ, ವೈ.ಬಿ.ಮನಗುಳಿ, ವಿರೂಪಾಕ್ಷಪ್ಪ ವಕೀಲರು, ಮರಳಿ ನಿರುಪಾದಿ, ಹೊಸಳ್ಳಿ ಸಿದ್ದಪ್ಪ, ಮರಿಯಪ್ಪ, ಮಲ್ಲಾಪುರ ಯರ್ರಿಸ್ವಾಮಿ, ಗಂಗಾಮತ ಸಮುದಾಯದ ತಾಲೂಕು ಉಪಾಧ್ಯಕ್ಷ ದೊಡ್ಡ ಭರಮಪ್ಪ, ಅಂಬಿಗರ ಚೌಡಯ್ಯ ತಾಲೂಕು ಯುವಕ ಸಂಘದ ಅಧ್ಯಕ್ಷ ಭೈರೇಶ, ರಾಘವೇಂದ್ರ, ಚಂದ್ರಶೇಖರ ಮುಕ್ಕುಂದಿ, ದೇವರಾಜ್, ಗೋಪಿ, ಪೂಜಾರಿ ಹನುಮೇಶ ಸೇರಿದಂತೆ ಗಂಗಾಮತ ಸಮುದಾಯದ ಸ್ಥಳೀಯ ಹಿರಿಯರು, ಯುವಕರು, ವಿವಿಧ ಗ್ರಾಮಗಳ ಮುಖಂಡರು, ಯುವಕರು ಇದ್ದರು.




