Five people were awarded the Chunchashree Award: In the presence of Shri Nirmalananda Nath Swamiji.
ವರದಿ: ಬಂಗಾರಪ್ಪ .ಸಿ.
ನಾಗಮಂಗಲ : ಸೆ :- 24. ಕನ್ನಡ ನಾಡಿನ ಜಾನಪದ ಕಲೆಗಳ ಬೃಹತ್ ಅನಾವರಣವು ಶ್ರೀ ಕ್ಷೇತ್ರದಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಿದೆ ಎಂದು ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅಭಿಪ್ರಾಯ ಪಟ್ಟರು.
ಅವರು ಇಂದು ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ 46ನೇ ರಾಜ್ಯ ಮಟ್ಟದ ಜಾನಪದ ಕಲಾಮೇಳ ಹಾಗೂ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂತಹ ಮೇರು ಸಂಭ್ರಮದ ರೂವಾರಿ ಆಧ್ಯಾತ್ಮಿಕ ಧಾರ್ಮಿಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ನಮ್ಮ ಆರಾಧ್ಯ ದೈವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಇಂತಹ ಸನಾತನ ಜಾನಪದ ಕಲಾ ಪ್ರಕಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿರುವುದು ಹಾಗೂ ಅದರ ನಿರಂತರತೆಗೆ ಸದಾ ಶ್ರಮಿಸುತ್ತಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಜನರ ಬಾಯಿಂದ ಬಾಯಿಗೆ ಹಬ್ಬುವ ಜಾನಪದವನ್ನು ಹಲವು ಮಾಧ್ಯಮಗಳ ಮೂಲಕ ವಿಶ್ವದಾದ್ಯಂತ ಪಸರಿಸುವ ಕಾರ್ಯ ಸಾಗುತ್ತಿದೆ. ಕಲೆಗೆ ಜಾತಿ ಧರ್ಮದ ಭೇದ ಭಾವವಿಲ್ಲ, 1500 ವರ್ಷಗಳ ಇತಿಹಾಸವಿರುವ ಶ್ರೀ ಮಠವು ಧರ್ಮದ ಸಾರದೊಂದಿಗೆ ಕಲಾಪರಂಪರೆಯನ್ನು ಉಳಿಸಿ ಬೆಳೆಸುತ್ತಾ ಶೈಕ್ಷಣಿಕವಾಗಿ ಜ್ಞಾನ ದಾಸೋಹ ನೀಡುತ್ತಾ ಲಕ್ಷಾಂತರ ಜನರ ಜೀವನಕ್ಕೆ ಬೆಳಕಾಗಿದೆ ಎಂದರು.
ಸರ್ಕಾರವು ಮಾಡಲಾಗದಂತ ಇಂತಹ ಸಮಾಜೋದ್ಧಾರದ ಕೆಲಸವನ್ನು ಮಾಡುತ್ತಿರುವುದು ಶ್ರೀಮಠಕ್ಕೆ ಮಾತ್ರ ಸಾಧ್ಯ. ಮಹಾರಾಜರು ಆಚರಿಸುತ್ತಿದ್ದ ದಸರಾ ಸಂಭ್ರಮವನ್ನು ನೆರವೇರಿಸುತ್ತಿರುವುದು ಶ್ರೀಮಠದ ಹೆಗ್ಗಳಿಕೆ, ಆಗಮಿಸಿರುವ ಕಲಾವಿದರು ಈ ಕ್ಷೇತ್ರದ ವಿದ್ಯಾರ್ಥಿಗಳು ಈ ಸಂಸ್ಕಾರದೊಂದಿಗೆ ಉನ್ನತ ಸ್ಥಾನವನ್ನು ಗಳಿಸಿ ಎಂದು ಹಾರೈಸಿದರು.
ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಮಾತನಾಡಿ ಶ್ರೀ ಮಠವು ಆಧ್ಯಾತ್ಮವಲ್ಲದೆ ಕಲೆ ವಿಜ್ಞಾನ ತಂತ್ರಜ್ಞಾನ ಸೇರಿದಂತೆ ಸಕಲಕ್ಷೇತ್ರಗಳಲ್ಲೂ ಏಳಿಗೆಯನ್ನು ಸಾಧಿಸುತ್ತ ಮುಂಚೂಣಿಯಲ್ಲಿದೆ. ಪ್ರತಿ ವರ್ಷ 5 ಮಂದಿ ಹಿರಿಯ ಸಾಧಕರಿಗೆ ಚುಂಚಶ್ರೀ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು ಇದಕ್ಕೆ ಸಾಕ್ಷಿ ಎಂದರು. ಕೃಷಿ ಹಾಗೂ ಜಾನಪದಕ್ಕೆ ಅವಿನಾಭಾವ ಸಂಬಂಧವಿದೆ. ಜಾನಪದ ಹುಟ್ಟು ಹಳ್ಳಿಯಲ್ಲೇ ಆಗಿದೆ. ರಾಗಿ ಬೀಸುವಾಗ, ನಾಟಿ ಮಾಡುವಾಗ, ಬಾಂಧವ್ಯಗಳ ಒಡನಾಟವನ್ನು ಹಂಚಿಕೊಳ್ಳುವಾಗ, ಕೃಷಿ ಕಾರ್ಯದ ದಣಿವರಿಯದಂತೆ ಸಾಧ್ಯವಾಗಿಸಿರುವುದು ಜಾನಪದವೇ. ನಾಡಿನಲ್ಲೇಡಿಯಿಂದ ಕಲಾವಿದರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ತಾಯಂದಿರು ಕಲೆಗಳ ಮೂಲಕ ವಿಶ್ವದ ಜನತೆಗೆ ಅನೌಪಚಾರಿಕ ಶಿಕ್ಷಣವನ್ನು ನೀಡುತ್ತಿದ್ದಾರೆ. ನಾಡಿನ ಅನೇಕ ಹೊಸ ಮಠಗಳು ಹಾಗೂ ಸಾಧುಗಳ ಬೆಳವಣಿಗೆ ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿಯವರ ಸಂಕಲ್ಪ ಶಕ್ತಿ ಹಾಗೂ ಮಾರ್ಗದರ್ಶನವಿದ್ದು, ದೇಶದ ಜನತಾ ಸೇವೆಗೆ ವಿಶೇಷ ಆಯಾಮ ಹಾಗೂ ಪರಿಕಲ್ಪನೆಗಳ ಮೂಲಕ ಮಹತ್ವವಾದುದನ್ನು ನೀಡಿದ್ದಾರೆ ಎಂದು ಸ್ಮರಿಸಿದರು.
ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಪಟ್ಟಾಭಿಷೇಕೋತ್ಸವದ ಪ್ರಯುಕ್ತ ಈ ರಾಜ್ಯಮಟ್ಟದ ಜಾನಪದ ಕಲಾ ಮೇಳವು ಆ ಯೋಜನೆ ಗೊಂಡಿದೆ. ಶ್ರೀ ಕ್ಷೇತ್ರ ಹಾಗೂ ಗುರುಗಳ ಅಪಾರ ಪ್ರೀತಿ ಭಕ್ತಿಯಿಂದ ಅಸಂಖ್ಯಾತ ಕಲಾವಿದರು ಇಲ್ಲಿ ಮೇಳೈಸಿದ್ದೀರಿ. ಯುವಕರಿಗೆ ಈ ಘನ ಕಲೆಗಳ ಮಹತ್ವದ ಅರಿವಾಗಬೇಕು, ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬ ಡಿವಿಜಿಯವರ ಮಂಕುತಿಮ್ಮನ ಕಗ್ಗವನ್ನು ಸಮೀಚನಗೊಳಿಸಿ ಮಾತನಾಡಿದರು. ವಿಶ್ವ ಹೊರಗೆ ಬದಲಾಗಲಿ ಆದರೆ ಮೂಲ ಬೇರು ಭದ್ರವಾಗಿರಲಿ ಎಂಬ ಮಾತಿನಂತೆ ನಿಮ್ಮ ಈ ವಿಶಿಷ್ಟ ಕಲೆ ಬೇರಿಗೆ ಸಮಾನ ಇದನ್ನು ನಿರಂತರಗೊಳಿಸಿ ಎಂದರು. ಅತಿ ವೇಗವಾಗಿ ಬೆಳೆಯುತ್ತಿರುವ ಈ ವಿಶ್ವ ನಾಲ್ಕನೇ ಮಹಾಯುದ್ಧವನ್ನು ಕಲ್ಲು ಬಡಿಗೆ ಇತ್ಯಾದಿಗಳಿಂದ ಮಾಡಬೇಕಾಗುತ್ತದೆ ಎಂಬ ವಿಜ್ಞಾನಿಯೊಬ್ಬರ ಚಿಂತನೆಯನ್ನು ವ್ಯಕ್ತಪಡಿಸಿದರು. ಗೃಹ ಮಂತ್ರಿ ಜಿ ಪರಮೇಶ್ವರ್ ರವರ ತಂದೆ ಗಂಗಾಧರಯ್ಯನವರು ಶ್ರೀಮಠದೊಂದಿಗೆ ಹೊಂದಿದ್ದ ಅಪೂರ್ವ ಬಾಂಧವ್ಯ ಹಾಗೂ ತುಮಕೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಎಂಬ ಕರೆಗೆ ಸಿದ್ದಾರ್ಥ ಸಂಸ್ಥೆಯು ಶ್ರೀಮಠದ್ದೇ, ನೀವೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಆಧುನಿಕ ಜಗತ್ತಿಗೆ ವಿಶಿಷ್ಟ ಕೊಡುಗೆಯನ್ನು ನೀಡಿ ಎಂದು ಗುರುಗಳು ಹಾರೈಸಿದ್ದನ್ನೂ ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಕೊಡ ಮಾಡಿದ ಚುಂಚ ಶ್ರೀ ಪ್ರಶಸ್ತಿ ಪುರಸ್ಕೃತರ ಸಾಧನೆಯನ್ನು ತಿಳಿಸಿ ಹರಸಿದರು.
ವೈದ್ಯಕೀಯ ಸೇವಾ ನಿರತರಾಗಿದ್ದು, ತಮ್ಮ ಸ್ವಗ್ರಾಮದ ಸರ್ಕಾರಿ ಶಾಲೆಗೆ 20 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ಹಾಗೂ ಸೌಲಭ್ಯವನ್ನು ಒದಗಿಸಿಕೊಟ್ಟ ಡಾ. ಹೆಚ್ ಎಂ ವೆಂಕಟಪ್ಪ, ಸಮಾಜ ಸೇವೆಗಾಗಿ ಹಿರಿಯ ಸಮಾಜಸೇವಕ ಜಿ ನಾರಾಯಣ, ಕೃಷಿ ಮತ್ತು ಪರಿಸರ ಸೇವೆಗಾಗಿ ಡಾ. ಎಲ್ ಹನುಮಂತಯ್ಯ, ಕ್ರೀಡಾ ಸಾಧನೆಗಾಗಿ ಡಾ. ಸಿ ಹೊನ್ನೇಗೌಡ, ಜಾನಪದ ಕ್ಷೇತ್ರದ ಸಾರ್ಥಕ ಸೇವೆಗಾಗಿ ಜಿ ಡಿ ತಿಮ್ಮಯ್ಯ ಈ ಪಂಚ ದಿಗ್ಗಜರಿಗೆ ಚುಂಚಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಗೊರವರ ಕುಣಿತ ಕಲಾವಿದ ಮಲ್ಲಯ್ಯ ಮತ್ತು ಪೂಜಾ ಕುಣಿತದ ಸಿದ್ದೇಗೌಡರನ್ನು ಹೆಚ್ ಎಲ್ ನಾಗೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಮಯದಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಶ್ರೀ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಪುರುಷೋತ್ತಮಾನಂದನಾಥ ಸ್ವಾಮೀಜಿ, ಶಾಖಾ ಮಠಗಳ ಸ್ವಾಮೀಜಿಗಳು, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಸ್ ಎನ್ ಶ್ರೀಧರ, ಜಾನಪದ ಪರಿಷತ್ತಿನ ಹಿ. ಚಿ. ಬೋರಲಿಂಗಯ್ಯ, ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ. ಎ ಟಿ ಶಿವರಾಮು ಹಾಗೂ ಇತರರಿದ್ದರು.