Checking the condition of lakes before the onset of monsoon -Minister Bhosaraju

ಬೆಳಗಾವಿ ಸುವರ್ಣಸೌಧ,ಡಿ.12(ಕರ್ನಾಟಕ ವಾರ್ತೆ): ಕೆರೆಗಳ ಏರಿಗಳ ಸಂರಕ್ಷಣೆಗಾಗಿ ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಪರಿಷತ್ತಿನಲ್ಲಿ ವಿವರಿಸಿದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಅವರು ಪ್ರತಿ ವರ್ಷದಂತೆ ಈ ವರ್ಷವು ಮುಂಗಾರು ಪ್ರಾರಂಭವಾಗುವ ಮುಂಚೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಗಳ ಪರಿವೀಕ್ಷಣೆ ಕೈಗೊಂಡು, ಕೆರೆಗಳ ಏರಿ, ಕೋಡಿ, ತೂಬು ಸೇರಿದಂತೆ ಇತ್ಯಾದಿಗಳನ್ನು ಸುಸ್ಥಿತಿಯಲ್ಲಿರುವ ಬಗ್ಗೆ ಖಾತರಿಪಡಿಸಿಕೊಂಡು ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದಾರೆ ಎಂದರು.
ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 3778 ಕೆರೆಗಳಿದ್ದು, ಅತೀ ಮಳೆಯಿಂದ ಕೆರೆಗಳ ಏರಿ ಹಾನಿಯಾದ ಸಂದರ್ಭದಲ್ಲಿ ತುರ್ತು ಸಂರಕ್ಷಣೆಗೆ ಕ್ರಮ ಜರುಗಿಸಲಾಗಿದೆ ಎಂದು ವಿವರಿಸಿದರು.
2023-24ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 210 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, 29.12 ಕೋಟಿ ರೂ. ವೆಚ್ಚ ಮಾಡಲಾಗಿದೆ. 2022-23 ರಲ್ಲಿ 638 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, 156 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.