At the Farmer Contact Center: Farmers who have run out of sowing seeds,,,
( ಗರಿಗೇದರಿದ ಕೃಷಿ ಚಟುವಟಿಕೆ )
ವರದಿ : ಪಂಚಯ್ಯ ಹಿರೇಮಠ,
ಕೊಪ್ಪಳ (ಕುಕನೂರು) : ಜಿಲ್ಲೆಯಾದ್ಯಂತ ಹಿಂಗಾರು ಬಿತ್ತನೆ ಕೃಷಿ ಚಟುವಟಿಕೆಗಳು ಗರಿಗೆದರುತ್ತಿದ್ದು ಬಿತ್ತನೆ ಬೀಜಗಳಿಗಾಗಿ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಬೀಜಗಳನ್ನು ಪಡೆಯಲು ಸರದಿಗೆ ನಿಲ್ಲುತ್ತಿದ್ದಾರೆ.
ಸೋಮವಾರದಿಂದ ಕುಕನೂರು ರೈತ ಸಂಪರ್ಕ ಕೇಂದ್ರದಲ್ಲಿ ಜೋಳ, ಕಡಲೆಬೀಜಗಳನ್ನು ವಿತರಿಸುತ್ತಿದ್ದು, ಬಿತ್ತನೆ ಬೀಜಗಳನ್ನು ಪಡೆಯಲು ಮುನ್ನಾ ದಿನ ರವಿವಾರ ಮಧ್ಯ ರಾತ್ರಿ 1 ಗಂಟೆಯಿಂದ ಸರದಿ ಸಾಲಿಗೆ ನಿಂತಿದ್ದು ಬೆಳಗ್ಗೆ ಹತ್ತು ಗಂಟೆಯೊಳಗೆ ನೂರಾರು ರೈತರು ಸೇರಿದಂತೆ ರೈತ ಮಹಿಳೆಯರು ಮುಗಿ ಬಿದ್ದಿರುವುದು ಕಂಡು ಬಂದಿತು.
ಈ ಬಾರಿ 28ರಿಂದ 29 ಸಾವಿರ ಹೆಕ್ಟರ್ ರೈತರು ಕಡಲೆಯನ್ನು ಬಿತ್ತಿದರೇ 4ರಿಂದ 5ಸಾವಿರ ಹೆಕ್ಟರ್ ರೈತರು ಜೋಳವನ್ನು ಬಿತ್ತನೆ ಮಾಡಲಾಗುತ್ತದೆ ಎನ್ನುವ ನೀರಿಕ್ಷೆ ಇದ್ದು ಇನ್ನೂಳಿದಂತೆ ವಿವಿಧ ಹಿಂಗಾರು ಬೆಳೆಯ ಬೀಜಗಳನ್ನು ಬಿತ್ತಲಾಗುತ್ತದೆ ಎಂದು ತಿಳಿಸಿದರು.
ರೈತರಿಗೆ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ವಿತರಿಸಲು
ಕುಕನೂರು ಸೇರಿದಂತೆ ತಾಲೂಕಿನ ಬನ್ನಿಕೊಪ್ಪ, ಇಟಗಿ, ತಳಕಲ್, ಮಸಬ ಹಂಚಿನಾಳ ಗ್ರಾಮಗಳಲ್ಲಿ ಹೆಚ್ಚುವರಿ ಮಾರಾಟ ಕೇಂದ್ರಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಕುಕನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವರಾಜ ತೇರಿನ ತಿಳಿಸಿದರು.
ಈಗ ರೈತರ ಬಿತ್ತನೆಗಾಗಿ ನಮ್ಮ ಕೇಂದ್ರಕ್ಕೆ 1600 ಕ್ವಿಂಟಲ್ ಕಡಲೆ, 45 ಕ್ವಿಂಟಲ್ ಜೋಳ ಬಂದಿದ್ದು, ಕುಕನೂರು ಕೇಂದ್ರಕ್ಕೆ ಕಡಲೆ 500 ಕ್ವಿ, ಬನ್ನಿಕೊಪ್ಪಕ್ಕೆ 150 ಕ್ವಿ, ಇಟಗಿ 300ಕ್ವಿ, ತಳಕಲ್ 500ಕ್ವಿ, ಮಸಬಹಂಚಿನಾಳ 150ಕ್ವಿಂಟಲ್ ಐದು ಕೇಂದ್ರಗಳಿಗೆ ಬಂದಿವೆ.
ಇದರಂತೆ ಜೋಳ ಕುಕನೂರು 24 ಕ್ವಿಂಟಲ್, ಬನ್ನಿಕೊಪ್ಪ 4 ಕ್ವಿ, ಇಟಗಿ 8.4 ಕ್ವಿ, ತಳಕಲ್ 6ಕ್ವಿ, ಮಸಬ ಹಂಚಿನಾಳ 3 ಕ್ವಿಂಟಲ್ ಬಂದಿದೆ ಎಂದು ತಿಳಿಸಿದರು.
ಒಬ್ಬ ರೈತರಿಗೆ ಆಧಾರ ಕಾರ್ಡ್ ಮೂಲಕ 40 ಗುಂಟೆಗೆ ಒಂದು ಪಾಕೆಟ್ ನಂತೆ ಐದು ಎಕರೆ ಜಮೀನಿಗೆ ಕಡಲೆ, ಮೂರು ಕೆ.ಜಿ ಜೋಳ ವಿತರಿಸಲಾಗುವುದು ಎಂದರು.
ಕಡಲೆ 20 ಕೆ.ಜಿ ದರ 1470 ರೂ, ಜೋಳ 3 ಕೆ. ಜಿ.ದರ 169 ರೂಪಾಯಿಯಂತೆ ಇದು ಸಾಮಾನ್ಯ ರೈತರಿಗೆ ವಿತರಿಸುವ ಬೆಲೆ. ಇನ್ನೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಕಡಲೆ 20 ಕೆ.ಜಿ ದರ 1220ರೂ, ಜೋಳ 3 ಕೆ.ಜಿ ದರ 139ರೂಗಳಂತೆ ವಿತರಿಸಲಾಗುವುದು. ಒಟ್ಟಾರೇ ಈ ಯೋಜನೆಯಡಿ 13350 ರೈತರು ಸದುಪಯೋಗ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಬೆಳಗ್ಗೆ 10 ಗಂಟೆಗೆ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಾರಂಭಗೊಂಡ ಬೀಜ ವಿತರಣೆಯು ಸಾಯಂಕಾಲ 6.30 ಗಂಟೆಯಾದರೂ ರೈತರ ಸರದಿ ಕಡಿಮೆಯಾದಂತೆ ಗೋಚರಿಸಲಿಲ್ಲಾ, ಸಮಯವಾದ್ದರಿಂದ ಉಳಿದ ರೈತರಿಗೆ ಟೋಕನ್ ನೀಡಲಾಯಿತು.