

Women need 50% reservation, not 33%; Dr. Anand Kumar

ಮಹಿಳೆಯರಿಗೆ ಶೇ.33 ಅಲ್ಲ, ಶೇ.50ರಷ್ಟು ಮೀಸಲಾತಿ ಬೇಕು; ಡಾ. ಆನಂದ ಕುಮಾರ್
ಬೆಂಗಳೂರು,ನ.28; ಕೇಂದ್ರದ ಎನ್.ಡಿ.ಎ ಸರ್ಕಾರಕ್ಕೆ ಮಹಿಳಾ ಮೀಸಲಾತಿ ನಗಣ್ಯವಾಗಿದ್ದು, ಕ್ಷೇತ್ರ ಪುನರ್ ವಿಂಗಡಣೆ ಪ್ರಧಾನ ಕಾರ್ಯಸೂಚಿಯಾಗಿದೆ. ತನ್ನ ರಾಜಕೀಯ ಅಜೆಂಡಾ ಜಾರಿಗೆ ಮಹಿಳಾ ಮೀಸಲಾತಿ ನೆಪ ಮಾತ್ರ ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಟೀಕಿಸಿದ್ದಾರೆ.
ಮಹಿಳಾ ಮೀಸಲಾತಿ ಕುರಿತ ಸಂವಿಧಾನದ 106ನೇ ತಿದ್ದುಪಡಿ ಕಾಯ್ದೆ 2023ರಲ್ಲಿ ಅಂಗೀಕಾರಗೊಂಡಿದೆ. ಆದರೆ ಅದರ ಅನುಷ್ಠಾನವನ್ನು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯೊಂದಿಗೆ ಜೋಡಿಸಲಾಗಿದೆ. ಸರ್ಕಾರಕ್ಕೆ ನಿಜಕ್ಕೂ ಮಹಿಳೆಯರ ಬಗ್ಗೆ ಗೌರವ ಇದ್ದಿದ್ದರೆ ಮಹಿಳಾ ಮೀಸಲಾತಿಯನ್ನು ಈಗಾಗಲೇ ಜಾರಿಗೆ ತರಬೇಕಿತ್ತು. ಆದರೆ ಮಹಿಳೆಯರ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಮುಂದಾಗಿದೆ ಎಂದಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭಾರತದ ಜನಸಂಖ್ಯೆಯಲ್ಲಿ ಮಹಿಳೆಯರು ಅರ್ಧದಷ್ಟಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ, ಕುಟುಂಬದ ನಿರ್ವಹಣೆಯಲ್ಲಿ, ಆರ್ಥಿಕತೆಯಲ್ಲಿ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಮಹಿಳೆಯರ ಪಾತ್ರ ಅರ್ಧಕ್ಕಿಂತಲೂ ದೊಡ್ಡದು.
ಹಾಗಿದ್ದರೆ ದೇಶದ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಕೇವಲ ಶೇ.33ರಷ್ಟು ಮೀಸಲಾತಿ ಏಕೆ?
ಯಾವ ಜನಸಂಖ್ಯಾ ಲೆಕ್ಕಾಚಾರದ ಆಧಾರದ ಮೇಲೆ ಶೇ.33 ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ? ಎಂದು ಪ್ರಶ್ನಿಸಿದ್ದಾರೆ.
ಲೋಕಸಭಾ ಕ್ಷೇತ್ರಗಳನ್ನು ಶೇ.50ರಷ್ಟು ಹೆಚ್ಚಿಸುವ ಚರ್ಚೆ ನಡೆಯುತ್ತಿರುವಾಗ, ಮಹಿಳೆಯರ ಪ್ರಾತಿನಿಧ್ಯವನ್ನು ಮಾತ್ರ ಶೇ.33ಕ್ಕೆ ಸೀಮಿತಗೊಳಿಸುವುದೇಕೆ?
ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲೇಬೇಕು. ಶೇ.50ರಷ್ಟು ಜನಸಂಖ್ಯೆಗೆ ಶೇ.50ರಷ್ಟು ಪ್ರಾತಿನಿಧ್ಯ ಎಂಬ ಸಮಾನತೆಯ ಆಶಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಮಹಿಳೆಯರು ಕೇವಲ ಮತದಾರರಾಗಿರಬಾರದು; ಅವರು ಕಾನೂನು ರೂಪಿಸುವವರಾಗಬೇಕು. ನಿರ್ಧಾರ ತೆಗೆದುಕೊಳ್ಳುವ ಅಧಿಕಾರದಲ್ಲಿರಬೇಕು. ದೇಶದ ಆಡಳಿತದಲ್ಲಿ ಸಮಾನ ಪಾಲುದಾರರಾಗಬೇಕು.
ಇದು ಮಹಿಳೆಯರಿಗೆ ನೀಡುವ ಕೊಡುಗೆಯಲ್ಲ; ಇದು ಅವರ ಪ್ರಜಾಪ್ರಭುತ್ವದ ಹಕ್ಕಿಗೆ ಸಲ್ಲಿಸುವ ಗೌರವ.
ಮಹಿಳೆಯರಿಗೆ ಸಮಾನ ಹಕ್ಕು – ಸಮಾನ ಅಧಿಕಾರ – ಶೇ.50ರಷ್ಟು ರಾಜಕೀಯ ಪ್ರಾತಿನಿಧ್ಯ ದೊರೆತರೆ ಸರ್ಕಾರಕ್ಕೆ ಮಹಿಳೆಯರ ಬಗ್ಗೆ ಇರುವ ಧೋರಣೆ ಅನಾವರಣಗೊಳ್ಳುತ್ತದೆ ಎಂದು ಡಾ. ಆನಂದ ಕುಮಾರ್ ಹೇಳಿದ್ದಾರೆ.


