
State-level indefinite protest by mid-day meal workers in Bengaluru starting November 25

ನ.25ರಿಂದ ಬೆಂಗಳೂರಿನಲ್ಲಿ ಬಿಸಿಯೂಟ ನೌಕರರ ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಹೋರಾಟ
ಉದ್ಯೋಗ ಕಸಿಯುವ ಕ್ಲಸ್ಟರ್ ಕಿಚನ್ ಯೋಜನೆಗೆ ತೀವ್ರ ವಿರೋಧ – ಶಾಲೆಗಳಲ್ಲಿ ಅಡುಗೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ನಿರ್ಧಾರ
ಗಂಗಾವತಿ, ನ.20: ಶಾಲಾ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆಯಡಿ ಬಿಸಿಯೂಟ ತಯಾರಿಸಿ ಬಡಿಸುತ್ತಿರುವ ಅಡುಗೆ ನೌಕರರನ್ನು ಕೆಲಸದಿಂದ ವಂಚಿತರನ್ನಾಗಿಸುವ ಸರ್ಕಾರದ ಕ್ರಮವನ್ನು ಖಂಡಿಸಿ, ನವೆಂಬರ್ 25ರಿಂದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು ಸಂಯೋಜಿತ) ಕರೆ ನೀಡಿದೆ ಎಂದು ಸಂಘದ ರಾಜ್ಯಾಧ್ಯಕ್ಷರು ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷರಾದ ಲಕ್ಷ್ಮೀದೇವಿ ಸೋನಾರ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿಸಿಯೂಟ ನಿರ್ವಹಣೆಯು ಶಿಕ್ಷಕರಿಗೆ ಹೆಚ್ಚುವರಿ ಕೆಲಸದ ಹೊರೆಯಾಗುತ್ತಿದೆ ಎಂಬ ನೆಪವೊಡ್ಡಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ರಾಜ್ಯಾದ್ಯಂತ ಕ್ಲಸ್ಟರ್ ಮಟ್ಟದಲ್ಲಿ ಕಿಚನ್ ಸೆಂಟರ್ಗಳನ್ನು ಆರಂಭಿಸಿ, ಸಂಘ-ಸಂಸ್ಥೆಗಳು ಅಥವಾ ಸ್ವಸಹಾಯ ಸಂಘಗಳಿಗೆ ಅಡುಗೆ ಜವಾಬ್ದಾರಿ ವಹಿಸುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಿರುವುದು ಅಡುಗೆ ನೌಕರರ ಉದ್ಯೋಗಕ್ಕೆ ಕುತ್ತು ತಂದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಕ್ಷರ ದಾಸೋಹ ಯೋಜನೆ ಆರಂಭವಾದ ದಿನದಿಂದಲೂ ರಾಜ್ಯದ ಲಕ್ಷಾಂತರ ಬಡ, ವಿಧವಾ ಹಾಗೂ ವಿಚ್ಛೇದಿತ ಮಹಿಳೆಯರು ಅತ್ಯಂತ ಕಡಿಮೆ ಗೌರವಧನಕ್ಕೆ ದುಡಿಯುತ್ತಾ ಶಾಲಾ ಮಕ್ಕಳಿಗೆ ಬಿಸಿಯೂಟ ಒದಗಿಸುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ ಕೇವಲ 300 ರೂ.ಗಳಿಂದ 650 ರೂ.ವರೆಗೆ ಗೌರವಧನ ಪಡೆದು ಸೇವೆ ಸಲ್ಲಿಸಿರುವ ಈ ಮಹಿಳೆಯರ ಶ್ರಮವನ್ನು ಸರ್ಕಾರ ಪರಿಗಣಿಸದೆ, ಇದೀಗ ಕ್ಲಸ್ಟರ್ ಕಿಚನ್ಗಳ ಹೆಸರಿನಲ್ಲಿ ಅವರ ಉದ್ಯೋಗ ಕಸಿದುಕೊಳ್ಳಲು ಮುಂದಾಗಿರುವುದು ಖಂಡನೀಯ ಮತ್ತು ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಉಳಿವಿಗಾಗಿ ಬೀದಿಗಿಳಿಯಲು ನಿರ್ಧಾರ
ಅಡುಗೆ ನೌಕರರ ಬದುಕು ಮತ್ತು ಉದ್ಯೋಗದ ಭದ್ರತೆಯನ್ನು ಕಾಪಾಡುವಂತೆ ಸರ್ಕಾರವನ್ನು ಒತ್ತಾಯಿಸಲು ನವೆಂಬರ್ 25ರಿಂದ ಶಾಲೆಗಳಲ್ಲಿ ಅಡುಗೆ ಕೆಲಸ ಸ್ಥಗಿತಗೊಳಿಸಿ, ರಾಜ್ಯದ ಎಲ್ಲಾ ಅಡುಗೆ ನೌಕರರು ಬೆಂಗಳೂರಿನಲ್ಲಿ ನಡೆಯುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಲಕ್ಷ್ಮೀದೇವಿ ಸೋನಾರ್ ತಿಳಿಸಿದ್ದಾರೆ.
ಸರ್ಕಾರ ಕೂಡಲೇ ಕ್ಲಸ್ಟರ್ ಕಿಚನ್ ಯೋಜನೆಯ ಪ್ರಸ್ತಾವನೆಯನ್ನು ಕೈಬಿಟ್ಟು, ಅಕ್ಷರ ದಾಸೋಹ ನೌಕರರ ಉದ್ಯೋಗ ಭದ್ರತೆ ಹಾಗೂ ಜೀವನೋಪಾಯವನ್ನು ರಕ್ಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.


