ಡಾ. ಶರಣಬಸಪ್ಪ ಕೋಲ್ಕಾರ್ : ನನ್ನ ಸಂಶೋಧನಾ ಬದುಕಿನ ಮಾರ್ಗದರ್ಶಕರು!

H.Mallikarjun
H.Mallikarjun - Kalyanasiri
10 Min Read
ಜಾಹೀರಾತು


Dr. Sharanabasappa Kolkar: The Mentor of My Research Life!

ಡಾ. ಶರಣಬಸಪ್ಪ ಕೋಲ್ಕಾರ್ : ನನ್ನ ಸಂಶೋಧನಾ ಬದುಕಿನ ಮಾರ್ಗದರ್ಶಕರು!

ಜಾಹೀರಾತು


ಸಂಶೋಧನೆಗೆ ಪ್ರೇರಣೆ, ಇತಿಹಾಸದ ಅಧ್ಯಯನಕ್ಕೆ ದಾರಿದೀಪ, ಸ್ನೇಹಕ್ಕೆ ಮಾದರಿಯಾದ ಅಪರೂಪದ ವಿದ್ವಾಂಸರು


(ಡಾ. ಶರಣಬಸಪ್ಪ ಕೋಲ್ಕಾರ್ ಅವರ ಸರ್ವಾಧ್ಯಕ್ಷತೆಯಲ್ಲಿ ಕಾರಟಗಿಯಲ್ಲಿ ನವೆಂಬರ್ 21 ಮತ್ತು 22ರಂದು ನಡೆಯಲಿರುವ 15ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ವಿಶೇಷ ಲೇಖನ)


ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್
2010ರ ಮಾರ್ಚ್ ತಿಂಗಳು. ನನ್ನ ಪಿಎಚ್.ಡಿ. ಸಂಶೋಧನಾ ಕೃತಿಯಾದ ‘ಕೊಪ್ಪಳ ಜಿಲ್ಲೆಯ ಶಾಸನಗಳು ಮತ್ತು ಸಾಂಸ್ಕೃತಿಕ ಇತಿಹಾಸ’ ಪುಸ್ತಕ ಬಿಡುಗಡೆ ಮಾಡುವ ಸಂದರ್ಭ ಎದುರಾಗಿತ್ತು. ಆದರೆ ಪುಸ್ತಕ ಬಿಡುಗಡೆಗೆ ದಿನಾಂಕ ನಿಗದಿಪಡಿಸುವುದೇ ದೊಡ್ಡ ಸವಾಲಾಗಿತ್ತು. ಒಂದೆಡೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ದಿನಾಂಕಗಳು ನಿಗದಿಯಾಗಿದ್ದವು. ಮತ್ತೊಂದೆಡೆ ನನ್ನ ಮಗ ಶಶಾಂಕನ ನಾಮಕರಣ ಮಾಡಬೇಕಿತ್ತು. ಆಗ ಮಗನಿಗೆ ಐದು ತಿಂಗಳು. ಹೀಗಾಗಿ ಎರಡೂ ಕಾರ್ಯಕ್ರಮಗಳನ್ನು ಹೊಂದಾಣಿಕೆ ಮಾಡಿಕೊಂಡು ನಡೆಸುವುದು ಅನಿವಾರ್ಯವಾಗಿತ್ತು.
ನಮ್ಮ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಅಂದಿನ ಪ್ರಾಚಾರ್ಯರಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಅವರು ನನ್ನ ಕೃತಿ ಬಿಡುಗಡೆಗಾಗಿ ಅನೇಕ ವಿದ್ವಾಂಸರನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ಆದರೆ ಬಹುತೇಕರು ಸಮಯದ ಅನಾನುಕೂಲತೆಯನ್ನು ತಿಳಿಸಿದರು. ಇದರಿಂದ ನನಗೆ ಆತಂಕ ಶುರುವಾಯಿತು. ಪುಸ್ತಕ ಬಿಡುಗಡೆ ಹೇಗೆ ಮಾಡುವುದು? ಮಗನ ನಾಮಕರಣದ ಕಾರ್ಯಕ್ರಮವನ್ನು ಹೇಗೆ ಹೊಂದಾಣಿಕೆ ಮಾಡುವುದು? ಎಂಬ ಚಿಂತೆ ಕಾಡತೊಡಗಿತು.
ಕೊನೆಗೂ ಬೆಟ್ಟದೂರು ಅವರು ಖ್ಯಾತ ಕಥೆಗಾರರಾದ ಕುಂ. ವೀರಭದ್ರಪ್ಪ ಅವರನ್ನು ಸಂಪರ್ಕಿಸಿ ಕೃತಿ ಬಿಡುಗಡೆಗೆ ಒಪ್ಪಿಸಿದರು. ಆದರೆ ನನ್ನ ಸಂಶೋಧನಾ ಕೃತಿಯ ಕುರಿತು ಮಾತನಾಡಲು ಕೊಪ್ಪಳ ಜಿಲ್ಲೆಯ ಇತಿಹಾಸ, ಸಂಸ್ಕೃತಿ ಹಾಗೂ ಶಾಸನಗಳ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಸ್ಥಳೀಯ ವಿದ್ವಾಂಸರೊಬ್ಬರು ಬೇಕಾಗಿದ್ದರು. ಅಂತಹ ವಿದ್ವಾಂಸರ ಹುಡುಕಾಟದಲ್ಲಿದ್ದಾಗ ಯಾರೋ ಒಬ್ಬರು ಡಾ. ಶರಣಬಸಪ್ಪ ಕೋಲ್ಕಾರ್ ಅವರ ಹೆಸರನ್ನು ಸೂಚಿಸಿದರು. ಹೆಸರು ಸೂಚಿಸಿದವರು ಯಾರೆಂಬುದು ಇಂದು ನನಗೆ ನೆನಪಿಲ್ಲ. ಪ್ರೊ. ಬೆಟ್ಟದೂರು ಅವರು ಡಾ. ಕೋಲ್ಕಾರ್ ಅವರನ್ನು ಸಂಪರ್ಕಿಸಿ ಕೃತಿಯ ಕುರಿತು ಮಾತನಾಡುವಂತೆ ಕೇಳಿಕೊಂಡಾಗ, ಅವರು ಯಾವುದೇ ಹಿಂಜರಿಕೆಯಿಲ್ಲದೆ ತಕ್ಷಣ ಒಪ್ಪಿಗೆ ನೀಡಿದರು.
ಅವರ ಒಪ್ಪಿಗೆ ನನಗೆ ಅಪಾರ ಸಂತೋಷ ನೀಡಿತು. ಅಂದೇ ಪುಸ್ತಕ ಬಿಡುಗಡೆಯಾದಷ್ಟು ಖುಷಿಯಾಗಿತ್ತು. ನಿಗದಿಯಂತೆ 17-03-2010ರಂದು ಕಾಲೇಜಿನಲ್ಲಿ ನನ್ನ ಸಂಶೋಧನಾ ಕೃತಿ ಬಿಡುಗಡೆಯಾಯಿತು. ಅದೇ ದಿನ ನಮ್ಮ ಮನೆಯಲ್ಲಿ ಮಗ ಶಶಾಂಕನ ನಾಮಕರಣದ ಶುಭಕಾರ್ಯವೂ ನೆರವೇರಿತು.
ಅಂದಿನ ಕಾರ್ಯಕ್ರಮದಲ್ಲಿಯೇ ನಾನು ಡಾ. ಶರಣಬಸಪ್ಪ ಕೋಲ್ಕಾರ್ ಅವರನ್ನು ಮೊದಲ ಬಾರಿಗೆ ಮುಖತಃ ಭೇಟಿಯಾದದ್ದು. ನಂತರದ ದಿನಗಳಲ್ಲಿ ನಮ್ಮ ನಡುವೆ ಸ್ನೇಹ, ಆತ್ಮೀಯತೆ ಮತ್ತು ಬಾಂಧವ್ಯ ಗಟ್ಟಿಗೊಂಡಿತು. ಅವರೊಂದಿಗಿನ ಒಡನಾಟ ಸ್ನೇಹವೆನಿಸಿದರೂ, ನನ್ನ ಪಾಲಿಗೆ ಅವರು ಕೇವಲ ಸ್ನೇಹಿತರಲ್ಲ; ನನ್ನ ಸಂಶೋಧನಾ ಬದುಕಿನ ಮಾರ್ಗದರ್ಶಕರು.
ಕೊಪ್ಪಳ ಜಿಲ್ಲೆಯಲ್ಲಿ ಅಪರೂಪದ ಸಂಶೋಧನಾ ಪ್ರತಿಭೆ
ಕೊಪ್ಪಳ ಜಿಲ್ಲೆಯಲ್ಲಿ ಸಾಹಿತಿಗಳ ಸಂಖ್ಯೆ ಸಾಕಷ್ಟಿದೆ. ಇದು ನಮ್ಮ ಭಾಗದ ಹೆಮ್ಮೆಯ ಸಂಗತಿ. ಆದರೆ ಸಂಶೋಧಕರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು. ಅದರಲ್ಲೂ ಪುರಾತತ್ವ, ಪ್ರಾಗಿತಿಹಾಸ, ಶಾಸನ, ಇತಿಹಾಸ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಲ್ಲಿ ಆಳವಾದ ಅಧ್ಯಯನ ನಡೆಸಿರುವವರ ಸಂಖ್ಯೆ ಬಹಳ ಕಡಿಮೆ.
ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ ಡಾ. ಅ. ಸುಂದರ ಅವರು ಡಾ. ಶರಣಬಸಪ್ಪ ಕೋಲ್ಕಾರ್ ಅವರ ಎಂ.ಎ. ಇತಿಹಾಸದ ಪ್ರಾಧ್ಯಾಪಕರೂ, ಎಂ.ಫಿಲ್. ಮಾರ್ಗದರ್ಶಕರೂ ಆಗಿದ್ದರು. ಕೊಪ್ಪಳ ಭಾಗದ ಸಂಶೋಧನಾ ಪರಂಪರೆಯಲ್ಲಿ ಪಿ.ಬಿ. ದೇಸಾಯಿ, ನಾ.ಭ. ಶಾಸ್ತ್ರಿ, ಬಿ.ವಿ. ಶಿರೂರು, ಬಿ.ಸಿ. ಪಾಟೀಲ್, ಎಚ್.ಎಸ್. ಪಾಟೀಲ್, ಹನುಮಾಕ್ಷಿ ಗೋಗಿ, ಡಾ. ಶರಣಬಸಪ್ಪ ಕೋಲ್ಕಾರ್ ಮುಂತಾದವರು ಪ್ರಮುಖರು. ಉದ್ಯೋಗ ನಿಮಿತ್ತ ಕೊಪ್ಪಳಕ್ಕೆ ಬಂದು ನೆಲೆಸಿದ ಡಾ. ಡಿ.ಕೆ. ಮಾಳೆ, ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಡಾ. ರವಿ ಎನ್. ಚವ್ಹಾಣ ಅವರಂತಹ ಸಂಶೋಧಕರೂ ಈ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಆದರೆ ಪುರಾತತ್ವ ಮತ್ತು ಪ್ರಾಗಿತಿಹಾಸಿಕ ಅಧ್ಯಯನದ ವಿಷಯಕ್ಕೆ ಬಂದಾಗ ಡಾ. ಶರಣಬಸಪ್ಪ ಕೋಲ್ಕಾರ್ ಅವರ ಹೆಸರು ವಿಶೇಷವಾಗಿ ಪ್ರಸ್ತಾಪವಾಗುತ್ತದೆ. ಪುರಾತತ್ವ ಅಧ್ಯಯನ ಸುಲಭದ ಕೆಲಸವಲ್ಲ. ಇದಕ್ಕೆ ನಿರಂತರ ಕ್ಷೇತ್ರಕಾರ್ಯ, ತಾಳ್ಮೆ, ಪರಿಶ್ರಮ, ಸೂಕ್ಷ್ಮ ಅವಲೋಕನ ಮತ್ತು ಆಳವಾದ ವಿಷಯಜ್ಞಾನ ಅಗತ್ಯ. ಹೀಗಾಗಿಯೇ ಈ ಕ್ಷೇತ್ರದತ್ತ ಆಸಕ್ತಿ ತೋರುವವರ ಸಂಖ್ಯೆ ಕಡಿಮೆ. ಇಂತಹ ಸವಾಲಿನ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವವರು ಡಾ. ಕೋಲ್ಕಾರ್.
ಪ್ರಾಗಿತಿಹಾಸದಿಂದ ವಾಸ್ತುಶಿಲ್ಪದವರೆಗೆ ವಿಸ್ತರಿಸಿದ ಅಧ್ಯಯನ
ಡಾ. ಶರಣಬಸಪ್ಪ ಕೋಲ್ಕಾರ್ ಅವರು ಪ್ರಾಗಿತಿಹಾಸ, ಚರಿತ್ರೆ, ಶಾಸನ, ವಾಸ್ತುಶಿಲ್ಪ, ಸಂಸ್ಕೃತಿ ಮತ್ತು ಪೌರಾಣಿಕ ಹಿನ್ನೆಲೆ ಸೇರಿದಂತೆ ಹಲವು ವಿಷಯಗಳಲ್ಲಿ ಅಧ್ಯಯನ ನಡೆಸಿದ್ದಾರೆ.
ಚರಿತ್ರೆ, ಶಾಸನ ಮತ್ತು ವಾಸ್ತುಶಿಲ್ಪಗಳ ಅಧ್ಯಯನಕ್ಕೆ ಒಂದು ನಿರ್ದಿಷ್ಟ ವಿಧಾನವಿದ್ದರೆ, ಪುರಾತತ್ವ ಮತ್ತು ಶಿಲಾಯುಗ ಸಂಸ್ಕೃತಿಯ ಅಧ್ಯಯನಕ್ಕೆ ವಿಶೇಷ ಪರಿಣತಿ ಹಾಗೂ ಕ್ಷೇತ್ರಕಾರ್ಯದ ಅನುಭವ ಅಗತ್ಯ. ಈ ಕ್ಷೇತ್ರದಲ್ಲಿ ಡಾ. ಕೋಲ್ಕಾರ್ ಅವರು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಕೊಪ್ಪಳ, ಕನಕಗಿರಿ, ಕುಮ್ಮಟದುರ್ಗ, ಅಂಜನಾದ್ರಿ, ಹಂಪಿ, ಆನೆಗೊಂದಿ ಸೇರಿದಂತೆ ಈ ಭಾಗದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಿಸರದ ಮಹತ್ವವನ್ನು ಆಳವಾಗಿ ಅಧ್ಯಯನ ಮಾಡಿದ ಸಂಶೋಧಕರು ಅವರು. ವಿಶೇಷವಾಗಿ ಕೊಪ್ಪಳ ಭಾಗದ ಪ್ರಾಗೈತಿಹಾಸಿಕ ನೆಲೆಗಳು, ಶಿಲಾಯುಗದ ಸಂಸ್ಕೃತಿ, ಗವಿಚಿತ್ರಗಳು, ಶಿಲಾ ಚಿತ್ರಕಲೆ, ಪುರಾತತ್ವ ಅವಶೇಷಗಳು ಮತ್ತು ಐತಿಹಾಸಿಕ ಸ್ಮಾರಕಗಳ ಕುರಿತು ಅವರು ನಡೆಸಿರುವ ಅಧ್ಯಯನ ಗಮನಾರ್ಹವಾಗಿದೆ.
ಡಾ. ಶರಣಬಸಪ್ಪ ಕೋಲ್ಕಾರ್ ಅವರು ಕೊಪ್ಪಳ ಜಿಲ್ಲೆಯ ಪ್ರಮುಖ ಸಂಶೋಧಕರಲ್ಲಿ ಒಬ್ಬರು ಎಂಬ ಮಾತು ಅವರ ಅಧ್ಯಯನಶೀಲತೆ, ಕ್ಷೇತ್ರಕಾರ್ಯ ಮತ್ತು ಸಂಶೋಧನಾ ಕೊಡುಗೆಗಳಿಗೆ ಸಲ್ಲುವ ಮನ್ನಣೆಯಾಗಿದೆ.
ನನ್ನ ಸಂಶೋಧನೆಯ ಹಿಂದೆ ಅವರ ಮಾರ್ಗದರ್ಶನ
ನಾನು ಇಂದು ಕೊಪ್ಪಳ ಜಿಲ್ಲೆಯ ಇತಿಹಾಸದ ಅಧ್ಯಯನದಲ್ಲಿ ತೊಡಗಿಕೊಳ್ಳಲು ಡಾ. ಶರಣಬಸಪ್ಪ ಕೋಲ್ಕಾರ್ ಅವರ ಪ್ರೇರಣೆ ಮತ್ತು ನಿರಂತರ ಮಾರ್ಗದರ್ಶನ ಬಹುಮುಖ್ಯ ಕಾರಣವಾಗಿದೆ ಎಂಬುದು ನನಗೆ ಹೆಮ್ಮೆಯ ಸಂಗತಿ.
ಈ ಜಿಲ್ಲೆಯ ಇತಿಹಾಸ, ಸಂಸ್ಕೃತಿ, ಶಾಸನಗಳು ಮತ್ತು ಪುರಾತತ್ವದ ಕುರಿತು ಅಧಿಕೃತ ಹಾಗೂ ಆಳವಾದ ಮಾಹಿತಿ ನೀಡಬಲ್ಲವರು ಬಹಳ ಕಡಿಮೆ. ನನಗೆ ಲೇಖನ ಬರೆಯಬೇಕಾದಾಗ, ಕೃತಿ ರಚಿಸಬೇಕಾದಾಗ, ಉಪನ್ಯಾಸ ನೀಡಬೇಕಾದಾಗ ಅಥವಾ ಯಾವುದಾದರೂ ಐತಿಹಾಸಿಕ ಸಂಗತಿಯ ಬಗ್ಗೆ ಸ್ಪಷ್ಟತೆ ಬೇಕಾದಾಗ ಡಾ. ಶರಣಬಸಪ್ಪ ಕೋಲ್ಕಾರ್ ಮತ್ತು ಹಿರಿಯರಾದ ಎಚ್.ಎಸ್. ಪಾಟೀಲ್ ಅವರ ಮಾರ್ಗದರ್ಶನ ನನಗೆ ಬಹಳ ಉಪಯುಕ್ತವಾಗಿದೆ.
ಅದರಲ್ಲೂ ಡಾ. ಕೋಲ್ಕಾರ್ ಅವರು ಅತ್ಯಂತ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತಾರೆ. ನನ್ನ ಸಂಶೋಧನೆಯ ಅರ್ಧದಷ್ಟು ಪಾಲು ಅವರ ಮಾರ್ಗದರ್ಶನ ಮತ್ತು ಮಾಹಿತಿಯಿಂದಲೇ ಸಾಧ್ಯವಾಗಿದೆ ಎಂದರೂ ಅತಿಶಯೋಕ್ತಿಯಾಗಲಾರದು.
ನಮ್ಮ ನಡುವೆ ಮಾಹಿತಿ ನೀಡುವ ಮತ್ತು ಪಡೆಯುವ ಪ್ರಕ್ರಿಯೆ ನಿರಂತರವಾಗಿದೆ. ನಾಲ್ಕಾರು ದಿನ ಯಾವುದೇ ವಿಷಯದ ಕುರಿತು ಮಾತನಾಡದೆ ಇದ್ದರೆ, “ಯಾಕ್ರೀ ನಾಪತ್ತೆಯಾಗಿರೀ? ಐದಾರು ದಿನ ಆಯ್ತು ಮಾತಾಡಿಲ್ಲಾ?” ಎಂದು ಪ್ರೀತಿಯಿಂದ ವಿಚಾರಿಸುತ್ತಾರೆ. ಇದು ನಮ್ಮ ನಡುವಿನ ಆತ್ಮೀಯ ಬಾಂಧವ್ಯಕ್ಕೆ ಸಾಕ್ಷಿ.
ನನ್ನ ಸಂಶೋಧನೆಗೆ ಸಂಬಂಧಿಸಿದಂತೆ ಯಾವುದೇ ಅನುಮಾನ ಬಂದರೂ ಅವರಿಗೆ ದೂರವಾಣಿ ಕರೆ ಮಾಡುತ್ತೇನೆ. ಅವರು ಸಭೆ-ಸಮಾರಂಭಗಳಲ್ಲಿರಲಿ, ಕಾರ್ಯಕ್ರಮಗಳಲ್ಲಿರಲಿ ಅಥವಾ ಸಭೆಗಳಲ್ಲಿ ನಿರತರಾಗಿರಲಿ, ಸಾಧ್ಯವಾದಷ್ಟು ನನ್ನ ಕರೆ ಸ್ವೀಕರಿಸಿ ಮಾತನಾಡುತ್ತಾರೆ. ಕಾರ್ಯನಿಮಿತ್ತ ಮಾತನಾಡಲು ಸಾಧ್ಯವಾಗದಿದ್ದರೆ ತಮ್ಮ ಪರಿಸ್ಥಿತಿಯನ್ನು ತಿಳಿಸಿ ನಂತರ ಕರೆ ಮಾಡುವುದಾಗಿ ಹೇಳುತ್ತಾರೆ.
ಅವರ ವ್ಯಕ್ತಿತ್ವದ ಅತ್ಯಂತ ವಿಶಿಷ್ಟ ಗುಣವೆಂದರೆ ಸರಳತೆ, ತಾಳ್ಮೆ ಮತ್ತು ಸೌಜನ್ಯ. ಮಗುವಿನಂತೆ ಮುಗ್ಧವಾಗಿ ಮಾತನಾಡುವ ಅವರು, ವಿಷಯವನ್ನು ಅತ್ಯಂತ ಸಮಾಧಾನದಿಂದ ವಿವರಿಸುತ್ತಾರೆ. ಎಷ್ಟೇ ಕೆಲಸದ ಒತ್ತಡವಿದ್ದರೂ ಕೋಪಗೊಳ್ಳದೆ, ಬೇಸರಿಸಿಕೊಳ್ಳದೆ, ಮುಜುಗರ ಮಾಡದೆ ಮಾಹಿತಿ ನೀಡುತ್ತಾರೆ.
ಕೆಲವೊಮ್ಮೆ ನನ್ನ ಸ್ವಭಾವವನ್ನು ಅವರೊಂದಿಗೆ ಹೋಲಿಸಿಕೊಂಡಾಗ ಅವರಿಂದ ನಾನು ಕಲಿಯಬೇಕಾದದ್ದು ಬಹಳಷ್ಟಿದೆ ಎನಿಸುತ್ತದೆ. ನಾನು ಕೆಲಸದ ಒತ್ತಡದಲ್ಲಿದ್ದಾಗ ದೂರವಾಣಿ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗದ ಸಂದರ್ಭಗಳಿವೆ. ಆದರೆ ಡಾ. ಕೋಲ್ಕಾರ್ ಅವರು ತಮ್ಮ ಕಾರ್ಯನಿರತ ವೇಳೆಯಲ್ಲಿಯೂ ತಾಳ್ಮೆಯಿಂದ ಸ್ಪಂದಿಸುವ ರೀತಿ ನನಗೆ ಮಾದರಿಯಾಗಿದೆ.
ಒಬ್ಬ ಸಂಶೋಧಕನಿಗೆ ವಿಷಯಜ್ಞಾನ ಎಷ್ಟು ಮುಖ್ಯವೋ, ಅದನ್ನು ಹಂಚಿಕೊಳ್ಳುವ ಉದಾರ ಮನಸ್ಸು ಮತ್ತು ತಾಳ್ಮೆಯೂ ಅಷ್ಟೇ ಮುಖ್ಯ. ಈ ಗುಣಗಳು ಡಾ. ಕೋಲ್ಕಾರ್ ಅವರಲ್ಲಿ ಹೇರಳವಾಗಿವೆ.
ಗಂಗಾವತಿಯಲ್ಲಿ ಕಡ್ಡಾಯ ಭೇಟಿಯ ಆತ್ಮೀಯತೆ
ನಮ್ಮ ಊರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಹಿರೇಕೊಟ್ನೆಕಲ್ ಗ್ರಾಮ. ಆಗಾಗ ಊರಿಗೆ ಹೋಗಿಬರುವ ಸಂದರ್ಭಗಳಲ್ಲಿ ಗಂಗಾವತಿ ನನಗೆ ಒಂದು ಕಡ್ಡಾಯ ತಂಗುದಾಣದಂತಿದೆ.
ಗಂಗಾವತಿಯ ಹಿರಿಯ ಗೆಳೆಯರು ಹಾಗೂ ವಿದ್ವಾಂಸರಾದ ಡಾ. ಜಾಜಿ ದೇವೇಂದ್ರಪ್ಪ, ಜನಕವಿ ರಮೇಶ ಗಬ್ಬೂರು, ಸಂಶೋಧಕ ಡಾ. ರವಿ ಚವ್ಹಾಣ, ಪ್ರಾಧ್ಯಾಪಕ ಬಸಪ್ಪ ನಾಗೋಲಿ ಮತ್ತು ಡಾ. ಶರಣಬಸಪ್ಪ ಕೋಲ್ಕಾರ್ ಅವರಲ್ಲಿ ಸಾಧ್ಯವಾದಷ್ಟು ಜನರನ್ನು ಭೇಟಿಯಾಗಿ ಮುಂದಿನ ಪ್ರಯಾಣ ಬೆಳೆಸುವುದು ನಮ್ಮ ರೂಢಿ.
ನನ್ನ ಗೆಳೆಯ ಆದೇಶ ಅವರೊಂದಿಗೆ ಊರಿಗೆ ಹೋಗುವಾಗ ಅಥವಾ ಮರಳಿ ಬರುವಾಗ ಇವರಲ್ಲಿ ಯಾರಾದರೂ ಸಮಯ ನೀಡಿದರೆ ಭೇಟಿಯಾಗುತ್ತೇವೆ. ಅದರಲ್ಲೂ ಡಾ. ಶರಣಬಸಪ್ಪ ಕೋಲ್ಕಾರ್ ಅವರ ಮನೆಗೆ ಹೋಗಿ ಅವರನ್ನು ಭೇಟಿಯಾಗಿ ಒಂದೆರಡು ಮಾತುಗಳನ್ನಾಡದೆ ನಮ್ಮ ಪ್ರಯಾಣ ಮುಂದುವರಿಯುವುದಿಲ್ಲ.
ಒಂದು ವೇಳೆ ಅವರು ಊರಿನಲ್ಲಿ ಇಲ್ಲದಿದ್ದರೂ ನಮ್ಮ ಪ್ರಯಾಣದ ಕುರಿತು ಅವರಿಗೆ ತಿಳಿಸಿ, ದೂರವಾಣಿಯಲ್ಲಿಯೇ ನಾಲ್ಕು ಮಾತುಗಳನ್ನಾಡಿ ಮುಂದೆ ಸಾಗುತ್ತೇವೆ. ಇದು ಕೇವಲ ಭೇಟಿಯಲ್ಲ; ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಆತ್ಮೀಯತೆಯ ಪ್ರತೀಕ.


ಗೌರವಧನಕ್ಕಿಂತ ಆತ್ಮೀಯತೆಗೆ ಬೆಲೆ ನೀಡುವ ವ್ಯಕ್ತಿತ್ವ


2017ರ ನವೆಂಬರ್ 30ರಂದು ಮಾನ್ವಿ ತಾಲ್ಲೂಕಿನ ಪೋತ್ನಾಳ್ ಗ್ರಾಮದಲ್ಲಿ ನನ್ನ ತಾಯಿಯ ನಿವೃತ್ತಿ ಕಾರ್ಯಕ್ರಮ ನಡೆಯಿತು. ಅವರು ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರಿಚಾರಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಆ ಸಂದರ್ಭದಲ್ಲಿ ರಾಯಚೂರಿನ ಖ್ಯಾತ ವಿದ್ವಾಂಸರಾದ ಡಾ. ಚನ್ನಬಸವಯ್ಯ ಹಿರೇಮಠ ಮತ್ತು ನಾನು ಜಂಟಿಯಾಗಿ ರಚಿಸಿದ್ದ ‘ಮಾನ್ವಿ ತಾಲೂಕಿನ ಇತಿಹಾಸ ಮತ್ತು ಸಂಸ್ಕೃತಿ’ ಹಾಗೂ ನನ್ನ ಪರಿಷ್ಕೃತ ದ್ವಿತೀಯ ಮುದ್ರಣದ ‘ಸಂಸಾರ ಸಗ್ಗ’ ಕೃತಿಗಳನ್ನು ಬಿಡುಗಡೆ ಮಾಡುವ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಡಾ. ಶರಣಬಸಪ್ಪ ಕೋಲ್ಕಾರ್ ಅವರೂ ಆಗಮಿಸಿ ನಮ್ಮ ಸಂತೋಷದಲ್ಲಿ ಭಾಗಿಯಾದರು. ನಮ್ಮ ಕುಟುಂಬದ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳುವಷ್ಟು ಆತ್ಮೀಯತೆ ಬೆಳೆಸಿಕೊಂಡಿರುವುದು ಅವರೊಂದಿಗಿನ ಬಾಂಧವ್ಯದ ವಿಶೇಷತೆ.
ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ನಮ್ಮ ಯಾವುದೇ ಕಾರ್ಯಕ್ರಮಗಳಿಗೆ ಬಂದಾಗ ಅವರು ಗೌರವಧನ ಸ್ವೀಕರಿಸುವುದಿಲ್ಲ. ಒತ್ತಾಯಪೂರ್ವಕವಾಗಿ ನೀಡಲು ಮುಂದಾದರೂ, “ನಾನು ಹೊರಗಿನವನೇ?” ಎಂದು ಪ್ರೀತಿಯಿಂದ ನಿರಾಕರಿಸಿ ಬರಿಗೈಯಲ್ಲಿ ಮರಳುತ್ತಾರೆ.
ಇಂತಹ ನಿಸ್ವಾರ್ಥ ಮನೋಭಾವ ಮತ್ತು ಆತ್ಮೀಯತೆ ಇಂದಿನ ದಿನಗಳಲ್ಲಿ ಅಪರೂಪವೆಂದೇ ಹೇಳಬೇಕು.
ನನ್ನ ಬದುಕಿಗೆ ಹೊಸ ಅವಕಾಶ ಕಲ್ಪಿಸಿದ ಮಾರ್ಗದರ್ಶಕರು
ಡಾ. ಶರಣಬಸಪ್ಪ ಕೋಲ್ಕಾರ್ ಅವರು ನನಗೆ ನೀಡಿದ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಗ್ಯಾಸೆಟಿಯರ್ ಇಲಾಖೆಯ ಮೂಲಕ ‘ಕೊಪ್ಪಳ ತಾಲ್ಲೂಕಿನ ಗ್ಯಾಸೆಟಿಯರ್’ ರಚಿಸುವ ಅವಕಾಶ ಕಲ್ಪಿಸಿದ್ದು ಪ್ರಮುಖವಾದುದು.
ಅವರ ಸಹಾಯ, ಸಹಕಾರ ಮತ್ತು ಮಾರ್ಗದರ್ಶನದಿಂದಲೇ ಈ ಮಹತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಗ್ರಂಥ ರಚಿಸಿ ಇಲಾಖೆಗೆ ಸಲ್ಲಿಸಲು ಸಾಧ್ಯವಾಯಿತು. ನಂತರ ಈ ಗ್ರಂಥ ಪ್ರಕಟಗೊಂಡು ನನಗೆ ಉತ್ತಮ ಹೆಸರು ತಂದುಕೊಟ್ಟಿತು. ಇಲಾಖೆಯಿಂದ ಗೌರವಧನವೂ ದೊರೆಯಿತು.
ನನ್ನ ಸಂಶೋಧನಾ ಬದುಕಿನಲ್ಲಿ ಹೊಸ ಅವಕಾಶದ ಬಾಗಿಲು ತೆರೆದ ಈ ಕಾರ್ಯಕ್ಕೆ ಡಾ. ಕೋಲ್ಕಾರ್ ಅವರ ಕೊಡುಗೆ ಅಪಾರ. ಸಹಾಯ ಮಾಡಿದವರನ್ನು, ಅವಕಾಶ ಕಲ್ಪಿಸಿದವರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ.
ಡಾ. ಕೋಲ್ಕಾರ್ ಅವರು ಗಂಗಾವತಿ ತಾಲ್ಲೂಕಿನ ಗ್ಯಾಸೆಟಿಯರ್ ರಚಿಸಿದ್ದಾರೆ. ಡಾ. ರವಿ ಚವ್ಹಾಣ ಅವರು ಕುಷ್ಟಗಿ ತಾಲ್ಲೂಕಿನ ಗ್ಯಾಸೆಟಿಯರ್ ರಚಿಸಿದ್ದಾರೆ. ಡಾ. ಶರಣಬಸಪ್ಪ ಕೋಲ್ಕಾರ್ ಮತ್ತು ಡಾ. ರವಿ ಚವ್ಹಾಣ ಅವರು ಜಂಟಿಯಾಗಿ ಯಲಬುರ್ಗಾ ತಾಲ್ಲೂಕಿನ ಗ್ಯಾಸೆಟಿಯರ್ ರಚಿಸಿದ್ದಾರೆ.
ಈ ರೀತಿಯಾಗಿ ಕೊಪ್ಪಳ ಜಿಲ್ಲೆಯ ವಿವಿಧ ತಾಲ್ಲೂಕುಗಳ ಇತಿಹಾಸ, ಭೌಗೋಳಿಕತೆ, ಸಂಸ್ಕೃತಿ, ಸಮಾಜ, ಕಲೆ, ಸಾಹಿತ್ಯ ಮತ್ತು ಪರಂಪರೆಯನ್ನು ದಾಖಲಿಸಿರುವ ಈ ನಾಲ್ಕು ಗ್ಯಾಸೆಟಿಯರ್‌ಗಳು ಜಿಲ್ಲೆಯ ಅಧ್ಯಯನಕ್ಕೆ ಮಹತ್ವದ ಆಕರ ಗ್ರಂಥಗಳಾಗಿವೆ.
ಸಂಶೋಧನಾ ಕೃತಿಗಳ ಮೂಲಕ ಇತಿಹಾಸದ ದಾಖಲೀಕರಣ
ಡಾ. ಶರಣಬಸಪ್ಪ ಕೋಲ್ಕಾರ್ ಅವರು ಹಲವು ಮಹತ್ವದ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ‘ಶಿಲಾಯುಗದ ಗವಿಚಿತ್ರಗಳು’, ‘ಪ್ರಾಗ್ಚಾರಿತ್ರಿಕ ಶಿಲಾ ಚಿತ್ರಕಲೆ’, ‘ಕೊಪ್ಪಳ-ಹಂಪಿ ಪ್ರದೇಶದ ಚರಿತ್ರೆ ಮತ್ತು ಪುರಾತತ್ವ’, ‘ಕೊಪ್ಪಳ ಜಿಲ್ಲೆಯ ಪ್ರಾಗೈತಿಹಾಸಿಕ ಕಾಲದ ಕಲೆ’, ‘ವಿಜಯನಗರ ಪರಿಸರ: ಚರಿತ್ರೆ, ಕಲೆ ಮತ್ತು ಸಂಸ್ಕೃತಿ’, ‘ವಿಜಯನಗರ ಮಾತೃಸ್ಥಾನ ಆನೆಗೊಂದಿ’, ‘ಭವ್ಯ ಪರಂಪರೆಯ ತಾಣ ಆನೆಗೊಂದಿ’, ‘ಆನೆಗೊಂದಿ, ಹಿರೇಜಂತಗಲ್ ಇತಿಹಾಸ-ವಾಸ್ತುಶಿಲ್ಪ ಕಲೆ’, ‘ಗಂಗಾವತಿ ತಾಲ್ಲೂಕು ದರ್ಶನ’, ‘ಗಂಗಾವತಿ ತಾಲ್ಲೂಕಿನ ಗ್ಯಾಸೆಟಿಯರ್’, ‘ಯಲಬುರ್ಗಾ ತಾಲ್ಲೂಕಿನ ಗ್ಯಾಸೆಟಿಯರ್’, ‘ಕಲ್ಯಾಣ ಕರ್ನಾಟಕ: ಪ್ರಾಗಿತಿಹಾಸ ಮತ್ತು ಆದಿಮ ಸಂಸ್ಕೃತಿ’, ‘ಕೃಷ್ಣದೇವರಾಯ ಸಮಾಧಿ’ ಹಾಗೂ ‘ಕೆಂಪೇಗೌಡ ಬಂಧನದಲ್ಲಿದ್ದ ಸೆರೆಮನೆ’ ಪ್ರಮುಖವಾಗಿವೆ.
ಈ ಎಲ್ಲ ಕೃತಿಗಳು ನನ್ನ ಮನೆಯ ಗ್ರಂಥಾಲಯದಲ್ಲಿವೆ. ಅವುಗಳಲ್ಲಿ ಬಹುತೇಕ ಕೃತಿಗಳು ನನ್ನ ವೈಯಕ್ತಿಕ ಅಧ್ಯಯನಕ್ಕೆ ಮಾತ್ರವಲ್ಲದೆ, ಕೊಪ್ಪಳ ಜಿಲ್ಲೆಯ ಇತಿಹಾಸ, ಸಂಸ್ಕೃತಿ, ಕಲೆ, ವಾಸ್ತುಶಿಲ್ಪ ಮತ್ತು ಪುರಾತತ್ವದ ಕುರಿತು ಅಧ್ಯಯನ ಮಾಡುವ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಆಸಕ್ತರಿಗೆ ಅತ್ಯಂತ ಉಪಯುಕ್ತವಾದ ಆಕರ ಗ್ರಂಥಗಳಾಗಿವೆ.
ಡಾ. ಕೋಲ್ಕಾರ್ ಅವರು ನನ್ನ ಅಧ್ಯಯನಕ್ಕೆ ಮಾರ್ಗದರ್ಶಕರಾಗಿರುವಂತೆಯೇ ಅವರ ಕೃತಿಗಳೂ ನನ್ನ ಬರವಣಿಗೆಗೆ ಮಾರ್ಗದರ್ಶಕವಾಗಿವೆ. ಅವರ ಕೆಲವು ಕೃತಿಗಳನ್ನು ಪರಿಚಯಿಸಿ ಪತ್ರಿಕೆಗಳಿಗೆ ಲೇಖನಗಳನ್ನು ಕಳುಹಿಸಿದ್ದೇನೆ. ಏಕೆಂದರೆ ಈ ಕೃತಿಗಳು ನಮ್ಮ ಭಾಗದ ಅಪಾರ ಐತಿಹಾಸಿಕ ಸಂಪತ್ತು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುತ್ತವೆ.
ಒಂದು ಪ್ರದೇಶದ ಇತಿಹಾಸವನ್ನು ಅರಿಯಬೇಕಾದರೆ ಅಲ್ಲಿನ ಶಾಸನಗಳು, ಪುರಾತತ್ವ ಅವಶೇಷಗಳು, ವಾಸ್ತುಶಿಲ್ಪ, ಶಿಲಾಯುಗದ ನೆಲೆಗಳು ಮತ್ತು ಜನಜೀವನದ ಸಾಂಸ್ಕೃತಿಕ ನೆಲೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಈ ನಿಟ್ಟಿನಲ್ಲಿ ಡಾ. ಕೋಲ್ಕಾರ್ ಅವರ ಸಂಶೋಧನೆಗಳು ಮಹತ್ವದ ದಾಖಲೆಗಳಾಗಿವೆ.
ಮಾರ್ಗದರ್ಶಕರಿಗೆ ಕೃತಜ್ಞತೆಯ ನಮನ
ನನ್ನ ದೃಷ್ಟಿಯಲ್ಲಿ ಡಾ. ಶರಣಬಸಪ್ಪ ಕೋಲ್ಕಾರ್ ಅವರು ಕೇವಲ ಒಬ್ಬ ಇತಿಹಾಸ ಸಂಶೋಧಕರಲ್ಲ. ಅವರು ಜ್ಞಾನವನ್ನು ಹಂಚಿಕೊಳ್ಳುವ ಉದಾರ ಮನಸ್ಸಿನ ವಿದ್ವಾಂಸರು, ಸಂಶೋಧಕರಿಗೆ ಪ್ರೋತ್ಸಾಹ ನೀಡುವ ಮಾರ್ಗದರ್ಶಕರು, ಸರಳತೆ ಮತ್ತು ಸೌಜನ್ಯಕ್ಕೆ ಮಾದರಿಯಾದ ವ್ಯಕ್ತಿತ್ವ.
ನನ್ನ ಸಂಶೋಧನಾ ಬದುಕಿನ ಆರಂಭದ ದಿನಗಳಲ್ಲಿ ಪರಿಚಯವಾದ ಅವರು, ಇಂದು ನನ್ನ ಅಧ್ಯಯನದ ಪ್ರತಿಯೊಂದು ಹಂತದಲ್ಲಿಯೂ ಪ್ರೇರಣೆಯಾಗಿ ನಿಂತಿದ್ದಾರೆ. ನನ್ನ ಬರವಣಿಗೆಯಲ್ಲಿ, ಸಂಶೋಧನೆಯಲ್ಲಿ ಮತ್ತು ಇತಿಹಾಸದ ಅರಿವಿನಲ್ಲಿ ಅವರ ಮಾರ್ಗದರ್ಶನದ ಪಾಲು ದೊಡ್ಡದಿದೆ.
ಕಾರಟಗಿಯಲ್ಲಿ ನಡೆಯಲಿರುವ 15ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅವರು ಆಯ್ಕೆಯಾಗಿರುವುದು ಅವರ ಸಾಹಿತ್ಯಿಕ, ಸಂಶೋಧನಾ ಹಾಗೂ ಸಾಂಸ್ಕೃತಿಕ ಕೊಡುಗೆಗಳಿಗೆ ಸಂದ ಗೌರವವೆಂದು ಭಾವಿಸುತ್ತೇನೆ.
ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವು ಕೇವಲ ವ್ಯಕ್ತಿಯ ಗೌರವವಲ್ಲ; ಅವರು ಪ್ರತಿನಿಧಿಸುವ ಅಧ್ಯಯನ ಪರಂಪರೆ, ಸಂಶೋಧನಾ ಶಿಸ್ತು ಮತ್ತು ಜ್ಞಾನಸಾಧನೆಗೆ ದೊರೆಯುವ ಮನ್ನಣೆಯೂ ಹೌದು.
ಅವರಿಂದ ಇನ್ನಷ್ಟು ಸಂಶೋಧನಾ ಕೃತಿಗಳು ಹೊರಬರಲಿ. ಕೊಪ್ಪಳ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವದ ಕುರಿತು ಹೊಸ ತಲೆಮಾರಿನ ಸಂಶೋಧಕರಿಗೆ ಅವರ ಮಾರ್ಗದರ್ಶನ ದೊರೆಯಲಿ. ಅವರ ಅಧ್ಯಯನದ ಬೆಳಕು ಮುಂದಿನ ಪೀಳಿಗೆಗೂ ದಾರಿದೀಪವಾಗಲಿ ಎಂಬುದು ನನ್ನ ಆಶಯ.
ನನ್ನ ಪಾಲಿಗೆ ಅವರು ಸದಾ ಗೌರವದ ಸ್ಥಾನದಲ್ಲಿರುವವರು. ಅವರೊಂದಿಗಿನ ಒಡನಾಟ, ಮಾರ್ಗದರ್ಶನ ಮತ್ತು ಪ್ರೀತಿ ನನ್ನ ಸಂಶೋಧನಾ ಬದುಕಿನ ಅಮೂಲ್ಯ ಆಸ್ತಿ


ಆದ್ದರಿಂದಲೇ ಹೆಮ್ಮೆಯಿಂದ ಹೇಳುತ್ತೇನೆ: ಡಾ. ಶರಣಬಸಪ್ಪ ಕೋಲ್ಕಾರ್ ಅವರು ನನ್ನ ಸ್ನೇಹಿತರಷ್ಟೇ ಅಲ್ಲ, ನನ್ನ ಸಂಶೋಧನಾ ಬದುಕಿನ ಮಾರ್ಗದರ್ಶಕರು!


ಡಾ ಸಿದ್ದಲಿಂಗಪ್ಪ ಕೊಟ್ನೆಕಲ್
ಹಿರಿಯ ಶ್ರೇಣಿ ಕನ್ನಡ. ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ – 583231.
ಮೊ: 9448570340
E-mail: skotnekal@gmail.com

Total Views: 0
Share This Article
Leave a Comment