ಎಸ್.ಎಸ್.ಆರ್ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರು ನೋಂದಾಯಿಸಲು ಅವಕಾಶ

H.Mallikarjun
H.Mallikarjun - Kalyanasiri
4 Min Read
ಜಾಹೀರಾತು
Opportunity to register the names of eligible voters during the SSR process




ಎಸ್.ಎಸ್.ಆರ್ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರು ನೋಂದಾಯಿಸಲು ಅವಕಾಶ

ಜಾಹೀರಾತು


ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2027 ಗೆ ಎಲ್ಲಾ ರಾಜಕೀಯ ಪಕ್ಷಗಳ ಸಹಕಾರ ಅತ್ಯಗತ್ಯ: ಸಿದ್ರಾಮೇಶ್ವರ


ಕೊಪ್ಪಳ, ನವೆಂಬರ್ 19 : ಭಾರತ ಚುನಾವಣಾ ಆಯೋಗವು 2027ರ ಜನವರಿ 1ಕ್ಕೆ ಅನ್ವಯವಾಗುವಂತೆ `ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2027′ (ಎಸ್.ಎಸ್.ಆರ್) ವೇಳಾಪಟ್ಟಿಯನ್ನು ನಿಗದಿಪಡಿಸಿ ಪರಿಷ್ಕರಣಾ ಕಾರ್ಯದಲ್ಲಿ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ನಿರ್ದೇಶನ ನೀಡಿದ್ದು, ಈ ಪ್ರಕ್ರಿಯೆಯು ಪಾರದರ್ಶಕವಾಗಿ ಹಾಗೂ ಯಶಸ್ವಿಯಾಗಿ ನಡೆಯಲು ಎಲ್ಲಾ ರಾಜಕೀಯ ಪಕ್ಷಗಳ ಸಹಕಾರ ಅತ್ಯಗತ್ಯ ಎಂದು ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ಹೇಳಿದರು.
ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2027ರ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನವೆಂಬರ್ 19ರಂದು ಜಿಲ್ಲೆಯ ಮಾನ್ಯತೆ ಪಡೆದ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
*ಪರಿಷ್ಕರಣೆಯ ಪ್ರಮುಖ ವೇಳಾಪಟ್ಟಿ:* ಭಾರತ ಚುನಾವಣಾ ಆಯೋಗವು ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಪರಿಷ್ಕರಣೆ ಕಾರ್ಯ ನಡೆಯಲಿದ್ದು, ನವೆಂಬರ್ 23 ರೊಳಗೆ ಮತಗಟ್ಟೆಗಳ ರ‍್ಯಾಷನಲೈಜೇಷನ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಡಿಸೆಂಬರ್ 1 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಡಿಸೆಂಬರ್ 1 ರಿಂದ ಡಿಸೆಂಬರ್ 31 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು, ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಹೆಸರು ತೆಗೆದುಹಾಕಲು ಅವಕಾಶವಿರುತ್ತದೆ. ಸಲ್ಲಿಕೆಯಾದ ಅರ್ಜಿಗಳನ್ನು 2027ರ ಜನವರಿ 14 ರೊಳಗೆ ವಿಲೇವಾರಿ ಮಾಡಿ, 2027ರ ಜನವರಿ 20 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
*ಜಿಲ್ಲೆಯ ಮತದಾರರ ವಿವರ ಹಾಗೂ 2 ಹೊಸ ಮತಗಟ್ಟೆಗಳ ಸೃಜನೆ:* 2026ರ ಅಕ್ಟೋಬರ್ 27ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯನ್ವಯ ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ 5,27,459 ಪುರುಷರು, 5,31,641 ಮಹಿಳೆಯರು ಹಾಗೂ 64 ಇತರೆ ಮತದಾರರು ಸೇರಿ ಒಟ್ಟು 10,59,164 ಮತದಾರರಿದ್ದಾರೆ. ಜಿಲ್ಲೆಯ 60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 2,16,911 ಮತದಾರರಿದ್ದು, 282 ಮತಗಟ್ಟೆಗಳಿವೆ. ಅದೇ ರೀತಿ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 2,11,921 ಮತದಾರರು ಮತ್ತು 277 ಮತಗಟ್ಟೆಗಳು, ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 1,89,159 ಮತದಾರರು ಮತ್ತು 240 ಮತಗಟ್ಟೆ, ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 2,10,310 ಮತದಾರರು ಮತ್ತು 259 ಮತಗಟ್ಟೆ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 2,30,863 ಮತದಾರರಿದ್ದು, 294 ಮತಗಟ್ಟೆಗಳಿವೆ ಎಂದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ಮತಗಟ್ಟೆಯಲ್ಲಿ ಗರಿಷ್ಠ 1200 ಮತದಾರರು ಮಾತ್ರ ಇರಬೇಕು. ಈ ಹಿನ್ನೆಲೆಯಲ್ಲಿ 1200 ಕ್ಕಿಂತ ಹೆಚ್ಚು ಮತದಾರರಿರುವ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮೆಣಸಗೇರಾ ಮತಗಟ್ಟೆಯಲ್ಲಿ 1,236 ಮತದಾರರು ಹಾಗೂ ಟೋಣಸಿಹಾಳ ಮತಗಟ್ಟೆಯಲ್ಲಿ 1253 ಮತದಾರರಿದ್ದು, ಮತಗಟ್ಟೆಗಳನ್ನು ವಿಭಜಿಸಿ ಪಕ್ಕದ ಸುಸಜ್ಜಿತ ಶಾಲಾ ಕಟ್ಟಡಗಳಲ್ಲಿ 2 ಹೊಸ ಮತಗಟ್ಟೆಗಳನ್ನು ಸೃಜಿಸಲಾಗುತ್ತಿದೆ. ಇದರಿಂದ ಜಿಲ್ಲೆಯ ಒಟ್ಟು ಮತಗಟ್ಟೆಗಳ ಸಂಖ್ಯೆ 1352 ರಿಂದ 1354 ಕ್ಕೆ ಏರಿಕೆಯಾಗಲಿದೆ ಎಂದು ಅವರು ಹೇಳಿದರು.
*ಯುವ ಹಾಗೂ ಮಹಿಳಾ ಮತದಾರರ ನೋಂದಣಿಗೆ ವಿಶೇಷ ಒತ್ತು:* ದಿನಾಂಕ 01.01.2027ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವಕ-ಯುವತಿಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಹರಾಗಿರುತ್ತಾರೆ. ಅಲ್ಲದೆ, 01.04.2027, 01.07.2027 ಹಾಗೂ 01.10.2027 ರಂದು 18 ವರ್ಷ ಪೂರ್ಣಗೊಳ್ಳುವವರೂ ಸಹ ಮುಂಗಡವಾಗಿ ಅರ್ಜಿ ಸಲ್ಲಿಸಬಹುದು. ಹೊಸ ಸೇರ್ಪಡೆಗೆ ನಮೂನೆ-6, ಸಾಗರೋತ್ತರ ಮತದಾರರಿಗೆ ನಮೂನೆ-6ಎ, ಹೆಸರು ತೆಗೆದುಹಾಕಲು ನಮೂನೆ-7 ಹಾಗೂ ತಿದ್ದುಪಡಿ ಅಥವಾ ಸ್ಥಳ ಬದಲಾವಣೆಗೆ ನಮೂನೆ-8ರ ಮೂಲಕ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರು ಆನ್‌ಲೈನ್‌ನಲ್ಲಿ ಇಸಿಐ ನೆಟ್ ಆ್ಯಪ್ ಅಥವಾ https://voters.eci.gov.in ಜಾಲತಾಣದ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.

*ಜನನಿಬಿಡ ಪ್ರದೇಶಗಳಲ್ಲಿ ಸ್ವೀಪ್ ಜಾಗೃತಿ ಮತ್ತು ವಿಶೇಷ ಆಂದೋಲನ:* ಮತದಾರರ ಪಟ್ಟಿಯಿಂದ ಯಾರೂ ಹೊರಗುಳಿಯದಂತೆ ನೋಡಿಕೊಳ್ಳಲು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ವಾರದ ಸಂತೆಗಳಂತಹ ಜನನಿಬಿಡ ಸ್ಥಳಗಳಲ್ಲಿ ಸ್ವೀಪ್ ಚಟುವಟಿಕೆಗಳ ಮೂಲಕ ವ್ಯಾಪಕ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
*ರಾಜಕೀಯ ಪಕ್ಷಗಳಿಗೆ ಸೂಚನೆ:* ಜಿಲ್ಲೆಯಲ್ಲಿ 1352 ಬಿಎಲ್‌ಒ ಮತ್ತು 153 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ವಿವಿಧ ರಾಜಕೀಯ ಪಕ್ಷಗಳಿಂದ ಒಟ್ಟು 2730 ಬೂತ್ ಮಟ್ಟದ ಏಜೆಂಟರು (ಬಿಎಲ್‌ಎ) ನೇಮಕಗೊಂಡಿದ್ದು, ಉಳಿದ ಮತಗಟ್ಟೆಗಳಿಗೂ ಪಕ್ಷಗಳು ತಮ್ಮ ಏಜೆಂಟರನ್ನು ನೇಮಿಸಿ ಪಟ್ಟಿಯನ್ನು ನೀಡಬೇಕು ಹಾಗೂ ಅವರು ಸಕ್ರಿಯವಾಗಿ ಪಾಲ್ಗೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಬಿಎಲ್‌ಎಗಳು ದಿನಕ್ಕೆ ಗರಿಷ್ಠ 10 ಅರ್ಜಿಗಳನ್ನು ಸಲ್ಲಿಸಬಹುದು. ಒಂದು ವೇಳೆ ಹಕ್ಕು ಮತ್ತು ಆಕ್ಷೇಪಣೆ ಅವಧಿಯಲ್ಲಿ 30ಕ್ಕಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾದರೆ ಅಥವಾ ಮತಗಟ್ಟೆಯಲ್ಲಿ ಶೇ. 2ಕ್ಕಿಂತ ಹೆಚ್ಚು ಮತದಾರರು ಕೈಬಿಟ್ಟು ಹೋಗಿದ್ದರೆ ಮತದಾರರ ನೋಂದಣಾಧಿಕಾರಿಗಳು ಮರುಪರಿಶೀಲನೆ ನಡೆಸಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೃಷ್ಣಪ್ಪ ಎಂ. ಇಟ್ಟಂಗಿ, ಸುನೀಲ್ ಸಿ. ಹೆಸರೂರು, ಮಹಬೂಬ್ ಪಾಶಾ ಜಮಖಾನದಾರ, ಚುನಾವಣಾ ಶಾಖೆಯ ಶಿರಸ್ತೆದಾರರಾದ ಪಿ.ನಾಗರಾಜ, ಜಿಲ್ಲಾ ವಾರ್ತಾಧಿಕಾರಿಗಳಾದ ಗವಿಸಿದ್ದಪ್ಪ ಹೊಸಮನಿ ಸೇರಿದಂತೆ ಜಿಲ್ಲಾ ಚುನಾವಣಾ ಶಾಖೆ ಮತ್ತು ತಹಶೀಲ್ದಾರ ಕಚೇರಿಯ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Total Views: 0
Share This Article
Leave a Comment