ಬೆಂಗಳೂರಿನಲ್ಲಿ ಐಸಿಎಸ್‌ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆ ಕಾರ್ಯತಂತ್ರದ ಹೂಡಿಕೆಗಳ ಮೂಲಕ ವಿಕಸಿತ ಭಾರತ ನಿರ್ಮಾಣಕ್ಕೆ ಒತ್ತು

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

ICSI Invest India Summit organized in Bangalore, focusing on building a developed India through strategic investments

ಬೆಂಗಳೂರಿನಲ್ಲಿ ಐಸಿಎಸ್‌ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆ
ಕಾರ್ಯತಂತ್ರದ ಹೂಡಿಕೆಗಳ ಮೂಲಕ ವಿಕಸಿತ ಭಾರತ ನಿರ್ಮಾಣಕ್ಕೆ ಒತ್ತು

ಬೆಂಗಳೂರು, ಅ. 17: ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ (ಐಸಿಎಸ್‌ಐ)ಯಿಂದ ‘ಕಾರ್ಯತಂತ್ರದ ಹೂಡಿಕೆಗಳ ಮೂಲಕ ವಿಕಸಿತ ಭಾರತ ನಿರ್ಮಾಣ’ ಎಂಬ ವಿಷಯದಡಿ ಐಸಿಎಸ್‌ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆಯನ್ನು ಬೆಂಗಳೂರಿನಲ್ಲಿಂದು ಆಯೋಜಿಸಲಾಗಿತ್ತು.
ಇನ್ಫೋಸಿಸ್ ಮತ್ತು ಆಕ್ಸಿಲರ್ ವೆಂಚರ್ಸ್‌ನ ಸಹಸಂಸ್ಥಾಪಕ ಹಾಗೂ ಬೆಂಗಳೂರಿನ ಇನ್ನೋವೇಷನ್ಸ್ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷರಾದ ಎಸ್.ಡಿ. ಶಿಬುಲಾಲ್ ಅವರು ಶೃಂಗಸಭೆಗೆ ಚಾಲನೆ ನೀಡಿದರು.
ಐಸಿಎಸ್‌ಐನ ಬೆಂಗಳೂರು ಘಟಕದ ಆತಿಥ್ಯದಲ್ಲಿ ನಡೆದ ಈ ಶೃಂಗಸಭೆಯಲ್ಲಿ ಸ್ಟಾರ್ಟ್‌ಅಪ್‌ಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ), ಯೂನಿಕಾರ್ನ್ ಕಂಪನಿಗಳು, ಕಾರ್ಪೊರೇಟ್ ಸಂಸ್ಥೆಗಳು, ವೆಂಚರ್ ಕ್ಯಾಪಿಟಲ್ ಫಂಡ್‌ಗಳು, ಖಾಸಗಿ ಈಕ್ವಿಟಿ ನಿಧಿಗಳು, ಏಂಜೆಲ್ ಹೂಡಿಕೆದಾರರು, ಪಿಂಚಣಿ ನಿಧಿಗಳು, ಪರ್ಯಾಯ ಹೂಡಿಕೆ ನಿಧಿಗಳು, ಸಾಂಸ್ಥಿಕ ಹೂಡಿಕೆದಾರರು, ವಿಮಾ ಕಂಪನಿಗಳು, ಆಸ್ತಿ ನಿರ್ವಹಣಾ ಕಂಪನಿಗಳು, ಉದ್ಯಮಶೀಲತೆಯ ಬೆಳವಣಿಗೆಗೆ ಪೂರಕವಾದ ಸಂಸ್ಥೆಗಳು, ಶಿಕ್ಷಣ ತಜ್ಞರು, ಮಾರ್ಗದರ್ಶಕರು ಹಾಗೂ ಉದ್ಯಮ ಕ್ಷೇತ್ರದ ತಜ್ಞರು ಭಾಗವಹಿಸಿದ್ದರು.
ಭಾರತದ ಆರ್ಥಿಕ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಸಂವಾದಕ್ಕೆ ವೇದಿಕೆ ಕಲ್ಪಿಸುವುದು, ನಾವೀನ್ಯತೆಗೆ ಉತ್ತೇಜನ ನೀಡುವುದು ಮತ್ತು ಪಾಲುದಾರಿಕೆಯನ್ನು ಬಲಪಡಿಸುವುದು ಶೃಂಗಸಭೆಯ ಪ್ರಮುಖ ಉದ್ದೇಶವಾಗಿತ್ತು.
ಐಸಿಎಸ್‌ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಉದ್ಘಾಟಿಸಿ ಮಾತನಾಡಿದ ಎಸ್.ಡಿ. ಶಿಬುಲಾಲ್, “ಬಂಡವಾಳ ಮುಖ್ಯ. ಆದರೆ, ಆ ಹೂಡಿಕೆಯಿಂದ ನಾವು ಏನನ್ನು ನಿರ್ಮಿಸುತ್ತೇವೆ ಎಂಬುದು ಅದಕ್ಕಿಂತಲೂ ಹೆಚ್ಚು ಮಹತ್ವದ್ದಾಗಿದೆ” ಎಂದು ಅಭಿಪ್ರಾಯಪಟ್ಟರು.
ಮುಂದುವರಿದು ಮಾತನಾಡಿದ ಅವರು, “ಉನ್ನತ ಮಟ್ಟದ ಕಾರ್ಪೊರೇಟ್ ಆಡಳಿತ ವ್ಯವಸ್ಥೆಯನ್ನು ಅನುಸರಿಸದೆ ಹಾಗೂ ಪಾಲುದಾರರೊಂದಿಗೆ ಗರಿಷ್ಠ ವಿಶ್ವಾಸವನ್ನು ಬೆಳೆಸಿಕೊಳ್ಳದೆ ಯಾವುದೇ ಕಂಪನಿಯೂ ದೀರ್ಘಕಾಲ ಉಳಿಯಲು ಸಾಧ್ಯವಿಲ್ಲ” ಎಂದರು.
ಪಾಲುದಾರರ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ವೃತ್ತಿಪರರು ಕಂಪನಿಗಳ ಆಡಳಿತ ಮಂಡಳಿಯಲ್ಲಿ ಸೂಕ್ತ ಮಾರ್ಗದರ್ಶನ ನೀಡುವ ಧ್ವನಿಯಾಗಬೇಕು ಎಂದು ಅವರು ಕರೆ ನೀಡಿದರು.
ಭಾರತದಲ್ಲಿ ವೇಗವಾಗಿ ಬದಲಾಗುತ್ತಿರುವ ಹೂಡಿಕೆ ವಲಯದ ಮೇಲೆ ಬೆಳಕು ಚೆಲ್ಲಿದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಆನ್‌ಲೈನ್ ಮತ್ತು ನೇರವಾಗಿ ಭಾಗವಹಿಸಿದವರೂ ಸೇರಿದಂತೆ ಸುಮಾರು 500 ಮಂದಿ ಪಾಲ್ಗೊಂಡಿದ್ದರು. ಸ್ಟಾರ್ಟ್‌ಅಪ್‌ಗಳು ಯಶಸ್ವಿಯಾಗಿ ಬೆಳವಣಿಗೆ ಹೊಂದಿ ದೊಡ್ಡ ಉದ್ಯಮಗಳಾಗಿ ರೂಪುಗೊಳ್ಳುವಲ್ಲಿ ಉತ್ತಮ ಆಡಳಿತ ವ್ಯವಸ್ಥೆಯು ವಹಿಸುವ ನಿರ್ಣಾಯಕ ಪಾತ್ರವನ್ನು ಈ ಶೃಂಗಸಭೆ ಪ್ರಮುಖವಾಗಿ ಬಿಂಬಿಸಿತು.
ಶೃಂಗಸಭೆಯ ಭಾಗವಾಗಿ ‘ಹೂಡಿಕೆದಾರರು ಮತ್ತು ಯಶಸ್ವಿ ಸ್ಟಾರ್ಟ್‌ಅಪ್‌ಗಳ ಪ್ರಾಯೋಗಿಕ ಒಳನೋಟಗಳು’ ಎಂಬ ವಿಷಯದ ಕುರಿತು ಸಂವಾದಾತ್ಮಕ ಅಧಿವೇಶನವನ್ನೂ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರಿಗೆ ಕೃತಜ್ಞತೆ ಸಲ್ಲಿಸಿದ ಐಸಿಎಸ್‌ಐ ಕಾರ್ಯದರ್ಶಿ ಸಿಎಸ್ ಆಶೀಶ್ ಮೋಹನ್ ಅವರು, ಕಾರ್ಯಕ್ರಮದ ಆಶಯವನ್ನು ಪ್ರತಿಬಿಂಬಿಸುತ್ತಾ, “ಹೂಡಿಕೆ ಎಂದರೆ ಕೇವಲ ಬಂಡವಾಳವಲ್ಲ; ಅದು ಕನಸುಗಳು ಮತ್ತು ಆಲೋಚನೆಗಳಿಗೆ ಜೀವ ತುಂಬುವ, ತಾಂತ್ರಿಕ ಪ್ರಗತಿಗೆ ದಾರಿ ಮಾಡಿಕೊಡುವ ಹಾಗೂ ಸುಸ್ಥಿರ ಬೆಳವಣಿಗೆಯ ಮೂಲಕ ಬಲಿಷ್ಠ ವಿಕಸಿತ ಭಾರತ ನಿರ್ಮಾಣಕ್ಕೆ ನೆರವಾಗುವ ವೇಗವರ್ಧಕವಾಗಿದೆ” ಎಂದು ಹೇಳಿದರು.
ಐಸಿಎಸ್‌ಐ ಬೆಂಗಳೂರು ಘಟಕದ ಅಧ್ಯಕ್ಷ ಸಿಎಸ್ ವಿಶ್ವಾಸ್ ಹೆಗ್ಡೆ ಅವರು ಕೂಡ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಜಾಹೀರಾತು
Total Views: 0
ಜಾಹೀರಾತು
Share This Article