Progress Review Meeting: Resolve the land acquisition issues of development projects quickly: District Commissioner Dr. Suresh Itnal

ಪ್ರಗತಿ ಪರಿಶೀಲನಾ ಸಭೆ:ಅಭಿವೃದ್ಧಿ ಯೋಜನೆಗಳ ಭೂಸ್ವಾಧೀನ ಸಮಸ್ಯೆ ಶೀಘ್ರ ಇತ್ಯರ್ಥ ಪಡಿಸಿ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ

ಕೊಪ್ಪಳ ಅಕ್ಟೋಬರ್ 17 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಇಂಧನ ಹಾಗೂ ನೀರಾವರಿ ಸೇರಿದಂತೆ ಪ್ರಮುಖ ಸಾರ್ವಜನಿಕ ಕಾಮಗಾರಿಗಳಿಗೆ ಸಂಬMಧಿಸಿದ ಬಾಕಿ ಭೂಸ್ವಾಧೀನ ಪ್ರಕ್ರಿಯೆ, ಪರಿಹಾರ ವಿತರಣೆ ಮತ್ತು ತಾಂತ್ರಿಕ ತೊಡಕುಗಳನ್ನು ಯಾವುದೇ ವಿಳಂಬವಿಲ್ಲದೆ ಶೀಘ್ರ ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿದ್ಯುತ್, ನೀರಾವರಿ, ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಕಾಮಗಾರಿಗಳಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗಳಲ್ಲಿನ ತೊಡಕುಗಳು ಹಾಗೂ ಬಾಕಿ ಉಳಿದಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಅಕ್ಟೋಬರ್ 16ರಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ವಾಹನ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೇವಲ ಇಂದಿನ ಅಗತ್ಯವಷ್ಟೇ ಅಲ್ಲದೆ ಮುಂದಿನ ಹತ್ತಾರು ವರ್ಷಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಂಡರ್‌ಪಾಸ್ ಹಾಗೂ ಮೇಲ್ಸೇತುವೆಗಳನ್ನು ನಿರ್ಮಿಸಬೇಕು. ಚುಕ್ಕನಕಲ್ಲು ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಿಂಗಲ್ ವೆಂಟ್ ಬದಲಿಗೆ ಡಬಲ್ ಅಥವಾ ಮಲ್ಟಿಪಲ್ ವೆಂಟ್ ಅಂಡರ್‌ಪಾಸ್‌ಗಳ ಸಾಧ್ಯತೆ ಪರಿಶೀಲಿಸಿ, ಸರ್ವಿಸ್ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ರೈಲ್ವೆ ಹಾಗೂ ಹೆದ್ದಾರಿ ರಸ್ತೆ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ನೀಡಬೇಕಿರುವ ಪರಿಹಾರ ಮೊತ್ತದ ಠೇವಣಿ, ಅವಾರ್ಡ್ ಪಾಸ್ ಪ್ರಕ್ರಿಯೆ ಮತ್ತು ಜೆಎಂಸಿ ಜಂಟಿ ಅಳತೆ ಕಾರ್ಯದಲ್ಲಿ ಉಂಟಾಗಿರುವ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ನಿಯಮಾನುಸಾರ ದಾಖಲೆಗಳನ್ನು ಶೀಘ್ರ ಪರಿಶೀಲಿಸಿ ಬಾಕಿ ಮೊತ್ತವನ್ನು ಪಾವತಿಸಬೇಕು ಎಂದರು. ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಯ ವಿದ್ಯುತ್ ಕಂಬಗಳ ಸ್ಥಳಾಂತರ, ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಹಾಗೂ ಆಯಕಟ್ಟಿನ ಜಾಗಗಳಲ್ಲಿ ಬೀದಿ ದೀಪ ಮತ್ತು ರಸ್ತೆ ಡಿವೈಡರ್ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಮುಕ್ತಾಯಗೊಳಿಸಬೇಕು ಎಂದು ಸಂಬAಧಪಟ್ಟ ಎಂಜಿನಿಯರ್‌ಗಳಿಗೆ ಆದೇಶಿಸಿದರು.
ನ್ಯಾಯಾಲಯ ಹಾಗೂ ಆಡಳಿತಾತ್ಮಕ ಮಟ್ಟದಲ್ಲಿರುವ ವ್ಯಾಜ್ಯಗಳ ಕುರಿತು ಅನಗತ್ಯವಾಗಿ ಕಾಲಹರಣ ಮಾಡದೆ, ತಹಶೀಲ್ದಾರ್ ಹಾಗೂ ಎಸಿ ಮಟ್ಟದಲ್ಲೇ ಕಾನೂನುಬದ್ಧವಾಗಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ವರದಿ ನೀಡುವಂತೆ ನಿರ್ದೇಶನ ನೀಡಿದರು.
ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್.ಹೆಚ್.ಎ.ಐ) ಹಾಗೂ ರೈಲ್ವೆ ಇಲಾಖೆಯ ಕಾಮಗಾರಿಗಳ ಕುರಿತು ಪ್ರಮುಖ ಚರ್ಚೆಗಳು ನಡೆದವು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕೊಪ್ಪಳ ಸಹಾಯಕ ಆಯುಕ್ತರಾದ ಮಹೇಬೂಬ್ ಜೀಲಾನಿ ಖುರೇಶಿ, ಎನ್‌ಹೆಚ್‌ಎಐ ಮತ್ತು ರೈಲ್ವೆ ಇಲಾಖೆಯ ಉನ್ನತ ಮಟ್ಟದ ತಾಂತ್ರಿಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
****